ಏನಿದು ಮಲ್ಟಿವರ್ಸ್?: ತರ್ಕದ ಅನಂತ ಆಕಾಶಕ್ಕೆ ಸ್ವಾಗತ!

ಯೂನಿವರ್ಸ್ ಅಸ್ತಿತ್ವದಿಂದ ತೃಪ್ತಗೊಳ್ಳದ ಮಾನವ| ಮಲ್ಟಿವರ್ಸ್ ಹುಡುಕಾಟದಲ್ಲಿ ಮಾನವನ ದಿಗಂತ ಪ್ರವಾಸ| ಮಲ್ಟಿವರ್ಸ್ ಅಸ್ತಿತ್ವದ ಕುರಿತು ಸಂದಿಗ್ಧತೆಯಲ್ಲಿ ಖಗೋಳ ವಿಜ್ಞಾನ ಜಗತ್ತು| ವಿಜ್ಞಾನಕ್ಕಿದೆ ವಿಶ್ವದ ವಿಸ್ತೃತ ರೂಪ ಕಾಣುವ ಸಾಮರ್ಥ್ಯ? ಮಾನವನ ಬ್ರಹ್ಮಾಂಡದ ಪರಿಕಲ್ಪನೆ ಬದಲಿಸಬಲ್ಲದೇ ಮಲ್ಟಿವರ್ಸ್ ಸಿದ್ದಾಂತ? 

Concept Of Multiverse Ideological Battle Between Truth and Hypothesis

ಬೆಂಗಳೂರು(ನ.15): ಮಾನವ ಆಕಾಶದತ್ತ ದೃಷ್ಟಿ ನೆಟ್ಟ ದಿನದಿಂದ ಅನಂತವಾಗಿರುವ ದಿಗಂತದಲ್ಲಿ ಇರುವುದೇನು..? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೆಣಗುತ್ತಿದ್ದಾನೆ.

ಕೆಲವರು ಮೇಲಿರುವುದು ದೇವರು ಎಂದರೆ, ಇನ್ನೂ ಕೆಲವರು ಮೇಲಿರುವುದು ವಿಶ್ವದ ರಚನೆಯ ಕಾರಣದಿಂದ ಸೃಷ್ಟಿಯಾದ ಭೌತ ವಸ್ತುಗಳು ಎಂದು ವಾದಿಸಿದರು. 

ದೇವರ ಸಾಮ್ರಾಜ್ಯವನ್ನು ದಿಗಂತದಲ್ಲೇ ಗುರುತಿಸಿದ ಧರ್ಮ ಗ್ರಂಥಗಳು, ಆಕಾಶವನ್ನು ತಲುಪಬಾರದ, ಮುಟ್ಟಬಾರದ ಪವಿತ್ರ ಜಗತ್ತನ್ನಾಗಿ ವ್ಯಾಖ್ಯಾನಿಸಿದವು. ಆದರೆ ಈ ಜಗತ್ತನ್ನು ಸೀಳಲು ಸಜ್ಜಾದ ವಿಜ್ಞಾನ ಕ್ಷೇತ್ರ ಹಂತ ಹಂತವಾಗಿ ಆಕಾಶವನ್ನು ಬೇಧಿಸುತ್ತಾ ಬ್ರಹ್ಮಾಂಡದ ರಹಸ್ಯವನ್ನು ಹೊರಗೆಡವಲು ಮುಂದಾಯಿತು.

ಆದಿ ಮಾನವನಿಂದ ಹಿಡಿದು ಆಧುನಿಕ ಮಾನವನವರೆಗೂ ಧರ್ಮ ಮತ್ತು ವಿಜ್ಞಾನದ ನಡುವಿನ ತಾತ್ವಿಕ ಸಂಘರ್ಷ ಮುಂದುವರೆಯುತ್ತಲೇ ಬಂದಿದೆ. ಊಹಾತ್ಮಕ ಜಗತ್ತಿನಿಂದ ಹೊರಬಂದ ವಿಜ್ಞಾನಿ ಭೌತ ವಸ್ತುಗಳ ಅಧ್ಯಯನ ಮಾಡುತ್ತಾ, ಗ್ರಹಕಾಯಗಳು ಹಾಗೂ ಅದನ್ನು ಸುತ್ತುವ ಉಪಗ್ರಹಗಳು, ಜೀವನದ ಮೂಲಾಧಾರ ಸೂರ್ಯ, ಸೌರಮಂಡಲ, ನಕ್ಷತ್ರಪುಂಜಗಳನ್ನು ಕಂಡುಹಿಡಿದ. ಇವೆಲ್ಲವನ್ನೂ ಸೇರಿಸಿದ ವಿಶ್ವದ ಅಸ್ತಿತ್ವಕ್ಕೆ ಮುನ್ನುಡಿ ಬರೆದ. 

