ಒಂದು ಕಾಲವಿತ್ತು. ಜನರು ಎಲ್ಲಾ ವಸ್ತುಗಳನ್ನು ಖರೀದಿಸಲು ತಮ್ಮ ಪಕ್ಕದ ಅಂಗಡಿಗೆ, ಅದರಲ್ಲೂ ಕಿರಾಣಿ ಅಂಗಡಿಗಳಿಗೆ ಧಾವಿಸುತ್ತಿದ್ದರು. ಆದರೆ ಯಾವಾಗ ಇ-ಕಾಮರ್ಸ್‌ ಕ್ಷೇತ್ರ ಬಲಗೊಂಡು ಆನ್‌ಲೈನ್‌ ಶಾಪಿಂಗ್‌ಗಳು ಹೆಚ್ಚತೊಡಗಿದವೋ ಕಿರಾಣಿ ಅಂಗಡಿಗಳಿಗೆ ಪೆಟ್ಟು ಬಿತ್ತು. ಆದರೆ ಕಾಲ ಬದಲಾಗುತ್ತಲೇ ಇರುತ್ತದೆ. ಮತ್ತೆ ಕಿರಾಣಿ ಅಂಗಡಿಗಳಿಗೆ ಜನ ಧಾವಿಸುವ ಕಾಲ ಬಂದಾಗಿದೆ. ಇ-ಕಾಮರ್ಸ್‌ ಕ್ಷೇತ್ರದಲ್ಲಿ ಹೊಸ ಹೊಸ ನೀತಿಗಳು ಜಾರಿಗೆ ಬಂದಿದೆ. ಈ ನೀತಿಗಳಿಂದಾಗಿ ಇ- ಕಾಮರ್ಸ್‌ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಕೋಟ್ಯಂತರ ವೆಚ್ಚ ಮಾಡುವ ಹಾಗಿಲ್ಲ. ಅಲ್ಲದೇ ಭಾರಿ ರಿಯಾಯಿತಿ ನೀಡುವ ಹಾಗೂ ಇಲ್ಲ. ಇದರಿಂದ ಇ-ಕಾಮರ್ಸ್‌ ಕ್ಷೇತ್ರಕ್ಕೆ ಹಿನ್ನಡೆಯಾಗುವುದು ನಿಶ್ಚಿತ.

ಇತ್ತೀಚಿನ ವರ್ಷಗಳಲ್ಲಿ, ಆನ್‌ಲೈನ್‌ ರಿಟೇಲರ್‌ಗಳಿಗೆ ಗ್ರಾಹಕರನ್ನು ಗಳಿಸಿಕೊಳ್ಳುವುದು ಸ್ವಲ್ಪ ದುಬಾರಿಯಾಗಿದೆ. ಹೆಚ್ಚು ಹಣ ವ್ಯಯ ಮಾಡಬೇಕಾಗಿ ಬಂದಿದೆ. ಇದರಿಂದ ಅವರಿಗೆ ನಷ್ಟಉಂಟಾಗುತ್ತಿದೆ. ಇ-ಕಾಮರ್ಸ್‌ ಕ್ಷೇತ್ರದಲ್ಲಿನ ಹೊಸ ನೀತಿಯಿಂದಾಗಿ ಈ ಸಂಸ್ಥೆಗಳು ಇದೀಗ ತಮ್ಮ ಕಾರ್ಯವಿಧಾನವನ್ನು ಬದಲಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಈ ರೀತಿಯ ಬದಲಾವಣೆಯಿಂದ ಮಾತ್ರ ಈ ಕ್ಷೇತ್ರದಲ್ಲಿನ ಕಂಪನಿಗಳು ಸುಸ್ಥಿರ ಮತ್ತು ಲಾಭಯುತವಾದ ಬೆಳೆಯಲು ಸಾಧ್ಯ. ಈ ಬೆಳವಣಿಗೆ ಕಿರಾಣಿ ಅಂಗಡಿಗಳನ್ನು ಕೈ ಹಿಡಿದು ಮುನ್ನಡೆಸಲಿದೆ. ರಿಯಾಯಿತಿ ದರದಲ್ಲಿ ಉತ್ಪನ್ನಗಳು ಸಿಗುತ್ತದೆ ಎಂಬ ಕಾರಣಕ್ಕೆ ಆನ್‌ಲೈನ್‌ಗೆ ಹೋಗಿದ್ದ ಗ್ರಾಹಕರು ಮತ್ತೆ ಕಿರಾಣಿ ಅಂಗಡಿಗಳ ಕಡೆಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೀತಿಯು ಕಿರಾಣಿ ಅಂಗಡಿ ಸ್ನೇಹಿಯಾಗಿದೆ ಮತ್ತು ಕಿರಾಣಿ ವ್ಯಾಪಾರದಲ್ಲಿ ಸ್ಪರ್ಧಾತ್ಮಕ ವಾತಾವರಣವನ್ನು ನಿರ್ಮಿಸಲಿದೆ.

