* 2024ರ ಡಿಸೆಂಬರ್‌ನಲ್ಲಿ ಶುಕ್ರಗ್ರಹಕ್ಕೆ ನೌಕೆ ರವಾನೆ?* ಮಂಗಳನ ನಂತರ ಈಗ ಶುಕ್ರಯಾನಕ್ಕೆ ಇಸ್ರೋ ಸಜ್ಜು!* ಅಮೆರಿಕ, ಯುರೋಪ್‌ಗೆ ಭಾರತದಿಂದ ಪೈಪೋಟಿ

ನವದೆಹಲಿ(ಮೇ.06): ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನದ ನಂತರ ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರಯಾನಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2024ರ ಡಿಸೆಂಬರ್‌ನಲ್ಲಿ ಶುಕ್ರಗ್ರಹಕ್ಕೆ ಇಸ್ರೋದಿಂದ ನೌಕೆಯೊಂದನ್ನು ಹಾರಿಬಿಡುವ ಸಾಧ್ಯತೆಯಿದೆ. ತನ್ಮೂಲಕ ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿರುವ ಅಮೆರಿಕ ಮತ್ತು ಯುರೋಪಿಯನ್‌ ಒಕ್ಕೂಟದ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭಾರತ ಪೈಪೋಟಿ ನೀಡಲು ಮುಂದಾಗಿದೆ.

ಭೂಮಿಯ ಒಂದು ಪಕ್ಕದಲ್ಲಿ ಮಂಗಳ ಗ್ರಹವಿದ್ದರೆ, ಇನ್ನೊಂದು ಪಕ್ಕದಲ್ಲಿ ಶುಕ್ರ ಗ್ರಹವಿದೆ. ಮಂಗಳನ ಅಂಗಳಕ್ಕೆ ಈಗಾಗಲೇ ಇಸ್ರೋ ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿ ಅಧ್ಯಯನ ಕೈಗೊಂಡಿದೆ. ಈಗ ಶುಕ್ರಗ್ರಹಕ್ಕೆ ನೌಕೆ ಕಳುಹಿಸಿ ಅಲ್ಲಿನ ವಾತಾವರಣವನ್ನು ಅಧ್ಯಯನ ನಡೆಸಲು ಮುಂದಾಗಿದೆ. ಶುಕ್ರಗ್ರಹದಲ್ಲಿ ಸಲ್ಫರಿಕ್‌ ಆ್ಯಸಿಡ್‌ನ ಮೋಡಗಳು ಕವಿದಿರುತ್ತವೆ. ಅಲ್ಲಿನ ವಾತಾವರಣ ವಿಷಯುಕ್ತವಾಗಿದೆ ಎಂದು ಹೇಳಲಾಗಿದೆ. ಅದನ್ನೇ ಇನ್ನಷ್ಟುನಿಖರವಾಗಿ ಅರಿಯಲು ಹಾಗೂ ಶುಕ್ರನ ಅಂಗಳದ ಜ್ವಾಲಾಮುಖಿಗಳು, ಲಾವಾರಸ, ಮಣ್ಣು ಇತ್ಯಾದಿಗಳನ್ನು ಅಧ್ಯಯನ ಮಾಡಲು ಇಸ್ರೋದ ಶುಕ್ರಯಾನ ಸಹಾಯ ಮಾಡಲಿದೆ.

