ಮುಂದಿನ 2 ತಿಂಗಳಲ್ಲಿ ಮೊಬೈಲ್, ಟೀವಿ., ಲ್ಯಾಪ್ಟಾಪ್‌ನಂತಹ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಯಲ್ಲಿ ಶೇ.8ರಷ್ಟು ಏರಿಕೆಯಾಗಲಿದೆ. ಇದಕ್ಕೆ ಕಾರಣ, ಅವುಗಳೊಳಗೆ ಮೆದುಳಿನಂತೆ ಕೆಲಸ ಮಾಡುವ ಚಿಪ್‌ನ ಕೊರತೆ.
ನವದೆಹಲಿ: ಮುಂದಿನ 2 ತಿಂಗಳಲ್ಲಿ ಮೊಬೈಲ್, ಟೀವಿ., ಲ್ಯಾಪ್ಟಾಪ್‌ನಂತಹ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಯಲ್ಲಿ ಶೇ.8ರಷ್ಟು ಏರಿಕೆಯಾಗಲಿದೆ. ಇದಕ್ಕೆ ಕಾರಣ, ಅವುಗಳೊಳಗೆ ಮೆದುಳಿನಂತೆ ಕೆಲಸ ಮಾಡುವ ಚಿಪ್‌ನ ಕೊರತೆ. ಈ ಸಾಧನಗಳಲ್ಲಿ ಮಾಹಿತಿ ಸಂಗ್ರಹಣೆ ಮತ್ತು ಕಾರ್ಯನಿರ್ವಹಣೆಗೆ ಅಗತ್ಯವಾದ ಚಿಪ್‌ಗೆ ಇದೀಗ ಎಐ ಕ್ಷೇತ್ರದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಅದರ ಪೂರೈಕೆ ಕೂಡ ಅತ್ತ ತಿರುಗಿದೆ.
ಪರಿಣಾಮ, ಎಲೆಕ್ಟ್ರಾನಿಕ್ ಸಾಧನಗಳಿಗೆ ಲಭ್ಯತೆ ಕುಸಿದಿದ್ದು, ಬೆಲೆಯಲ್ಲಿ ಏರಿಕೆ ಆಗಿದೆ. ಎಐ ಅಭಿವೃದ್ಧಿಯಲ್ಲಿ ಚಿಪ್ ಅತ್ಯಗತ್ಯ. ಈ ಕ್ಷೇತ್ರ ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ಪರಿಣಾಮ ಚಿಪ್‌ನ ಬೇಡಿಕೆ ನಿರೀಕ್ಷೆಗೂ ಮೀರಿ ಹೆಚ್ಚುತ್ತಿದೆ.
ಮೊಬೈಲ್‌ನಂತಹ ಸಾಧನಗಳಲ್ಲಿ ಬಳಸಲ್ಪಡುವ ಚಿಪ್‌ಗಿಂತ ಎಐ ಕಂಪನಿಗಳು ಬಳಸುವ ಚಿಪ್‌ಗಳ ಬೆಲೆ ಹೆಚ್ಚಿರುತ್ತದೆ. ಹೀಗಿರುವಾಗ ಸಹಜವಾಗಿ ಹೆಚ್ಚಿನ ಲಾಭಕ್ಕಾಗಿ ಚಿಪ್ ತಯಾರಕರು ಎಐ ಕಂಪನಿಗಳನ್ನು ನೆಚ್ಚಿಕೊಳ್ಳತೊಡಗಿವೆ. ಇತ್ತ ಮಾರುಕಟ್ಟೆಯಲ್ಲಿ ಚಿಪ್ ಕೊರತೆಯ ಕಾರಣ ಸಹಜವಾಗಿ ಅವುಗಳ ಬೆಲೆಯಲ್ಲಿ ಏರಿಕೆಯಾಗಲಿದ್ದು, ಅದು ಉಪಕರಣಗಳ ಬೆಲೆಯಲ್ಲೂ ಪ್ರತಿಫಲಿಸಲಿದೆ. ವಿದ್ಯುತ್ ಸೇರಿದಂತೆ ಎಲ್ಲಾ ವಾಹನಗಳಲ್ಲಿ ಚಿಪ್ ಬಳಕೆಯಾಗುತ್ತದೆ. ಆದರೆ ಅದು ಹಳೆ ವಿಧದ ಚಿಪ್‌ಗಳಾಗಿದ್ದು, ಅವುಗಳ ಉತ್ಪಾದನೆ ಬಹುತೇಕ ಕ್ಷೀಣಿಸಿದೆ. ಪರಿಣಾಮ ವಾಹನಗಳ ಬೆಲೆಯಲ್ಲೂ ಏರಿಕೆಯಾಗಲಿದೆ.
ಸದ್ಯದಲ್ಲಿ ಸುಧಾರಣೆಯಿಲ್ಲ:
ಈ ಪರಿಸ್ಥಿತಿ ಸದ್ಯದಲ್ಲಿ ಸುಧಾರಿಸುವುದು ಕಷ್ಟಸಾಧ್ಯ. ಕಾರಣ, ಚಿಪ್ ಉತ್ಪಾದನಾ ಕಂಪನಿಗಳ ಸ್ಥಾಪನೆಗೆ 3-5 ವರ್ಷಗಳಾದರೂ ಬೇಕು. ಆದಕಾರಣ, 2028ರ ವರೆಗೆ ಹೊಸ ಉತ್ಪಾದಕರು ತಲೆಯೆತ್ತದೆ, ಮಾರುಕಟ್ಟೆಯಲ್ಲಿ ಚಿಪ್‌ಗಳ ಕೊರತೆ ಮುಂದುವರೆಯಲಿದೆ.
