-ಕೃಷ್ಣಮೋಹನ ತಲೆಂಗಳ.

ಲಾಕ್ ಡೌನ್ ಆವರಿಸಿದ ಮೇಲೆ ಜನರಿಗೆ ವಾರ ಬಿಡಿ ತಾರೀಕೂ ಸರಿಯಾಗಿ ನೆನಪಾಗ್ತಾ ಇಲ್ಲ. ಯಾಕೆಂದರೆ ವಾರ ವ್ಯತ್ಯಾಸವಾದರೂ ಬದುಕು ವ್ಯತ್ಯಾಸವಾಗುತ್ತಿಲ್ಲ. ಭಾನುವಾರಕ್ಕೂ, ಸೋಮವಾರಕ್ಕೂ ವ್ಯತ್ಯಾಸವೇ ಇಲ್ಲದ ಮೇಲೆ, ವಾಹನ ಸಂಚಾರ, ಡ್ಯೂಟಿ, ಟಿ.ವಿ. ಕಾರ್ಯಕ್ರಮ ಯಾವುದರಲ್ಲೂ ಭಾನುವಾರದ ಛಾಯೆ ಕಾಣದ ಮೇಲೆ ಭಾನುವಾರವನ್ನು ಭಾನುವಾರವೆಂದೂ ಯಾಕಾದರೂ ನೆನಪಿಟ್ಟುಕೊಳ್ಳಬೇಕು... ಅಲ್ವೇ...

ಈ ಏಪ್ರಿಲ್, ಮೇ ಇಡೀ ವಿಶ್ವಕ್ಕೇ ಬೇಸಿಗೆ ರಜೆ ಘೋಷಿಸಿದೆ. ಪರೀಕ್ಷೆಯ ವಿಚಿತ್ರ ಆತಂಕಕ್ಕೆ ಅರ್ಧದಲ್ಲೇ ತಡೆ ಹಾಕಿದೆ, ಲಾಕ್ ಡೌನ್ ಮೊದಲೇ ಗಂಟು ಮೂಟೆ ಕಟ್ಟಿಕೊಂಡು ಹಳ್ಳಿಗಳಿಗೆ ತೆರಳಿದವರಿಗೆ ಅಜ್ಜನ ಮನೆ, ನೆಂಟರ ಮನೆಯ ವಾಸ ಮಾರ್ಚಿನಲ್ಲೇ ಶುರುವಾಗಿದೆ. ಪೇಟೆಯಲ್ಲಿ ಬಾಕಿ ಆದವರಿಗೆ ಸಮಯವೆಂಬುದು ಎಷ್ಟು ಸುದೀರ್ಘ ಅಲ್ಲವೇ ಎಂಬುದನ್ನು ಲಾಕ್ ಡೌನ್ ಕಲಿಸಿಕೊಟ್ಟಿದೆ.