ಅದರಂತೆ ವಿಶ್ವದ ಪರಿಕಲ್ಪನೆಯನ್ನು ತೆರೆದಿಟ್ಟ ವಿಜ್ಞಾನ ಕ್ಷೇತ್ರ, ಗೊತ್ತಿರುವ ಬ್ರಹ್ಮಾಂಡದ ಅಸ್ತಿತ್ವನ್ನು ಪ್ರಾಯೋಗಿಕವಾಗಿ ಸಿದ್ಧಪಡಿಸಿದೆ. ಅಸಂಖ್ಯ ನಕ್ಷತ್ರಪುಂಜಗಳ ಒಡಲಲ್ಲಿರುವ ನಕ್ಷತ್ರಗಳು, ಅವುಗಳನ್ನು ಸುತ್ತುತ್ತಿರುವ ಲೆಕ್ಕಕ್ಕೆ ಸಿಗದ ಗ್ರಹಕಾಯಗಳು ಹೀಗೆ ಗುರುತ್ವಾಕರ್ಷಣೆ ಎಂಬ ದಿವ್ಯ ಶಕ್ತಿಯ ಕಾರಣದಿಂದ  ಒಂದಕ್ಕೊಂದು ಬೆಸೆದಿರುವ ಖಗೋಳ ಸಮಾಜವನ್ನು ವಿಶ್ವ ಎಂದು ಕರೆಯಲಾಯಿತು.

ಇದು ಚೌಕ, ಅಲ್ಲಲ್ಲ ಗೋಳ: ಶುರುವಾಗಿದೆ ‘ವಿಶ್ವ’ಕ್ಕಾಗಿ ಜಗಳ!

ವಿಶ್ವ(ಯೂನಿವರ್ಸ್):

ಖಗೋಳ, ಸಮಯ ಅಸ್ತಿತ್ವದಲ್ಲಿರುವ ಎಲ್ಲ ಭೌತ ವಸ್ತುಗಳ ಸಮಾಗಮವೇ ವಿಶ್ವ. ಬಿಗ್ ಬ್ಯಾಂಗ್ ಸಿದ್ಧಾಂತದನ್ವಯ  ಹಾಗೂ ಲಮ್ಡಾ ಸಿಡಿಎಂ ಮಾಡೆಲ್ ಪ್ರಕಾರ ವಿಶ್ವ ಸುಮಾರು 13 ಬಲಿಯುನ್ ವರ್ಷಗಳ ಹಿಂದೆ ರಚಿತವಾಗಿದೆ. ಮಹಾಸ್ಫೋಟದ ಪರಿಣಾಮ ಪರಮಾಣುಗಳ ಸಮಾಗಮ ಹಾಗೂ ಹೈಡ್ರೋಜನ್, ಹಿಲಿಯಂಗಳ ಸಂಯೋಜನೆಯಿಂದ ವಿಶ್ವದ ರಚನೆಯಾಗಿದೆ ಎಂಬುದು ಸಾಬೀತಾಗಿದೆ.

