Asianet Suvarna News Asianet Suvarna News

BTS 2021; ಸಂಶೋಧನೆಗಳಿಂದ ಕೃಷಿ ಸುಧಾರಣೆಯಾಗಬೇಕು; ವೆಂಕಯ್ಯ ನಾಯ್ಡು

* ಬಿಟಿಎಸ್-2021 ಕರ್ಟನ್ ರೈಸರ್ ಪ್ಯಾಕೇಜ್
*  24ನೇ ತಂತ್ರಜ್ಞಾನ ಶೃಂಗಕ್ಕೆ ವೆಂಕಯ್ಯ ನಾಯ್ಡು ಚಾಲನೆ
* 3 ದಿನಗಳ ಸಮಾವೇಶ, 30ಕ್ಕೂ ಹೆಚ್ಚು ದೇಶ, 300 ಕಂಪನಿ ಭಾಗಿ, ಹೈಬ್ರಿಡ್ ರೂಪದ  ಕಾರ್ಯಕ್ರಮ 
* ಸಂಶೋಧನೆ ಮತ್ತು ಅಭಿವೃದ್ಧಿ ಕುರಿತಾದ ಸಂವಾದ 

BTS 2021 scientists to develop technology to address people s pressing problems says M Venkaiah Naidu mah
Author
Bengaluru, First Published Nov 17, 2021, 8:13 PM IST

ಬೆಂಗಳೂರು(ನ.17) ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆಗೆ (BTS 2021)  ಚಾಲನೆ ಸಿಕ್ಕಿದೆ.  ಆಧುನಿಕ ತಂತ್ರಜ್ಞಾನ, ನಾವೀನ್ಯತೆ , ಸಂಶೋಧನೆ ಮತ್ತು ಜ್ಞಾನದ ಬೆಳವಣಿಗೆಗಳು ದೇಶದ ಕೃಷಿ ಸ್ಥಿತಿಯ ಸುಧಾರಣೆಗೂ‌ ಹೆಚ್ಚು ಒತ್ತು ಕೊಟ್ಟು ಮುನ್ನಡೆಯಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು (M.Venkaiah Naidu)ತಿಳಿಸಿದ್ದಾರೆ.

‘ಭವಿಷ್ಯವನ್ನು ಮುನ್ನಡೆಸು’ (ಡ್ರೈವಿಂಗ್ ದ ನೆಕ್ಸ್ಟ್) ಘೋಷವಾಕ್ಯದ 24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, `ಐ.ಟಿ. ಮತ್ತು ಬಿ.ಟಿ.ಯೊಂದಿಗೆ ಎಲ್ಲರೂ ಕರ್ತವ್ಯಪ್ರಜ್ಞೆಯನ್ನು (ಡ್ಯೂಟಿ) ಮೈಗೂಡಿಸಿಕೊಂಡಾಗ ದೇಶವು ಶಕ್ತಿಶಾಲಿಯಾಗಿ (ಮೈಟಿ) ಹೊರಹೊಮ್ಮುತ್ತದೆ. ಕೃಷಿಯು ದೇಶದ ಪ್ರಧಾನ ