Cyber Fraud: ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ಸ್‌ ಸರ್ಚ್ ಮಾಡ್ತೀರಾ? ಹಾಗಿದ್ರೆ ಹುಷಾರ್!

ಬ್ಯಾಂಕ್ ಖಾತೆಗಳಿಂದ ಹಣ ದೋಚಲು ನಕಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್‌ಗಳು ಗೂಗಲ್ ಸರ್ಚ್‌ನಲ್ಲಿ ಮೊದಲು ಬರುವಂತೆ ವಂಚಕರು ನೋಡಿಕೊಳ್ಳುತಿದ್ದಾರೆ

Cyber Fraud Beware of fake Helpline customer care numbers you find on Google Search mnj

ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಮಾ. 19): ನೀವೇನಾದರೂ ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ಸ್‌ಗಳಿಗೆ (Helpline Number) ಸರ್ಚ್ ಮಾಡ್ತೀರಾ? ಮಾಡ್ತೀರಿ ಅಂದ್ರೆ ಇನ್ಮುಂದೆ ಹೆಚ್ಚು ಅಲರ್ಟ್ ಆಗಿರೋದು ಒಳ್ಳೆದು. ಯಾಕಂದ್ರೆ ಸೈಬರ್ ವಂಚಕರು ಗೂಗಲ್‌ನಲ್ಲೇ ಫೇಕ್ ಹೆಲ್ಪ್ ಲೈನ್ ನಂಬರ್ ಹಾಕಿ ಹಣ ದೋಚಲು ಶುರು ಮಾಡಿಕೊಂಡಿದ್ದಾರೆ.  ಗೂಗಲ್‌ನಲ್ಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡುವ ಮೊದಲು ಹತ್ತು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಯಾಕೆಂದರೆ ಸೈಬರ್ ವಲ್ಚರ್‌ಗಳು ಬ್ಯಾಂಕ್ ಖಾತೆಗಳಿಂದ ಹಣ ದೋಚಲು ನಕಲಿ ಹೆಲ್ಪ್ ಲೈನ್, ಕಸ್ಟಮರ್ ಕೇರ್ ನಂಬರ್‌ಗಳು ಗೂಗಲ್ ಸರ್ಚ್‌ನಲ್ಲಿ ಮೊದಲು ಬರುವಂತೆ ನೋಡಿಕೊಳ್ಳುತಿದ್ದಾರೆ. ಆನ್‌ಲೈನ್‌ನಲ್ಲಿ ಖರೀದಿ ಅಥವಾ ಹಣ ಪಾವತಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆ ಸಂದೇಹ ಎದುರಾದಾಗ ಅಥವಾ ಕ್ರೆಡಿಟ್, ಡೆಬಿಟ್ ಕಾರ್ಡ್ ಸೇರಿದಂತೆ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಹೀಗೆ ಹಲವಾರು ಸಂದರ್ಭಗಳಲ್ಲಿ ಹೆಲ್ಪ್‌ಲೈನ್, ಕಸ್ಟಮರ್‌ ಕೇರ್‌ಗೆ ಗ್ರಾಹಕರು ಮೊರೆಹೋಗುವುದು ಸಹಜ. ಆದರೆ ಇದನ್ನೇ ಸೈಬರ್ ವಲ್ಚರ್‌ಗಳು ಹಣ ದೋಚುವ ದಾರಿಯಾಗಿಸಿದ್ದಾರೆ.

ಇದನ್ನೂ ಓದಿ:  ಆನ್ ಲೈನ್ ಮಾಯಾಂಗನೆ ವಿಡಿಯೋ ಚಾಟಿಂಗ್ ಮೋಹ, ಲಕ್ಷ ಲಕ್ಷ ಕಳಕೊಂಡ ಚಿಕ್ಕಮಗಳೂರು ಟೆಕ್ಕಿ!

ಮಂಗಳೂರಿನಲ್ಲಿ ದಾಖಲಾಗಿದೆ ಪ್ರಕರಣ!:  ಗೂಗಲ್ ಸರ್ಚ್ ಕೊಟ್ಟ ಕೂಡಲೇ ಅಸಲಿಯಂತೆ ಕಾಣುವ ನಕಲಿ ಹೆಲ್ಪ್‌ಲೈನ್, ಕಸ್ಟಮರ್ ಕೇರ್ ಸಂಖ್ಯೆಗಳು ಕಂಪ್ಯೂಟರ್ ಪರದೆ ಮೇಲೆ ಬರುವಂತೆ ಈ ಸೈಬರ್ ವಂಚಕರು ಮಾಡುತ್ತಿದ್ದಾರೆ. ಆ ಸಂಖ್ಯೆಯನ್ನು ಪಡೆದು ಗ್ರಾಹಕರು ಕರೆ ಮಾಡಿ ಮಾಹಿತಿಗಳನ್ನು ನೀಡುತ್ತಾ ಹೋದರೆ ಖಾತೆಯಲ್ಲಿರುವ ಹಣ ಸೈಬರ್ ವಲ್ಚರ್‌ಗಳಿಗೆ ಹೋಗುತ್ತದೆ. ಈ ರೀತಿ ಹಣ ಕಳೆದುಕೊಂಡ 2 ಪ್ರಕರಣಗಳು ಮಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿವೆ. 