12000 ಕಿರಾಣಿ ಅಂಗಡಿಗಳು:

ಇಂಟರೆಸ್ಟಿಂಗ್‌ ಅಂದ್ರೆ ಭಾರತದಲ್ಲಿ ಸುಮಾರು 12 ದಶಲಕ್ಷ ಕಿರಾಣಿ ಅಂಗಡಿಗಳಿವೆ. ನಮ್ಮ ದೇಶದಲ್ಲಿ ಕೃಷಿಯ ನಂತರದ ಅತಿ ದೊಡ್ಡ ಕ್ಷೇತ್ರ ಇದೆ. ಉದ್ಯೋಗ ನೀಡುವುದರಲ್ಲಿ ಆಗಿರಬಹುದು, ಲೋಕಲ್‌ ಬಿಸಿನೆಸ್‌ಗಳಿಗೆ ಉತ್ತಮ ಸಹಕಾರ ನೀಡುವುದರಲ್ಲಾಗಿರಬಹುದು ಎಲ್ಲದರಲೂ ಈ ಕ್ಷೇತ್ರ ಮುಂದೆ ಇದೆ. ಇದರಲ್ಲಿ ಕೆಲವು ಕಿರಾಣಿ ಅಂಗಡಿಗಳಿಗೆ ಪರಂಪರೆ ಇದಗೆ. ಕೆಲವು ಕುಟುಂಬಗಳು ತಲೆತಲಾಂತರಗಳಿಂದ ಅದೇ ಕಿರಾಣಿ ಅಂಗಡಿಗಳಲ್ಲಿ ಉತ್ಪನ್ನಗಳನ್ನು ಖರೀದಿಸುತ್ತಾ ಬಂದಿವೆ. ಆನ್‌ಲೈನ್‌ ಕ್ಷೇತ್ರ ಬಲವಾದಾಗಾನಿಂದ ಈ ಕಿರಾಣಿ ಅಂಗಡಿಗಳು ಸೋತು ಹೋಗಿವೆ. ಸೂಪರ್‌ ಮಾರ್ಕೆಟ್‌ಗಳು, ಈ-ಕಾಮರ್ಸ್‌ ಸಂಸ್ಥೆಗಳು ಇತ್ಯಾದಿಗಳ ಜೊತೆ ಕಿರಾಣಿ ಅಂಗಡಿಗಳದು ನಿರಂತರ ಹೋರಾಟ. ಹಾಗಿದ್ದರೂ ಕಿರಾಣಿ ಅಂಗಡಿಗಳು ತನ್ನ ಅಸ್ತಿತ್ವ ಉಳಿಸಿಕೊಂಡಿದೆ.

ಅದು ಹೇಗೆ ಸಾಧ್ಯ ಆಯಿತು ಎಂದರೆ ಭಾರತದ ಜನರು ಇನ್ನೂ ತಮ್ಮ ದಿನನಿತ್ಯದ ಬಳಕೆ ವಸ್ತುಗಳನ್ನು ಖರೀದಿಸಲು ಕಿರಾಣಿ ಅಂಗಡಿಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ಮನೆ ಪಕ್ಕದ ಅಂಗಡಿಯವರಿಗೆ ಹೇಳಿದರೆ ಒಂದೇ ಗಂಟೆಯಲ್ಲಿ ತಮಗೆ ಬೇಕಾದ ವಸ್ತುಗಳನ್ನು ತಮ್ಮ ಹುಡುಗನ ಕೈಯಲ್ಲಿ ಕಳುಹಿಸಿಕೊಡುತ್ತಾರೆ. ಪರಿಚಯದ ಮನೆಯವರಿಗೆ ಸಾಲ ವ್ಯವಸ್ಥೆ ಕೂಡ ಇರುತ್ತದೆ. ತಮ್ಮ ಊರಿನ ಜನರಿಗೆ ಏನು ಬೇಕು, ಎಷ್ಟುಉತ್ಪನ್ನ ಬೇಕು, ಅವರ ಅವಶ್ಯಕತೆ ಏನು ಅನ್ನುವುದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮನೆ ಪಕ್ಕದ ಅಂಗಡಿಯವರನ್ನು ಸೋಲಿಸಲು ಸಾಧ್ಯವೇ ಇಲ್ಲ. ಅವರ ಅನುಭವ ಎಲ್ಲವನ್ನೂ ಕಲಿಸಿರುತ್ತದೆ. ಹಾಗಾಗಿ ಗ್ರಾಹಕರು ಟೆನ್ಷನ್ನೇ ಇಲ್ಲದೆ ಆ ಅಂಗಡಿಗಳಲ್ಲಿ ಖರೀದಿಸಬಹುದು. ಕಿರಾಣಿ ಅಂಗಡಿಗಳ ತಾಕತ್ತು ಏನು ಎಂದರೆ ಅದರ ಬಿಸಿನೆಸ್‌ ಮಾಡೆಲ್‌. ಒಂದು ಸಣ್ಣ ಜಾಗದಲ್ಲಿ ಅತಿ ಕಡಿಮೆ ವಸ್ತುಗಳನ್ನು ದಾಸ್ತಾನು ಇಟ್ಟುಕೊಂಡು ಕಡಿಮೆ ದುಡ್ಡಲ್ಲಿ ಕಿರಾಣಿ ಅಂಗಡಿ ಆರಂಭಿಸಬಹುದು. ಆದರೆ ದೊಡ್ಡ ಸೂಪರ್‌ ಮಾರ್ಕೆಟ್‌ಗಳಿಗೆ ಅದು ಕಷ್ಟ. ಅವರು ದೊಡ್ಡ ಮಟ್ಟದ ಹೂಡಿಕೆ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಈ 5 ಉಪಗ್ರಹಗಳಿಂದಾಗಿ ‘ಫನಿ’ ಹಾನಿ ತಗ್ಗಿತು

ಡಿಜಿಟಲೀಕರಣ ಆಗಬೇಕು:

ಕಿರಾಣಿ ಅಂಗಡಿಗಳು ಉದ್ಯಮಶೀಲತೆ ಸಂಸ್ಕೃತಿಯನ್ನು ಬೆಳೆಸುತ್ತವೆ ಮತ್ತು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತವೆ. ಹಾಗಾಗಿ ಆ ಅಂಗಡಿಗಳನ್ನು ಬೆಳೆಸಬೇಕು, ಅವರ ಸಾಂಪ್ರದಾಯಿಕ ಮಾರಾಟ ವ್ಯವಸ್ಥೆಯನ್ನು ಆಧುನಿಕಗೊಳಿಸಬೇಕು. ಅಂಗಡಿ ಮಾಲೀಕರಿಗೆ, ಕೆಲಸಗಾರರಿಗೆ ಅಂಗಡಿಯನ್ನು ಹೇಗೆ ಇಟ್ಟುಕೊಳ್ಳಬೇಕು, ಎಲ್ಲಿ ಯಾವ ಉತ್ಪನ್ನ ಇಡಬೇಕು ಎಂಬಿತ್ಯಾದಿ ತರಬೇತಿ ನೀಡಿದರೆ ಅವರ ಉದ್ಯಮದ ಲಾಭ ಹೆಚ್ಚಳವಾಗುತ್ತದೆ.