ಜಲ್ಲಿಕಟ್ಟು ಸ್ಪರ್ಧೆ ಸಾಧಕರಿಗೆ ಸರ್ಕಾರಿ ಉದ್ಯೋಗ: ಸ್ಟಾಲಿನ್
ಮದುರೈ: ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅತಿ ಹೆಚ್ಚು ಗೂಳಿ ಪಳಗಿಸುವ ಅಪರೂಪದ ಸಾಧಕರಿಗೆ ಆದ್ಯತೆ ಮೇರೆಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ. ಜತೆಗೆ, ಜಲ್ಲಿಕಟ್ಟು ಸ್ಪರ್ಧೆಗೆ ಹೆಸರುವಾಸಿಯಾದ ಅಲಂಗನಲ್ಲೂರ್‌ನಲ್ಲಿ ಸ್ಥಳೀಯ ಗೂಳಿಗಳಿಗಾಗಿ ಅತ್ಯಾಧುನಿಕ ಪಶುಸಂಗೋಪನಾ ಆಸ್ಪತ್ರೆ ಸ್ಥಾಪಿಸುವುದಾಗಿ ತಿಳಿಸಿದ್ದಾರೆ.
ಆಲಂಗನಲ್ಲೂರಿನಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಜಲ್ಲಿಕಟ್ಟು ಸ್ಪರ್ಧೆ ಕಾರ್ಯಕ್ರಮದಲ್ಲಿ ಶನಿವಾರ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ಅತಿ ಹೆಚ್ಚುಗೂಳಿಗಳನ್ನು ಪಳಗಿಸಿ ಸಾಧನೆ ಮೆರೆಯುವ ವ್ಯಕ್ತಿಗಳಿಗೆ ಪಶು ಮತ್ತು ಸಂಗೋಪನಾ ಇಲಾಖೆಯಲ್ಲಿ ಆದ್ಯತೆ ಮೇರೆಗೆ ಸೂಕ್ತ ಉದ್ಯೋಗ ನೀಡಲಾಗುವುದು. ತಮಿಳು ಸಾಂಸ್ಕೃತಿಕ ಪರಂಪರೆ ಕಾಪಾಡಿಕೊಂಡು ಬರುತ್ತಿರುವ ಯುವಕರ ಸಾಹಸ ಗೌರವಿಸುವ ಸಲುವಾಗಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.ಇದೇ ವೇಳೆ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಹೆಸರುವಾಸಿಯಾದ ಅಲಂಗನಲ್ಲೂರಿನಲ್ಲಿ 2 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ಪಶು ಆಸ್ಪತ್ರೆ ನಿರ್ಮಿಸಲುದ್ದೇಶಿಸಿದ್ದು, ಅಲ್ಲಿ ಸ್ಥಳೀಯ ಗೂಳಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವ ಮತ್ತು ಚಿಕಿತ್ಸೆ ನೀಡುವ ಕಾರ್ಯ ಮಾಡಲಾಗುವುದು ಎಂದಿದ್ದಾರೆ.
ಶಬರಿಮಲೆ: ಚಿನ್ನದ ಬಳಿಕ ಪಡಿ ಪೂಜೆಯಲ್ಲೂ ಅಕ್ರಮ ?
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಚಿನ್ನ ನಾಪತ್ತೆ ಪ್ರಕರಣ ದೊಡ್ಡ ಸಂಚಲನ ಸೃಷ್ಟಿಸಿರುವ ನಡುವೆಯೇ ಮತ್ತೊಂದು ಅಕ್ರಮದ ಶಂಕೆ ವ್ಯಕ್ತವಾಗಿದ್ದು, ಪಡೆ ಪೂಜೆ ಕಾಣಿಕೆ ಹಂಚಿಕೆಯಲ್ಲಿಯೂ ಭ್ರಷ್ಟಾಚಾರ, ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ದಳ( ವಿಎಸಿಬಿ)ಯ ಗುಪ್ತಚರ ವಿಭಾಗ ಬಹಿರಂಗ ಪಡಿಸಿದೆ. ಪವಿತ್ರ ಪಡಿಪೂಜೆಯ ಬುಕ್ಕಿಂಗ್, ಭಕ್ತರಿಗೆ ಟಿಕೆಟ್ ವಿತರಣೆಯಲ್ಲಿ ನಿಗದಿಗಿಂತ ಹಲವು ಪಟ್ಟು ಹೆಚ್ಚು ದರಕ್ಕೆ ಮಾರಾಟ, ಹಣ ನೀಡಿದವರಿಗೆ ಪೂಜೆಯಲ್ಲಿ ಆದ್ಯತೆ ಸೇರಿದಂತೆ ಅನೇಕ ಅಕ್ರಮ ನಡೆದಿರುವ ಸಾಧ್ಯತೆ ಬಗ್ಗೆ ವರದಿ ಮಾಡಿದೆ. ಮಾತ್ರವಲ್ಲದೇ ತಿರುವಾಂಕೂರು ದೇವಸ್ವಂ ಮಂಡಳಿ( ಟಿಡಿಬಿ) ಸಿಬ್ಬಂದಿ ಮತ್ತು ಇತರ ಏಜೆಂಟ್‌ಗಳು ಇದರಲ್ಲಿ ಭಾಗಿದಾರರು ಎಂದು ಉಲ್ಲೇಖಿಸಿದೆ.


