ಚಲಿಸುತ್ತಿರುವ ಹಡಗಿಂದ ರಾಕೆಟ್‌ ಉಡಾಯಿಸಿ ಚೀನಾ ವಿಶ್ವ ದಾಖಲೆ| ಸಮುದ್ರದಿಂದ ರಾಕೆಟ್‌ ಉಡಾವಣೆ ಮಾಡಿದ ಮೊದಲ ದೇಶ

ಚಿಂಗ್‌ಡಾವೋ[ಜೂ.06]: ಸಮುದ್ರಕ್ಕೆ ಸಮೀಪವಿರುವ ಬಾಹ್ಯಾಕಾಶ ನೆಲೆಗಳಿಂದ ಉಪಗ್ರಹ ಹೊತ್ತ ರಾಕೆಟ್‌ಗಳನ್ನು ಇಸ್ರೋ ಸೇರಿದಂತೆ ಹಲವು ಬಾಹ್ಯಾಕಾಶ ಸಂಸ್ಥೆಗಳು ಉಡಾವಣೆ ಮಾಡುವುದು ಮಾಮೂಲಿ. ಆದರೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಚಲಿಸುತ್ತಿರುವ ಹಡಗಿನಿಂದ ರಾಕೆಟ್‌ ಉಡಾವಣೆ ಮಾಡುವ ಮೂಲಕ ಚೀನಾ ಹೊಸ ದಾಖಲೆಯೊಂದನ್ನು ಬರೆದಿದೆ. ಸಮುದ್ರದಲ್ಲಿ ಅದೂ ಹಡಗಿನಿಂದ ರಾಕೆಟ್‌ ಉಡಾವಣೆ ಮಾಡಿದ ಮೊದಲ ದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ.

ಎರಡು ತಾಂತ್ರಿಕ ಪ್ರಯೋಗ ಉಪಗ್ರಹ ಹಾಗೂ ಐದು ವಾಣಿಜ್ಯ ಉದ್ದೇಶದ ಉಪಗ್ರಹಗಳನ್ನು ಹೊತ್ತ ಚೀನಾದ ‘ಲಾಂಗ್‌ ಮಾಚ್‌ರ್‍-11’ ರಾಕೆಟ್‌ ಬುಧವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 12.06 ವೇಳೆಗೆ ಯಶಸ್ವಿಯಾಗಿ ಚಲಿಸುತ್ತಿದ್ದ ಹಡಗಿನಿಂದ ಉಡಾವಣೆಗೊಂಡಿದೆ.

ಹಡಗಿನಲ್ಲೇ ಏಕೆ?:

ಹಡಗಿನಲ್ಲಿ ರಾಕೆಟ್‌ ಉಡಾವಣೆ ಮಾಡುವುದರಿಂದ ಚೀನಾಕ್ಕೆ ಕೆಲವೊಂದು ಲಾಭಗಳಿವೆ. ಭೂಮಧ್ಯ ರೇಖೆಯಲ್ಲಿ ಗುರುತ್ವಾಕರ್ಷಣ ಬಲ ಕಡಿಮೆ ಇರುವುದರಿಂದ ರಾಕೆಟ್‌ಗೆ ಹೆಚ್ಚಿನ ವೇಗ ಸಿಗುತ್ತದೆ. ಹೀಗಾಗಿ ಬಾಹ್ಯಾಕಾಶಕ್ಕೆ ರಾಕೆಟ್‌ ಉಡಾಯಿಸಲು ಕಡಿಮೆ ಶಕ್ತಿ ಸಾಕಾಗುತ್ತದೆ. ಇದರಿಂದ ಇಂಧನವೂ ಉಳಿಯುತ್ತದೆ. ನಿರ್ದಿಷ್ಟಸ್ಥಳದಲ್ಲೇ ರಾಕೆಟ್‌ ಉಡಾವಣೆ ಮಾಡಬೇಕು ಎಂಬ ಸಮಸ್ಯೆ ಇರುವುದಿಲ್ಲ. ಜತೆಗೆ ರಾಕೆಟ್‌ನ ಅವಶೇಷಗಳು ಕೆಳಕ್ಕೆ ಬೀಳುವಾಗ ಯಾವುದೇ ಅಪಾಯವೂ ಇರುವುದಿಲ್ಲ.