ಕಿರಾಣಿ ಅಂಗಡಿಗಳನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಬೇಕಾದರೆ ಕೆಲವು ಐಡಿಯಾಗಳಿವೆ. ಅದರಲ್ಲಿ ಒಂದು ಡಿಜಿಟಲೀಕರಣ. ಇನ್ನೊಂದು ಆಧುನೀಕರಣ. ಅಂಗಡಿಗಳನ್ನು ಬೇರೆ ಥರ ಸಜ್ಜುಗೊಳಿಸಬೇಕು. ಪಿಓಎಸ್‌(ಪಾಯಿಂಟ್‌ ಆಫ್‌ ಸೇಲ್‌) ಬಿಲ್ಲಿಂಗ್‌ ವ್ಯವಸ್ಥೆ ತರಬೇಕು. ಜತೆಗೆ ಆ್ಯಪ್‌ ಮೂಲಕ ಬಿಲ್‌ ಪಾವತಿ ಮಾಡುವ ವ್ಯವಸ್ಥೆ ತರಬೇಕು. ಕೆಲವು ವಸ್ತುಗಳಿಗೆ ರಿಯಾಯಿತಿ ನೀಡಿ ಗ್ರಾಹಕರನ್ನು ಉಳಿಸಿಕೊಳ್ಳಬೇಕು. ಪಿಓಸ್‌ ಸಿಸ್ಟಂ ತರುವುದರಿಂದ ಎಷ್ಟುಸೇಲ್‌ ಆಯಿತು, ಎಷ್ಟುಸ್ಟಾಕ್‌ ಇದೆ, ಎಷ್ಟುವಹಿವಾಟು ಆಯಿತು ಎಂಬೆಲ್ಲಾ ಮಾಹಿತಿ ಕರೆಕ್ಟಾಗಿ ಸಿಗುತ್ತದೆ. ಡಿಜಿಟಲೀಕರಣ ಮಾಡಿದರೆ ಈ ಅಂಗಡಿಗಳ ಸ್ವರೂಪವೇ ಬದಲಾಗಲಿದೆ.

ಆದರೆ ತಂತ್ರಜ್ಞಾನ ಎಷ್ಟೇ ಬೆಳೆದರೂ ಎಷ್ಟೇ ಮುಂದುವರಿದರೂ ನಾವು ಗ್ರಾಹಕರು ವ್ಯಾಪಾರದಲ್ಲಿ ಮಾನವೀಯ ಸ್ಪರ್ಶ ಬಯಸುತ್ತೇವೆ. ಕಿರಾಣಿ ಅಂಗಡಿಗಳ ವಿಶೇಷತೆ ಮತ್ತು ಶಕ್ತಿಯೇ ಅದು. ಇಲ್ಲಿ ಗ್ರಾಹಕರು ಮತ್ತು ಮಾರಾಟಗಾರರ ಮಧ್ಯೆ ನಂಬಿಕೆ ಇರುತ್ತದೆ. ಸಂಬಂಧ ಇರುತ್ತದೆ. ಈ ಸಂಬಂಧವೇ ಬೇರೆಲ್ಲಾ ವ್ಯವಸ್ಥೆಗಳಿಗಿಂತ ಈ ಕಿರಾಣಿ ಅಂಗಡಿಯನ್ನು ವಿಭಿನ್ನವಾಗಿ ಇರಿಸುತ್ತದೆ. ಸರ್ಕಾರ ಇಂಥಾ ಕಿರಾಣಿ ಅಂಗಡಿಗಳಿಗೆ ಪ್ರೋತ್ಸಾಹಿಸಬೇಕು. ಬೆಂಬಲಿಸಬೇಕು. ಆಧುನೀಕರಣಗೊಳಿಸಿ ಡಿಜಿಟಲೀಕರಣಗೊಳಿಸಲು ಸಹಕರಿಸಬೇಕು. ಮುಂದಿನ ದಿನಗಳಲ್ಲಿ, ಈ ಕಿರಾಣಿ ಅಂಗಡಿಗಳು ಹೆಚ್ಚು ಹೆಚ್ಚು ಬದಲಾವಣೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಅವರ ಬದಲಾವಣೆಯೇ ಅವರಿಗೆ ಲಾಭ ತಂದುಕೊಡಲಿದೆ. ಭಾರತದ ಭವಿಷ್ಯ ಅಡಗಿರುವುದು ಉದ್ಯಮಗಳಲ್ಲಿ ಮತ್ತು ಇಂಥಾ ಕಿರಾಣಿ ಅಂಗಡಿಗಳಲ್ಲಿ. ಇವು ಮುಂದಿನ ದಶಕಗಳವರೆಗೂ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲಿದೆ.

- ಅರವಿಂದ್‌ ಮೆಡಿರಟ್ಟಾ

ಎಂಡಿ ಮತ್ತು ಸಿಇಒ, ಮೆಟ್ರೋ ಕ್ಯಾಶ್‌ ಆಂಡ್‌ ಕ್ಯಾರಿ ಇಂಡಿಯಾ