2 ಕ್ರೆಡಿಟ್ ಕಾರ್ಡ್ (Credit Card) ಹೊಂದಿರುವ ಮಂಗಳೂರಿನ ವ್ಯಕ್ತಿಯೊಬ್ಬರು ಒಂದನ್ನು ಬ್ಲಾಕ್ ಮಾಡುವ ಉದ್ದೇಶದಿಂದ ಗೂಗಲ್‌ನಲ್ಲಿ ಆ ಬ್ಯಾಂಕ್‌ನ ಕಸ್ಟಮರ್ ಕೇರ್ ನಂಬರ್‌ನ್ನು ಹುಡುಕಿ ಕರೆ ಮಾಡಿದ್ದರು. ಕರೆ ಸ್ವೀಕರಿಸಿದಾತ 'ಎನಿ ಡೆಸ್ಕ್ ಆ್ಯಪ್'  ಡೌನ್ ಲೋಡ್ ಮಾಡುವಂತೆ ತಿಳಿಸಿದ್ದ. ಬಳಿಕ ಕ್ರೆಡಿಟ್ ಕಾರ್ಡ್ ನಂಬರ್ ಪಿನ್ ವಿವರ ಹಾಕುವಂತೆ ತಿಳಿಸಿದ್ದ. ವಿವರ ಹಾಕುವಷ್ಟರಲ್ಲೇ  ಖಾತೆಯಿಂದ 1.92 ಲಕ್ಷ ರೂಪಾಯಿ ಮಂಗಮಾಯವಾಗಿತ್ತು. 

ಈ ರೀತಿಯ ಹಲವಾರು ಪ್ರಕರಣಗಳು ನಡೆದಿದ್ದರೂ ಹೆಚ್ಚಿನ ಜನರು ಪ್ರಕರಣ ದಾಖಲಿಸಿಲ್ಲ. ಕಷ್ಟದಲ್ಲಿರುವವರ ಆತಂಕ ಗೊಂದಲಗಳನ್ನೇ ಈ ಸೈಬರ್ ವಂಚಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಲ್ಪ್ ಲೈನ್ ಅಥವಾ ಕಸ್ಟಮರ್ ಕೇರ್ ನಂಬರ್ ಗಳಿಗೆ ಕಾಲ್ ಮಾಡುವ ಮೊದಲು ತುಂಬಾ ಜಾಗರೂಕರಾಗಿ ಇರಬೇಕಾದ ಅವಶ್ಯಕತೆ ಇದೆ.

ಇದನ್ನೂ ಓದಿDating Scams : ಸಂಗಾತಿ ಹುಡುಕುವ ಆತುರದಲ್ಲಿ ಯಡವಟ್ಟು ಮಾಡ್ಕೊಳ್ಬೇಡಿ

ಗೂಗಲ್‌ನಲ್ಲಿ ಹೆಲ್ಪ್ ಲೈನ್ ನಂಬರ್ ಹುಡುಕಿ ಕರೆ ಮಾಡುವ ಮೊದಲು ಜಾಗರೂಕರಾಗಿರಬೇಕಾದ ಅಗತ್ಯವಿದೆ. ಸೈಬರ್ ವಂಚಕರು‌ ನಕಲಿ ನಂಬರ್ ಸೃಷ್ಟಿಸಿ ವಂಚಿಸುತ್ತಿದ್ದಾರೆ. ಮಂಗಳೂರಿನಲ್ಲೂ ವಂಚನೆಗೆ ಒಳಗಾದವರು ದೂರು ದಾಖಲಿಸಿದ್ದಾರೆ. - ಹರಿರಾಂ ಶಂಕರ್, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಮಂಗಳೂರು

ಡಿಜಿಟಲ್‌ ಮಾರುಕಟ್ಟೆ ಅಭಿವೃದ್ಧಿ ಆದಂತೆ ಆನ್‌ಲೈನ್‌ನಲ್ಲಿ ಹ್ಯಾಕರರ್‌ಗಳು, ವಂಚಕರು ಪ್ರತೀ ದಿನ ಮೋಸಕ್ಕೆ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ. ಜನರ ಹಣ ದೋಚಲು ಸುಳ್ಳು ಹೆಸರಲ್ಲಿ ಲಿಂಕ್ ಕಳುಹಿಸುವುದು, ಬಹುಮಾನ ಸಿಕ್ಕಿದೆ ಎಂದು ಮೋಸ ಮಾಡುವುದು ಇತ್ಯಾದಿ ತಂತ್ರಗಳನ್ನು ವಂಚಕರು ಬಳಸುತ್ತಿದ್ದಾರೆ. ಹೀಗಾಗಿ ಇಂಥಹ ಲಿಂಕ್‌ ಅಥವಾ ಕರೆಗಳ ಮೂಲಕ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸುವ ಮುನ್ನ ಎರಡು ಬಾರಿ ಯೋಚಿಸಿವುದು ಒಳಿತು. 

Latest Videos
Follow Us:
Download App:
  • android
  • ios