ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020ದಲ್ಲಿ ಯಡಿಯೂರಪ್ಪ ಘೋಷಣೆ| ಮುಂದಿನ 5 ವರ್ಷಗಳಲ್ಲಿ ಜೈವಿಕ ತಂತ್ರಜ್ಞಾನದಲ್ಲೂ ಕರ್ನಾಟಕ ಶೇ.50 ಪಾಲು ಪಡೆವ ಗುರಿ| ಮುಂದಿನ ಐದು ವರ್ಷದಲ್ಲಿ 60 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿ| 

ಬೆಂಗಳೂರು(ನ.20): ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬೆಂಗಳೂರಿನಿಂದ ಹೊರಗೂ ವಿಸ್ತರಿಸಲು ಆದ್ಯತೆ ನೀಡಿ ‘ಮಾಹಿತಿ ತಂತ್ರಜ್ಞಾನ ಕಾರ್ಯನೀತಿ -2020-25’ ಪ್ರಕಟಿಸಿದ್ದು, ಮುಂದಿನ ಐದು ವರ್ಷದಲ್ಲಿ 60 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

"

ಅಲ್ಲದೆ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ಕೇಂದ್ರ ಸರ್ಕಾರವು 2025ರ ವೇಳೆಗೆ ಸಾಧಿಸಬೇಕು ಎಂದುಕೊಂಡಿರುವ 100 ಬಿಲಿಯನ್‌ ಯು.ಎಸ್‌. ಡಾಲರ್‌ ಜೈವಿಕ ತಂತಜ್ಞಾನ ಆರ್ಥಿಕತೆಯ ಗುರಿಯಲ್ಲಿ ರಾಜ್ಯವೇ ಶೇ.50 ರಷ್ಟು ಮಾರುಕಟ್ಟೆಯ ಸಿಂಹಪಾಲು ಪಡೆಯಲಿದೆ. ಈ ಗುರಿ ಸಾಧನೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. 

ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುಯಲ್‌ ಮೂಲಕ ಉದ್ಘಾಟಿಸಿದ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಎರಡು ದಶಕಗಳಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದರಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಮುಂದಿನ ಐದು ವರ್ಷದಲ್ಲಿ ದೇಶದ ಜೈವಿಕ ತಂತ್ರಜ್ಞಾನದ ಶೇ.50 ಮಾರುಕಟ್ಟೆ ಪಾಲು ಸಾಧಿಸಬೇಕು. 2025ರ ವೇಳೆಗೆ 100 ಬಿಲಿಯನ್‌ ಯುಎಸ್‌ ಡಾಲರ್‌ನ ಜೈವಿಕ ಆರ್ಥಿಕತೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಇದರಲ್ಲಿ ಶೇ.50 ರಷ್ಟು ರಾಜ್ಯವೇ ಸಾಧಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಟೆಕ್‌ ಶೃಂಗಸಭೆ-2020: '300 ಶತಕೋಟಿ ಡಾಲರ್‌ ಡಿಜಿಟಲ್‌ ಆರ್ಥಿಕತೆ ಗುರಿ'

ಇನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ರಾಜ್ಯವು ಮುಂಚೂಣಿಯಲ್ಲಿದೆ. ಹೂಡಿಕೆಗೆ ಪ್ರಶಸ್ತ ವಾತಾವರಣ ಸೃಷ್ಟಿಸಲು ಇನ್ನೂ ಹಲವು ಉದ್ಯಮ ಸ್ನೇಹಿ ನೀತಿಗಳನ್ನು ರೂಪಿಸಿದೆ. ಕಾರ್ಮಿಕ ಕಾಯಿದೆ, ಭೂ ಸುಧಾರಣೆ ಕಾಯಿದೆ, ಡಿಜಿಟಲ್‌ ಎಕಾನಮಿ ಮಿಷನ್‌ ತಿದ್ದುಪಡಿ, ನಾವಿನ್ಯತಾ ಪ್ರಾಧಿಕಾರ ರಚನೆಯಂತಹ ಕ್ರಮ ಕೈಗೊಂಡಿದ್ದೇವೆ. ಹೀಗಾಗಿ ಹೂಡಿಕೆದಾರರಿಗೆ ಮುಕ್ತ ಅವಕಾಶವಿದೆ ಎಂದು ಹೇಳಿದರು.

