ಲಾಕ್‌ಡೌನ್ ಸಂದಿಗ್ಧ: ಕಾರ್ಕಳದಲ್ಲೊಂದು ‘ಆನ್‌ಲೈನ್ ಶ್ರಾದ್ಧ’!
ಲಾಕ್‌ಡೌನ್ ಸಂದಿಗ್ಧ: ಕಾರ್ಕಳದಲ್ಲೊಂದು ‘ಆನ್‌ಲೈನ್ ಶ್ರಾದ್ಧ’! ಮಸ್ಕತ್‌ನಲ್ಲಿರುವ ವ್ಯಕ್ತಿಯ ತಂದೆಯ ತಿಥಿ ಕರ್ಮಗಳಿಗೆ ಕಾರ್ಕಳದ ಪುರೋಹಿತರಿಂದ ವಿಡಿಯೋ ಕಾಲ್ ಮಾರ್ಗದರ್ಶನ/ ಕೊರೋನಾ ಕಾರಣಕ್ಕೆ ಈ ಕಾರ್ಯ ಅನಿವಾರ್ಯ
ಬಿ. ಸಂಪತ್ ನಾಯಕ್
ಕಾರ್ಕಳ(ಮೇ 24) ಸರ್ಕಾರ ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ಆಯ್ದ ದೇವಸ್ಥಾನಗಳಲ್ಲಿ ಆನ್‌ಲೈನ್ ಪೂಜಾ ವ್ಯವಸ್ಥೆ ಮಾಡುವ ಬಗ್ಗೆ ಪ್ರಸ್ತಾಪಿಸಿದ ಬೆನ್ನಲ್ಲೇ, ಕಾರ್ಕಳದಲ್ಲೊಬ್ಬರು ಆನ್ ಲೈನ್ ಶ್ರಾದ್ಧವನ್ನು ಮಾಡಿ ಮುಗಿಸಿದ್ದಾರೆ.
ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿ. ಈ ವಿಷಮ ಪರಿಸ್ಥಿತಿಯಲ್ಲಿ, ಸತ್ತವರಿಗೆ ತಿಥಿ ಕಾರ್ಯವೂ ನಡೆಯಬೇಕು, ಅದರ ಜೊತೆಗೆ ಲಾಕ್‌ಡೌನ್ ನಿಯಮವೂ ಪಾಲನೆಯಾಗಬೇಕು. ಇಂತಹ ಧರ್ಮ ಸಂಕಟದಲ್ಲಿ ವಿದೇಶದಲ್ಲಿ ಸಿಲುಕಿದ ಉಡುಪಿ ಕುಟುಂಬವೊಂದು ಪುರೋಹಿತರ ಜೊತೆ ನೇರ ಸಂಪರ್ಕದಲ್ಲಿದ್ದು, ಅವರ ಸಲಹೆಯಂತೆ ಆನ್ ಲೈನ್ ವೀಡಿಯೋ ಮೂಲಕ ಈ ಬಾರಿ ಶ್ರಾದ್ಧ ಕಾರ್ಯವನ್ನು ನೇರವೇರಿಸಿದೆ.
ಜಾತ್ರೆ, ಯಕ್ಷಗಾನದ ಸದ್ದಿಲ್ಲ, ಆನ್ ಲೈನ್ ಜಾತ್ರೆ ಇದೆಯಲ್ಲ
ಕಾರ್ಕಳ ಕಸಬಾ ಗ್ರಾಮದ ಮಲ್ಲಿಗೆ ಓಣಿಯ ನಿವಾಸಿ 35 ವರ್ಷಗಳ ಪೌರೋಹಿತ್ಯದ ಅನುಭವವಿರುವ ಸುರೇಂದ್ರ ಭಟ್ (56 ) ಎಂಬುವರು ಮಸ್ಕತ್‌ನಲ್ಲಿರುವ ಸಚಿತ್ ಕಾಮತ್ ಅವರ ತಂದೆಯ ವಾರ್ಷಿಕ ಶ್ರಾದ್ಧವನ್ನು ವಾಟ್ಸಪ್ ಲೈವ್ ವಿಡಿಯೋ ಕರೆ ಮೂಲಕ ಮಾಡಿ ಮುಗಿಸಿದ್ದಾರೆ. ಮಾತ್ರವಲ್ಲದೆ, ಇತ್ತೀಚಿಗೆ ನಿಧನರಾದ ಶಾಂತಾ ನಾಗೇಶ್ ಪೈ ಎಂಬುವರ ಮಗ ಮುಂಬೈಯಲ್ಲಿದ್ದು, ಊರಿಗೆ ಅಗಮಿಸಲಾಗದ ಹಿನ್ನೆಲೆಯಲ್ಲಿ ಇದೇ ರೀತಿ ಆನ್‌ಲೈನ್ ಲೈವ್ ವೀಡಿಯೋ ಮೂಲಕ ಮಗನಿಗೆ ತಾಯಿಯ ಶವಸಂಸ್ಕಾರದ ವೀಡಿಯೋ ಹಾಗೂ ಒಂಭತ್ತನೇ ದಿನದ ಕ್ರಿಯೆಯನ್ನೂ ಆನ್ ಲೈನ್‌ನಲ್ಲಿ ನೇರವೇರಿಸಿಕೊಟ್ಟಿದ್ದಾರೆ.
ಶ್ರಾದ್ಧಕ್ಕೆ ಬೇಕಾದ ತಯಾರಿಯನ್ನು ಮುಂಚಿತವಾಗಿ ಕುಟುಂಬದ ಸದಸ್ಯರಿಗೆ ತಿಳಿಸಿದ್ದೆವು. ಅವರು ಮಸ್ಕತ್‌ನಲ್ಲಿ ಕುಳಿತು ಎಲ್ಲಾ ತರದ ಸಿದ್ಧತೆ ನಡೆಸಿ, ನೀಡಿದ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದಾರೆ. ಬಳಿಕ ವಾಟ್ಸ್ಯಾಪ್ ವೀಡಿಯೋ ಕಾಲ್ ಮೂಲಕ ಎಲ್ಲಾ ಚಟುವಟಿಕೆಗಳನ್ನು ತೋರಿಸುವುದರ ಜೊತೆಗೆ ಪ್ರತಿಯೊಂದನ್ನು ಕ್ರಮ ಬದ್ಧವಾಗಿ ಹಾಗೂ ಧಾರ್ಮಿಕವಾಗಿ ನಡೆಸಿಕೊಟ್ಟಿದ್ದೇನೆ ಎಂದು ಪುರೋಹಿತರಾ ಸುರೇಂದ್ರ ಭಟ್ ಹೇಳುತ್ತಾರೆ.