ಕೊರೋನಾದಿಂದ ಗುಣಮುಖರಾದ ವ್ಯಕ್ತಿಯ ಅನುಭವಗಳಿವು

ಅಂದ ಹಾಗೆ,
ಕರಾವಳಿಯೂ ಸೇರಿದಂತೆ ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ನಡೆಯುವ ಸಾಲು ಸಾಲು ಜಾತ್ರೆಗಳು, ರಥೋತ್ಸವಗಳು, ಭೂತಕೋಲ, ಬ್ರಹ್ಮಕಲಶೋತ್ಸವ ವಾರ್ಷಿಕೋತ್ಸವ ಇತ್ಯಾದಿ ಇತ್ಯಾದಿ ಯಾವುದೂ ಈ ಬಾರಿ ಇಲ್ಲ. ಮೇ ಮೂರನೇ ವಾರದ ವರೆಗೆ ಕರಾವಳಿಯ ಸುಮಾರು 2000ಕ್ಕೂ ಅಧಿಕ ಕಲಾವಿದರು ದುಡಿಯುವ ಯಕ್ಷಗಾನ ತಂಡಗಳ ತಿರುಗಾಟ ಮಾರ್ಚಿನಲ್ಲಿ ನಿಂತು ಹೋಗಿದೆ. ಹವ್ಯಾಸಿ ಕಲಾವಿದರ ಕೂಟಗಳನ್ನು ನಡೆಸಲು ಅವಕಾಶವೇ ಇಲ್ಲ. ಕೆಲವು ದೇವಸ್ಥಾನಗಳಲ್ಲಿ ಪರಂಪರೆಗೆ ಚ್ಯುತಿ ಬಾರದ ಹಾಗೆ ದೇವಳದ ಪ್ರಾಂಗಣದಲ್ಲೇ ಚುಟುಕಾಗಿ ಪುರೋಹಿತರ ನೇತೃತ್ವದಲ್ಲಿ ಭಕ್ತರಿಲ್ಲದೆ ಜಾತ್ರೆಗಳು ನಡೆದರೆ, ಇನ್ನು ಕೆಲವು ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಸುವ ಮೂಲಕ ಜಾತ್ರೆಗಳೇ ರದ್ದಾಗಿವೆ.

ಕೆಲವು ದೇವಸ್ಥಾನಗಳಲ್ಲಿ ಜಾತ್ರೆಗಳ ಸ್ವರೂಪವೇ ಬದಲಾಗಿದೆ. ದ.ಕ. ಜಿಲ್ಲೆಯ ಪುತ್ತೂರಿನ ಹತ್ತೂರ ಒಡೆಯ ಖ್ಯಾತಿಯ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಕೊನೆಯ ದಿನ ದೂರದ ಹೊಳೆಗೆ ಹೋಗಿ ಅವಭೃತ ಉತ್ಸವ ನಡೆಯುತ್ತಿತ್ತು, ಈ ಬಾರಿ ಲಾಕ್ ಡೌನ್ ಪರಿಣಾಮ ಪೇಟೆ ಸಂಚಾರ ರದ್ದಾಗಿ ದೇವಸ್ಥಾನದ ರಥಗದ್ದೆಯಲ್ಲೇ ತೋಡಿದ ಕಿರು ಕೆರೆಯಲ್ಲಿ 8 ಅಡಿ ಆಳದಲ್ಲೇ ನೀರು ಚಿಮ್ಮಿ ದೇವರ ಜಳಕವನ್ನು ಅಲ್ಲಿಯೇ ನಡೆಸಲಾಯಿತು. ಐತಿಹಾಸಿಕ ಪುತ್ತೂರು ಬೇಡಿ ಮಹೋತ್ಸವ ರದ್ದಾಯಿತು.

ಲಾಕ್ ಡೌನ್ ಮುಗಿಯುವ ಮುನ್ನ ಈ ತಿಂಡಿಗಳ ರುಚಿ ನೋಡಿ

ಧರ್ಮಸ್ಥಳದ ವಿಷು ಮಹೋತ್ಸವ, ಕಟೀಲು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ, ಪೊಳಲಿ ಚೆಂಡು, ಜಾತ್ರೆ ಸಹಿತ ಪ್ರಸಿದ್ಧ ಜಾತ್ರೆಗಳೆಲ್ಲ ಕೆಲವು ಭಾಗಶಃ ರದ್ದಾದರೆ, ಕೆಲವು ಅಂಗಣದೊಳಗೆ ಔಪಚಾರಿಕವಾಗಿ ನಡೆಯಿತು. ಕಳೆದ ವಾರ ಕ್ರೈಸ್ತರ ಪವಿತ್ರ ಶುಭ ಶುಕ್ರವಾರ, ಗರಿಗಳ ಭಾನುವಾರ ಎರಡೂ ಹಬ್ಬಗಳನ್ನು ಅವರವರ ಮನೆಗಳಲ್ಲೇ ಆಚರಿಸಲಾಯಿತು. ಧರ್ಮಗುರುಗಳು ಯೂಟ್ಯೂಬ್ ಲೈವ್ ಮೂಲಕ ಸಂದೇಶಗಳನ್ನು ನೀಡುವಲ್ಲಿಗೆ ಆನ್ ಲೈನ್ ಭಕ್ತರು ಹಾಗೂ ದೇವರನ್ನು ಬೆಸೆಯುವ ಕೆಲಸ ಮಾಡಿತು.