ಸ್ಥಳೀಯ ಆವಿಷ್ಕಾರಗಳಿಗೆ ಒತ್ತು:

ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯಂತೆ ಆತ್ಮ ನಿರ್ಭರ ಭಾರತ್‌ಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಇದಕ್ಕಾಗಿ ಸ್ಥಳೀಯ ತಂತ್ರಜ್ಞಾನ ಹಾಗೂ ತಳಮಟ್ಟದ ಆವಿಷ್ಕಾರಗಳಿಗೆ ವಿಶೇಷ ಒತ್ತು ನೀಡುತ್ತಿದ್ದೇವೆ. ಜನ ಸ್ನೇಹಿ ನೀತಿಗಳ ಮೂಲಕ ನಮ್ಮ ರಾಜ್ಯವು ಎಲ್ಲವನ್ನೂ ಸಾಧಿಸುತ್ತಿದ್ದು, ದೇಶದಲ್ಲಿ ಸ್ಥಾಪನೆಯಾಗುವ ಪ್ರತಿ 7 ಸ್ಟಾರ್ಟ್‌ ಅಪ್‌ಗಳಲ್ಲಿ ನಾಲ್ಕು ಬೆಂಗಳೂರಿನಿಂದಲೇ ಉದಯಿಸುತ್ತಿವೆ. ಈ ಮೂಲಕ ಸ್ಟಾರ್ಟ್‌-ಅಪ್‌ಗಳಲ್ಲೂ ಮುಂಚೂಣಿಯಲ್ಲಿದೆ ಎಂದರು. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ನಮ್ಮ ರಾಜ್ಯದ ಸಾಮರ್ಥ್ಯ ಹಾಗೂ ಅವಕಾಶಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆ. ಕೈಗಾರಿಕೆಗಳು, ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಗಳೊಂದಿಗೆ ದೇಶ ಹಾಗೂ ವಿಶ್ವ ಮಟ್ಟದಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳಲು ವೇದಿಕೆ ನೆರವಾಗಲಿದೆ. ಈ ಟೆಕ್‌ ಸಮ್ಮಿಟ್‌ ಇನ್ನಷ್ಟು ಫಲಪ್ರದವಾಗಬೇಕು. ಇಲ್ಲಿ ಮಂಡನೆಯಾಗುವ ತಂತ್ರಜ್ಞಾನದ ಮಾಹಿತಿಗಳು ಕಟ್ಟಕಡೆಯ ಪ್ರಜೆಯವರೆಗೂ ತಲುಪಬೇಕು ಎಂದು ಆಶಯ ವ್ಯಕ್ತಪಡಿಸಿದರು.

60 ಲಕ್ಷ ಉದ್ಯೋಗ ಸೃಷ್ಟಿಗುರಿ:

ಭಾರತ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ. ಕೊರೋನಾದಿಂದಾಗಿ ಡಿಜಿಟಲ್‌ ರೂಪ ತಾಳಿದ್ದು ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿದೆ. ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಎಂಬುದು ಹಿಂದೆಂದಿಗಿಂತಲೂ ಅನಿವಾರ್ಯ ಎಂಬಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಾಗಿರುವ 5 ಶತ ಕೋಟಿ ಡಾಲರ್‌ ಆರ್ಥಿಕತೆ ಹಾಗೂ 2025ರ ವೇಳೆಗೆ ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿ ಕೇಂದ್ರವಾಗಿ ಮಾಡುವ ಅವರ ಗುರಿ ಸಾಧನೆಗೆ ರಾಜ್ಯ ಸರ್ಕಾರ ನೆರವಾಗಲಿದೆ. ಇದಕ್ಕಾಗಿ 2020-25 ಐಟಿ ಪಾಲಿಸಿ ಘೋಷಿಸಿದ್ದು ಇದರಿಂದ 60 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಮಾಡಲಿದ್ದೇವೆ ಎಂದರು.