ಹಲವಾರು ವರ್ಷಗಳಿಂದ ಸಿದ್ಧತೆ:

ಶುಕ್ರಯಾನ ನಡೆಸುವ ಕುರಿತು ಇಸ್ರೋದಲ್ಲಿ ಈಗಾಗಲೇ ಹಲವಾರು ವರ್ಷಗಳಿಂದ ಸಿದ್ಧತೆ ನಡೆಸಲಾಗುತ್ತಿತ್ತು. ಈಗ ಯೋಜನೆ ಸಿದ್ಧಗೊಂಡಿದೆ. ಈ ಬಗ್ಗೆ ಇಸ್ರೋದ ಚೇರ್ಮನ್‌ ಎಸ್‌.ಸೋಮನಾಥ್‌ ಅಧ್ಯಕ್ಷತೆಯಲ್ಲಿ ಶುಕ್ರಗ್ರಹ ಅಧ್ಯಯನ ತಂಡದ ವಿಜ್ಞಾನಿಗಳ ಜೊತೆ ಇತ್ತೀಚೆಗೆ ಸಭೆ ನಡೆಯಿತು. ಸಭೆಯ ನಂತರ ಸೋಮನಾಥ್‌, ‘ನಾವೀಗ ಶುಕ್ರಗ್ರಹಕ್ಕೆ ನೌಕೆ ಕಳಿಸಲು ಸಿದ್ಧರಾಗಿದ್ದೇವೆ. ಒಟ್ಟಾರೆ ಯೋಜನೆ ಸಿದ್ಧವಿದೆ. ಹಣ ನಿಗದಿಪಡಿಸಿದ್ದಾಗಿದೆ. ಸಾಕಷ್ಟುಕಡಿಮೆ ಸಮಯದಲ್ಲಿ ಶುಕ್ರಯಾನ ನೌಕೆಯನ್ನು ಸಿದ್ಧಪಡಿಸುವ ಶಕ್ತಿ ನಮಗಿದೆ’ ಎಂದು ಹೇಳಿದ್ದಾರೆ.

ಭೂಮಿಯ ಸಮೀಪಕ್ಕೆ ಬಂದಾಗ ನೌಕೆ ಉಡಾವಣೆ:

2024ರ ಡಿಸೆಂಬರ್‌ನಲ್ಲಿ ಶುಕ್ರಗ್ರಹವು ಭೂಮಿಯ ಸಮೀಪದ ಕಕ್ಷೆಗೆ ಬರುತ್ತದೆ. ಆಗ ನೌಕೆಯನ್ನು ಶುಕ್ರಗ್ರಹದ ಕಕ್ಷೆಗೆ ತಳ್ಳುವುದಕ್ಕೆ ಕಡಿಮೆ ಶಕ್ತಿ ಸಾಕಾಗುತ್ತದೆ. ಹೀಗಾಗಿ ಆ ಸಮಯವನ್ನೇ ಶುಕ್ರಯಾನ ನೌಕೆಯ ಉಡಾವಣೆಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಯೋಜಿಸಲಾಗಿದೆ. 2024ನ್ನು ಬಿಟ್ಟರೆ ಮುಂದೆ 2031ರಲ್ಲಿ ಅಂತಹ ಅವಕಾಶ ಸಿಗುತ್ತದೆ. ಆದರೆ, 2024ರ ಡಿಸೆಂಬರ್‌ನಲ್ಲೇ ಶುಕ್ರಯಾನ ಕೈಗೊಳ್ಳುವ ಬಗ್ಗೆ ಇಸ್ರೋ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.

ಅಮೆರಿಕ, ಯುರೋಪ್‌ನಿಂದ ಯೋಜನೆ:

ಅಮೆರಿಕದ ನಾಸಾ ಮತ್ತು ಯುರೋಪಿಯನ್‌ ಯೂನಿಯನ್‌ನ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿವೆ. ಅವುಗಳ ಬೆನ್ನಲ್ಲೇ ಶುಕ್ರನ ಸುತ್ತ ಸುತ್ತುವ ಮೂರನೇ ನೌಕೆ ಭಾರತದ್ದಾಗಿರಲಿದೆ. ಅಮೆರಿಕವು ಶುಕ್ರಯಾನಕ್ಕೆ 1 ಬಿಲಿಯನ್‌ ಡಾಲರ್‌ (ಸುಮಾರು 7500 ಕೋಟಿ ರು.) ಹಣ ಮೀಸಲಿಟ್ಟಿದೆ.