ಮುಸ್ಲಿಮರ ಪವಿತ್ರ ರಮಝಾನ್ ಮಾಸ ಏ.24ರ ಬಳಿಕ ಆರಂಭವಾಗಲಿದ್ದು, ಸರ್ಕಾರದ ಸೂಚನೆ ಹಾಗಿ ಕೊರೋನಾ ಸೋಂಕು ಭೀತಿ, ಅನಿವಾರ್ಯತೆಯಿಂದ ಈ ಬಾರಿ ಎಲ್ಲ ಆಚರಣೆಗಳೂ ಮನೆಯಲ್ಲೇ ನಡೆಸುವಂತಾಗಿದೆ. ಧರ್ಮ, ಪ್ರದೇಶ, ಪರಿಸ್ಥಿತಿಗಳ ವ್ಯಾಪ್ತಿ ಮೀರಿ ಜಾಗತಿಕವಾಗಿ ಕಾಡಿದ ಕೊರೋನಾ ದೇವರನ್ನೂ ಸದ್ಯಕ್ಕೆ ಭಕ್ತರಿಂದ ದೂರವುಳಿಸಿದೆ.

ಕೊರೋನಾದಿಂದ ಮಕ್ಕಳ ರಕ್ಷಣೆ ಮಾಡುವುದು ಹೇಗೆ?

ರಥಗಳು ಗದ್ದೆಗಿಳಿಯುವಂತಿಲ್ಲ, ಯಕ್ಷಗಾನದ ಚೆಂಡೆಗಳ ಸದ್ದು ಕೇಳುತ್ತಿಲ್ಲ, ಭೂತ ಕೋಲದ ಗೌಜಿ ಗದ್ದಲ, ಕೋಳಿ ಅಂಕಗಳಿಲ್ಲ. ಹಾಗಾಗಿ ಸಂತೆಗಳಿಲ್ಲ, ತೂಗು ತೊಟ್ಟಿಲುಗಲಿಲ್ಲ, ಅನ್ನ ಸಂತರ್ಪಣೆಯಿಲ್ಲ, ಜಾತ್ರೆಯ ನೆಪದಲ್ಲಿ ನೆಂಟರ ಮನೆಗೆ ದಾಳಿಯಿಡುವುದಕ್ಕೂ ಆಗುವುದಿಲ್ಲ.

40ಕ್ಕೂ ಅಧಿಕ ವೃತ್ತಿಪರ ಯಕ್ಷಗಾನ ಮೇಳಗಳಿರುವ ಕರಾವಳಿಯಲ್ಲಿ ಮಾರ್ಚ್ ಮೂರನೇ ವಾರದ ಹೊತ್ತಿಗೆ ಯಕ್ಷಗಾನ ಮೇಳಗಳ ತಿರುಗಾಟ ನಿಂತಿದೆ. ಕಲಾವಿದರು ಅಕ್ಷರಶಹ ಮನೆಗಳಲ್ಲಿ ಬಂಧಿಗಳಾಗಿದ್ದಾರೆ. ಯಕ್ಷಗಾನವೆಂದರೆ ಕೇವಲ ಕಲಾ ಪ್ರದರ್ಶನ ಮಾತ್ರವಲ್ಲ, ಧಾರ್ಮಿಕ ನಂಬಿಕೆ, ಪರಂಪರೆಗಳೂ ಇವೆ. ಕಟೀಲು ದೇವಸ್ಥಾನದ ಕೃಪಾಶ್ರಯದಲ್ಲಿ ಆರು ಮೇಳಗಳ ಯಕ್ಷಗಾನ ಪ್ರದರ್ಶನಗಳು ದೀಪಾವಳಿಯಿಂದ ಹತ್ತನಾವಧಿ (ಪತ್ತನಾಜೆ) ತನಕ ಅಂದರೆ ನವೆಂಬರಿನಿಂದ ಮೇ ತಿಂಗಳ ಮೂರನೇ ವಾರದ ತನಕ ನಡೆಯುವುದು ವಾಡಿಕೆ. ಪ್ರತಿ ಮೇಳಗಳಲ್ಲೂ ಮೇಳದ ದೇವರಿಗೆ ತ್ರಿಕಾಲ ಪೂಜೆ ನಡೆಯುತ್ತದೆ. ಯಕ್ಷಗಾನ ಪ್ರದರ್ಶನ ನಿಂತರೂ ಪೂಜೆ ನಿಲ್ಲಿಸುವಂತಿಲ್ಲ. ಹಾಗಾಗಿ ಕಟೀಲು ಕ್ಷೇತ್ರದಲ್ಲಿ ಪ್ರತಿ ದಿನ ಸಂಜೆ ದೇವರೆಂದುರ ಸಾಂಕೇತಿಕವಾಗಿ ವೇಷಗಳು ಕುಣಿದು, ದೇವರಿಗೆ ಚೌಕಿ ಪೂಜೆ ಸಲ್ಲಿಸಿ ಪರಂಪರೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. 

