*"ಕನ್ನಡದಲ್ಲೂ ಅವಕಾಶಗಳಿವೆಯೆಂದು ತೋರಿಸಬೇಕು"*ಇಜ್ಞಾನ ಹದಿನೈದರ ಸಂಭ್ರಮದಲ್ಲಿ ಡಾ. ಎ. ಎಂ. ರಮೇಶ್*ತಂತ್ರಾಂಶ ಸಾಧನಗಳ ನೆರವಿನಿಂದ ಸಿದ್ಧಪಡಿಸಿದ ಪುಸ್ತಕ ಲೋಕಾರ್ಪಣೆ
ಬೆಂಗಳೂರು (ಮೇ. 07): "ಇಂಗ್ಲಿಷನ್ನು ಅವಕಾಶಗಳ ಭಾಷೆಯೆಂದು ಕರೆಯುತ್ತಾರೆ. ಕನ್ನಡದಲ್ಲೂ ಅವಕಾಶಗಳನ್ನು ಸೃಷ್ಟಿಸುವುದು, ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ನಮ್ಮ ಜವಾಬ್ದಾರಿ" ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ. ಎಂ. ರಮೇಶ್ ಹೇಳಿದರು. ಸುರಾನ ಕಾಲೇಜಿನಲ್ಲಿ ನಡೆದ ಇಜ್ಞಾನ (Ejnana) ಜಾಲತಾಣದ ಹದಿನೈದನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡದ ವಿಜ್ಞಾನ-ತಂತ್ರಜ್ಞಾನ ಜಾಲತಾಣ 'ಇಜ್ಞಾನ' ನಡೆದು ಬಂದ ದಾರಿಯ ಕುರಿತು ಸಂಪಾದಕ ಟಿ. ಜಿ. ಶ್ರೀನಿಧಿ ಮಾತನಾಡಿದರು. ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಹೇಳುವುದಷ್ಟೇ ಅಲ್ಲ, ವಿಜ್ಞಾನ ಸಂವಹನದಲ್ಲೂ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಇಂಗ್ಲಿಷಿನಲ್ಲಿ ಲಭ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ, ಸರಳ ತಂತ್ರಾಂಶ ಸಾಧನಗಳ ನೆರವಿನಿಂದ ಕನ್ನಡದಲ್ಲಿ ರೂಪಿಸಲಾದ 'ಮೂಲವಸ್ತುಗಳು' ಎಂಬ ಕಿರುಪುಸ್ತಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಇದನ್ನೂ ಓದಿ:ಮಂಗಳನ ನಂತರ ಈಗ ಶುಕ್ರಯಾನಕ್ಕೆ ಇಸ್ರೋ ಸಜ್ಜು!
ಹಿರಿಯ ವಿಜ್ಞಾನ ಸಂವಹನಕಾರ ಕೊಳ್ಳೇಗಾಲ ಶರ್ಮ ಮಾತನಾಡಿ, "ಭಾಷೆ ಎನ್ನುವುದು ವಿಜ್ಞಾನದ ಕಲ್ಪನೆಗಳನ್ನು ಗ್ರಹಿಸಲು ನಮಗೆ ನೆರವಾಗುವ ಮಾಧ್ಯಮ. ವಿಜ್ಞಾನದ ವಿಷಯಗಳನ್ನು ಇಂಗ್ಲಿಷಿನಲ್ಲಿ ಹೇಳಿದಷ್ಟೇ ಪರಿಣಾಮಕಾರಿಯಾಗಿ ನಮ್ಮ ಭಾಷೆಯಲ್ಲೂ ಹೇಳಬಹುದು. ಕನ್ನಡಕ್ಕೆ ವಿಜ್ಞಾನ ಕಲಿಸುವ ಸಾಮರ್ಥ್ಯ ಇದೆ, ಅದನ್ನು ನಾವು ಬಳಸಿಕೊಳ್ಳಬೇಕಿದೆ," ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಡೆದ 'ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಶಿಕ್ಷಣ' ವಿಚಾರ ಸಂಕಿರ್ಣದಲ್ಲಿ ಲೇಖಕ ಟಿ. ಎಸ್. ಗೋಪಾಲ್, ಡಾ. ಎಸ್. ಎಲ್. ಮಂಜುನಾಥ್, ಡಾ. ಎಲ್. ಜಿ. ಮೀರಾ, ಶ್ರೀಮತಿ ಎಂ. ಎಸ್. ಗಾಯತ್ರಿ ಹಾಗೂ ಶ್ರೀ ನಾರಾಯಣ ಬಾಬಾನಗರ ವಿಚಾರ ಮಂಡನೆ ಮಾಡಿದರು.
ಸುರಾನ ಕಾಲೇಜಿನ ಡಾ. ಭವಾನಿ ಎಂ. ಆರ್., ಡಾ. ವತ್ಸಲಾ ಮೋಹನ್, ಡಾ. ಸುಷ್ಮಾ, ಲೇಖಕ ಉದಯ ಶಂಕರ ಪುರಾಣಿಕ, ಇಜ್ಞಾನ ಟ್ರಸ್ಟ್‌ನ ಡಾ. ಎಚ್. ಆರ್. ಅಪ್ಪಣ್ಣಯ್ಯ, ಚೇತನ್ ಗುಪ್ತ, ಅಭಿಷೇಕ್ ಜಿ. ಎಸ್. ಮತ್ತಿತರರು ಉಪಸ್ಥಿತರಿದ್ದರು.