ನಮಗೆ ಗೊತ್ತಿರುವ ವಿಶ್ವದಲ್ಲಿ ಸುಮಾರು 100 ಬಿಲಿಯನ್‌ಗೂ ಅಧಿಕ ನಕ್ಷತ್ರಪುಂಜಗಳಿದ್ದು, ಪ್ರತಿ ನಕ್ಷತ್ರಪುಂಜದಲ್ಲೂ ಸುಮಾರು 100 ಬಿಲಿಯನ್ ನಕ್ಷತ್ರಗಳಿವೆ. ಇವುಗಳಲ್ಲಿ ಕೆಲವು ನಕ್ಷತ್ರಗಳಿಗೆ ಅಸಂಖ್ಯ ಗ್ರಹಕಾಯಗಳು ಹಾಗೂ ಅವುಗಳನ್ನು ಸುತ್ತುತ್ತಿರುವ ಉಪಗ್ರಹಗಳು ಅಸ್ತಿತ್ವದಲ್ಲಿವೆ.

ನಮ್ಮ ಸೌರಮಂಡಲ ಕೂಡ ಇದೇ ವಿಶ್ವದ ಪರಿಧಿಯಲ್ಲಿ ಬರುತ್ತದೆ. ಸೂರ್ಯ ಹಾಗೂ 8 ಗ್ರಹಗಳು, 575 ಉಪಗ್ರಹಗಳು, ಅಸಂಖ್ಯಾತ ಕ್ಷುದ್ರಗ್ರಹ ಹಾಗೂ ಧೂಮಕೇತುಗಳ ಮನೆಯಾಗಿರುವ ಸೌರಮಂಡಲ ಕೂಡ ಇದೇ ವಿಶ್ವ ಎಂಬ ಕುಟುಂಬದ ಸದಸ್ಯ.

ನಮಗೆ ಗೊತ್ತಿರುವ ವಿಶ್ವ ಸುಮಾರು 8.8X 10 ರ ಘಾತ 26 M ನಷ್ಟು ಅಗಾಧ ವಿಸ್ತಾರವಾಗಿದ್ದು, ಒಟ್ಟು 93 ಬಿಲಿಯನ್ ಜ್ಯೋತಿರ್ವರ್ಷ ಸುತ್ತಳತೆಯನ್ನು ಹೊಂದಿದೆ. ವಿಶ್ವ ಒಟ್ಟು 10 ರ ಘಾತ 53 ಜೆಕಿ ತೂಕ ಹೊಂದಿದೆ.

ವಿಶ್ವದ ಸಾಂಧ್ರತೆ 9.9 x 10−30 g/cm3ರಷ್ಟಿದ್ದು, ಇದರ ಸರಾಸರಿ ತಾಪಮಾನ ಸುಮಾರು 2.72548 Kನಷ್ಟಿದೆ. ಇದರ ಆಕಾರ ಸಮತಟ್ಟಾಗಿದ್ದು, ನಿರಂತರವಾಗಿ ವಿಸ್ತಾರವಾಗುತ್ತಿರುವ ವಿಶ್ವದಲ್ಲಿ ನಾವು ಸುಮಾರು 46.5 ಬಿಲಿಯನ್ ಜ್ಯೋತಿರ್ವರ್ಷದಷ್ಟು ದೂರದ ಭೌತ ವಸ್ತುಗಳನ್ನು ನಾವು ಪತ್ತೆ ಹಚ್ಚಬಲ್ಲೆವು.

Concept Of Multiverse Ideological Battle Between Truth and Hypothesis

ಮಲ್ಟಿವರ್ಸ್:

ಆಧುನಿಕ ಖಗೋಳಶಾಸ್ತ್ರ ಇಂದು ಮಲ್ಟಿವರ್ಸ್ ಕುರಿತು ಮಾತನಾಡುತ್ತಿದೆ. ಇದರ ಭೌತಿಕ ಖಚಿತತೆ ಇನ್ನೂ ಸ್ಪಷ್ಟವಾಗಿಲ್ಲವಾದರೂ ವಿಶ್ವದ ವಿಸ್ತಾರವನ್ನೇ ಮಲ್ಟಿವರ್ಸ್ ಎಂದು ಕರೆಯಲಾಗುತ್ತಿದೆ.

ಅಂದರೆ ನಮಗೆ ಗೊತ್ತಿರುವ ವಿಶ್ವ ನಮ್ಮ ಕಲ್ಪನೆಗೂ ಮೀರಿದ ವಿಸ್ತೀರ್ಣ ಹೊಂದಿದ್ದು, ಬಹು ವಿಶ್ವಗಳ ಗುಂಪನ್ನು ಮಲ್ಟಿವರ್ಸ್ ಎಂದು ಕರೆಯಲಾಗುತ್ತದೆ.

ಅಮೇರಿಕನ್ ತತ್ವಜ್ಞಾನಿ ಮತ್ತು ಮನಶ್ಶಾಸ್ತ್ರಜ್ಞ ವಿಲಿಯಂ ಜೇಮ್ಸ್ 1895 ರಲ್ಲಿ ಮೊಟ್ಟ ಮೊದಲ ಬಾರಿಗೆ ಮಲ್ಟಿವರ್ಸ್ ಎಂಬ ಪದವನ್ನು ಬಳಸಿದರು. ಪ್ರಸ್ತುತ ಭೌತಶಾಸ್ತ್ರದ ಸಂದರ್ಭದಲ್ಲಿ 1963 ರಲ್ಲಿ ಮೈಕೆಲ್ ಮೂರ್ಕಾಕ್  ಅವರಎಸ್ಎಫ್ ಅಡ್ವೆಂಚರ್ಸ್ ಕಾದಂಬರಿ The Sundered Worldsನಲ್ಲಿ ಮಲ್ಟಿವರ್ಸ್ ಪದವನ್ನು ಅಧಿಕೃತವಾಗಿ ಬಳಸಲಾಯಿತು.

ಭೌತಶಾಸ್ತ್ರ ಸಮುದಾಯವು ಕಾಲಾನಂತರದಲ್ಲಿ ವಿವಿಧ ಮಲ್ಟಿವರ್ಸ್ ಸಿದ್ಧಾಂತಗಳ ಕುರಿತು ಚರ್ಚೆ ನಡೆಸಿದೆ. ವಿವಿಧ ವಿಶ್ವಗಳ ಅಸ್ತಿತ್ವದ ಕುರಿತಾದ ಚರ್ಚೆಗೆ ಇಂದು ಎಲ್ಲಿಲ್ಲದ ಮಹತ್ವ ಬಂದಿದೆ.

ಕೆಲವು ಭೌತ ವಿಜ್ಞಾನಿಗಳು ಮಲ್ಟಿವರ್ಸ್ ವೈಜ್ಞಾನಿಕ ವಿಚಾರಣೆಯ ಕಾನೂನುಬದ್ಧ ವಿಷಯವಲ್ಲ ಎಂದು ವಾದಿಸುತ್ತಾರೆ. ಮಲ್ಟಿವರ್ಸ್ ವೈಜ್ಞಾನಿಕ ಕಲ್ಪನೆಗಿಂತ ತಾತ್ವಿಕ ಕಲ್ಪನೆ ಎಂಬುದು ಇವರ ವಾದ. ಆದರೆ ಕೆಲವು ಭೌತ ವಿಜ್ಞಾನಿಗಳು ಕೆಲವರು ಮಲ್ಟಿವರ್ಸ್ ಅಸ್ತಿತ್ವದ ಸಾಧ್ಯತೆಯನ್ನು ಬೆಂಬಲಿಸುತ್ತಾರೆ. 

ಅದೆನೆ ಇರಲಿ ಗೊತ್ತಿರುವ ವಿಶ್ವದ ಅಗಾಧತೆಯನ್ನು ಕಂಡೇ ದಂಗಾಗಿರುವ ಮಾನವ, ಇದೀಗ ಮಲ್ಟಿವರ್ಸ್ ಎಂಬ ಊಹಾತ್ಮಕ ಜಗತ್ತಿನ ಕುರಿತು ಚಿಂತಿಸುತ್ತಿದ್ದು, ಮುಂದಿನ ದಿನಗಳಲ್ಲಿ ಖಗೋಳಶಾಸ್ತ್ರದಲ್ಲಿ ಸಂಭವಿಸಬಹುದಾದ ಹೊಸ ಹೊಸ ಆವಿಷ್ಕಾರಗಳ ಕುರಿತು ಕುತೂಹಲ ಮೂಡುವಂತಾಗಿದೆ.

Latest Videos
Follow Us:
Download App:
  • android
  • ios