ಪತ್ರಕರ್ತರಿಗೆ ಬಯ್ಯುತ್ತಾ ಸಿಕ್ಕ ಸಿಕ್ಕ ಮೇಸೇಜ್ ಫಾರ್ವಡ್ ಮಾಡುವ ಮುನ್ನ

ಶ್ರೀ ಧರ್ಮಸ್ಥಳದ ಮೇಳದಲ್ಲಿ ಗಣಪತಿಗೂ ಇದೇ ರೀತಿ ಪ್ರತಿ ದಿನ ಪೂಜೆ ನಡೆಯುತ್ತಿದೆ. ವಿವಿಧ ದೇವಸ್ಥಾನಗಳಿಂದ ತಿರುಗಾಟ ನಡೆಸುವ ಮೇಳಗಳು ಈ ರೀತಿ ಔಪಚಾರಿಕವಾಗಿ ಕಲಾ ಮಾತೆಯ ಆರಾಧನೆಯನ್ನು ನಡೆಸುತ್ತಿವೆ.

ಕಾರಸಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದವರು ಲಾಕ್ ಡೌನ್ ಜಾರಿಯದ ಸಂದರ್ಭದಲ್ಲಿ ಪ್ರದರ್ಶಿಸಿ ಕೊರೋನಾ ಜಾಗೃತಿ ಯಕ್ಷಗಾನ ಯೂಟ್ಯೂಬ್ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಮನೆ ಮಾತಾಯಿತು. ಯಕ್ಷಗಾನದ ನೂರಾರು ವಾಟ್ಸಪ್ ಗ್ರೂಪುಗಳಲ್ಲಿ ದಿನನಿತ್ಯ ಯಕ್ಷಗಾನದ ಹಳೆ ತುಣುಗಳ ಪ್ರಸಾರವಾಗುತ್ತಿದೆ. ಕೆಲವು ಫೇಸ್ ಬುಕ್ ಯಕ್ಷಗಾನ ಗ್ರೂಪುಗಳಲ್ಲಿ ಫೇಸ್ ಬುಕ್ ಲೈವ್ ಮೂಲಕ ಹಳೆ ಯಕ್ಷಗಾನಗಳ ವಿಡಿಯೋಗಳ ಮರು ಪ್ರಸಾರ ನಡೆದಿದೆ. ವಿಟ್ಲದ ಹವ್ಯಾಸಿ ತಾಳಮದ್ದಳೆ ತಂಡದವರು ಆಡಿಯೋ ಕಾನ್ಫರೆನ್ಸ್ ಕಾಲ್ ಮೂಲಕ ಆನ್ ಲೈನ್ ತಾಳಮದ್ದಳೆಯನ್ನೇ ನಡೆಸಿದರು. 

ಮಂಗಳೂರು ಆಕಾಶವಾಣಿ ತನ್ನ ಧ್ವನಿ ಭಂಡಾರದಿಂದ ಆಯ್ದ ಹಳೆ (20-30 ವರ್ಷಗಳಷ್ಟು ಹಳೆಯ) ಯಕ್ಷಗಾನ ಪ್ರಸಂಗಗಳ ಆಡಿಯೋ ತಾಳಮದ್ದಳೆಗಳನ್ನು ಮರು ಪ್ರಸಾರ ಮಾಡುತ್ತಾ ಶ್ರೋತೃಗಳನ್ನು ತಲಪುತ್ತಿದೆ. ನ್ಯೂಸ್ ಆನ್ ಏರ್ ಆಪ್ ಮೂಲಕ ವಿಶ್ವಾದ್ಯಂತ ಮಂಗಳೂರು ಆಕಾಶವಾಣಿಯನ್ನೂ ತಲುಪಲು ಸಾಧ್ಯವಾಗುತ್ತಿದೆ. ತಮ್ಮ ಮೆಚ್ಚಿನ ಕಲಾವಿದರ ಕುರಿತು ಯಕ್ಷ ಅಭಿಮಾನಿಗಳು ಫೇಸ್ ಬುಕ್ಕಿನಲ್ಲಿ, ವಾಟ್ಸಪ್ ಗ್ರೂಪುಗಳಲ್ಲಿ ಬರಹಗಳನ್ನುಬರೆದು, ಅವರ ಯೋಗಕ್ಷೇಮ ವಿಚಾರಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

ನೃತ್ಯಗುರುಗಳು, ಸಂಗೀತಗುರುಗಳು ತಮ್ಮ ಶಿಷ್ಯರನ್ನು ಕಾನ್ಱಪೆನ್ಸ್ ವಿಡಿಯೋ ಕಾಲ್ ಮೂಲಕ, ವಾಟ್ಸಪ್ ಗ್ರೂಪುಗಳ ಮೂಲಕ ಸಂಪರ್ಕಿಸುತ್ತಿದ್ದಾರೆ, ಕಲಿಕೆಯನ್ನು ಜೀವಂತವಾಗಿ ಇರಿಸಿದ್ದಾರೆ. ಪಾಠಗಳ ಆಡಿಯೋ,ವಿಡಿಯೋ ಶೇರ್ ಆಗುತ್ತಿದೆ.

ಜಗತ್ತನ್ನೇ ಜೋಡಿಸಿದ್ದು ಆನ್ ಲೈನ್...

ಆದರೆ ಜಗತ್ತು ಸಂಪರ್ಕ ಕಳೆದುಕೊಂಡಿಲ್ಲ. ಪೇಟೆಯ ಹತ್ತಾರು ಮಹಡಿಗಳ ಮೇಲೆ ಸುಡು ಬಿಸಿಲಿನಲ್ಲು ಎ.ಸಿ.ರೂಮುಗಳಲ್ಲಿ ಕುಳಿತು ಚಾಟ್ ಮಾಡುವವರನ್ನೂ, ನೂರಾರು ಮೈಲಿಯ ದೂರದ ಹಳ್ಳಿಯ ಎತ್ತರದ ಗುಡ್ಡದ ಮೇಲಿನ ಗೇರು ಮರದಿಂದ ಗೇರು ಹಣ್ಣು ಕೊಯ್ದು ಸ್ಟೇಟಸ್ಸಿನಲ್ಲಿ ಫೋಟೋ ಹಂಚಿಕೊಳ್ಳುವವನ್ನೂ ಆನ್ ಲೈನ್ ಜೋಡಿಸಿದೆ. ಮೊಬೈಲು ಮತ್ತು ಅಂತರ್ಜಾಲ ಸಂಪರ್ಕ ಅವರನ್ನು ಇವರಿಗೆ, ಇವರನ್ನು ಅವರಿಗೆ ತೋರಿಸಿಕೊಡುತ್ತಿದೆ.

ದೂರದರ್ಶನ ರಾಮಾಯಣ ಪ್ರಸಾರ ಮಾಡ್ತಾ ಇದೆ. ಆನ್ ಲೈನ್ ನಲ್ಲಿ ಲೂಡೋ, ಕೇರಂ ಆಡಬಹುದಾಗಿದೆ, ಪಿಡಿಎಫ್ ಗಳಲ್ಲಿ ಪುಸ್ತಕಗಳನ್ನು ಓದುವುದಕ್ಕೆ ಸಾಧ್ಯವಾಗಿದೆ. ಬಿಡುವಿನಲ್ಲಿ ನೋಡಬಹುದಾದ ಜನಪ್ರಿಯ ಸಿನಿಮಾಗಳ ಪಟ್ಟಿ ಸಾವಿರಾರು ಮೊಬೈಲುಗಳನ್ನು ಸೇರಿ ಆಗಿದೆ. ಅಷ್ಟೇ ಯಾಕೆ ಕನ್ನಡ ಸೇರಿದಂತೆ ಎಲ್ಲ ಭಾಷೆಯ ನಿಯತಕಾಲಿಕಗಳೂ ಪಿಡಿಎಫ್ ರೂಪದಲ್ಲಿ ವಾಟ್ಸಪ್ ಗ್ರೂಪುಗಳಿಂದ ಗ್ರೂಪುಗಳಿಗೆ ಫಾರ್ವರ್ಡ್ ಆಗುತ್ತಲೇ ಇವೆ.

ಈ ನಡುವೆ ಬೇಸಿಗೆಯು ಬೇಸಿಗೆಯಂತೆಯೇ ಉಳಿದುಕೊಂಡಿರುವುದು ಹಳ್ಳಿಗಳಲ್ಲಿ. ಗೇರು ಬೀಜ, ಮಾವಿನ ಹಣ್ಣು ಕೊಯ್ತಾರೆ, ಪುನರ್ಪುಳಿ ಹಣ್ಣು ಕೊಯ್ದು ಜ್ಯೂಸ್ ಮಾಡ್ತಾರೆ, ಹಲಸಿನಕಾಯಿ ಹಪ್ಪಳ ಮಾಡ್ತಾರೆ, ಸೆಂಡಿಗೆ ಮಾಡ್ತಾರೆ, ಮಾವಿನ ಮಿಡಿಯ ಉಪ್ಪಿನಕಾಯಿ ಮಾಡ್ತಾರೆ, ಉಪ್ಪಿನಲ್ಲಿ ಹಲಸಿನ ಸೋಳೆ ಸಂಗ್ರಹಿಸಿ ಇಡ್ತಾರೆ,  ಹಲಸಿನ ಬೀಜ ಸುಟ್ಟು ತಿನ್ತಾರೆ, ಗೇರು ಬೀಜ ಸುಟ್ಟು ತಿನ್ತಾರೆ, ನಾಟಿ ಕೋಳಿಸಾರು ಮಾಡ್ತಾರೆ, ಗೇರುಬೀಜದ ಜ್ಯೂಸ್, ಹಲಸಿನ ಬೀಜದ ಜ್ಯೂಸ್ ಈ ಲಾಕ್ ಡೌನ್ ಅವಧಿಯ ಕರಾವಳಿಯ ಹಳ್ಳಿ ಮನೆಗಳಲ್ಲಿ ಕಂಡು ಬಂದ ಹೊರ ಟ್ರೆಂಡುಗಳು.

ಈ ಸಾಹನಗಳು, ಅಡುಗೆಗಳು, ಹೊಸರುಚಿಗಳ ಫೋಟೋವನ್ನು ಆಗಿಂದಾಗಲೇ ಸೆರೆಹಿಡಿದು ಸ್ಟೇಟಸ್ಸುಗಳಲ್ಲಿ ಹಾಕಿ ಪೇಟೆಯೋರನ್ನ, ರಜೆ ಇಲ್ಲದೋರನ್ನ, ವಿದೇಶಗಳಲ್ಲಿ ಮಂಕಾಗಿರುವವರಿಗೆ ಹೊಟ್ಟೆ ಉರಿಸ್ತಾರೆ.....

ಬೇಕಾಗಿಯೋ, ಬೇಡದೆಯೋ ಒಂದು ಸುದೀರ್ಘ ಬಿಡುವು ಸಿಕ್ಕಿದೆ. ವಾರ, ತಾರೀಕಿನ ಹಂಗಿಲ್ಲದೆ ಮೇ 3ರ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ. ಸರ್ಕಾರವನ್ನು, ಮಾಧ್ಯಮವನ್ನು, ಜನಸಾಮಾನ್ಯರನ್ನು ಬೆಸಿದಿರುವುದು ಆನ್ ಲೈನ್. ಕಳೆದುಕೊಂಡಿದ್ದು, ಮಾಡುತ್ತಿರುವುದು, ಮಾಡಬೇಕಾದ್ದು ಎಲ್ಲವನ್ನು ತೋರಿಸಿಕೊಡುತ್ತಿರುವುದು ಆನ್ ಲೈನ್ ಜಗತ್ತು. ಜಾತ್ರೆಗಳು ನಡೆಯದ ಜಾಗದಲ್ಲಿ ಕಳೆದ ವರ್ಷದ ಜಾತ್ರೆಯ ವಿಡಿಯೋಗಳು ಹಾಕಿ ನೆನಪು ಮೆಲುಕು ಹಾಕ್ತಾರೆ, ಪ್ರವಾಸ ಹೋಗಿದ್ದು, ಆಫೀಸಿನಲ್ಲಿ ಇದ್ದಿದ್ದು, ವ್ಯಾಯಮ ಮಾಡ್ತಾ ಇರೋದು ಎಲ್ಲವನ್ನು ಆನ್ ಲೈನಿನಲ್ಲಿ ಶೇರ್ ಮಾಡ್ಕೊಂಡು ಸಮಾಧಾನ ಪಟ್ಕೊಳ್ತಾರೆ. 

ಒಂದಂತೂ ನಿಜ. ಕೊರೋನಾ ಕಾಡುವುದಕ್ಕೂ ಮುನ್ನ ಹಳ್ಳಿ, ಪೇಟೆ ತಾರತಮ್ಯವಿಲ್ಲದೆ ಬೆಳೆಗ ಆನ್ ಲೈನು ಜಾಲ, ಕ್ಯಾಶ್ ಲೆಸ್ ವ್ಯವಸ್ಥೆ, ಉಚಿತ ಮಾದರಿಯ ಡೇಟಾ ಪ್ಲಾನುಗಳು ಮಾತ್ರ ಸುಖಾಸುಮ್ಮನೆ ಸಿಕ್ಕಿದ ಆತಂಕದ ದಿನಗಳಿಗೆ ಸಂಪರ್ಕದ ಸೇತುವಾದ್ದು ಸುಳ್ಳಲ್ಲ.

ಜಾತ್ರೆ, ಹಬ್ಬ, ಯಕ್ಷಗಾನಗಳಲ್ಲ ಸದ್ದಿಲ್ಲ... ಆನ್ ಲೈನ್ ಜಾತ್ರೆ ಇದೆಯಲ್ಲ
ಲಾಕ್ ಡೌನ್ ಪ್ರತಿಯೊಬ್ಬನ ಜೀವನದ ಮೇಲೆಯೂ ಪರಿಣಾಮ ಬೀರಿದ್ದು ಒಂದಿಷ್ಟು ಲಾಭ- ನಷ್ಟಗಳನ್ನು ತಂದಿಟ್ಟಿದೆ.  ಹಳ್ಳಿ ಎಂಬ ಸುಂದರ ಲೋಕ ಮತ್ತೆ ತೆರೆದುಕೊಂಡಿದ್ದು ಈ ಲಾಕ್ ಡೌನ್ ನಿಂದಲೇ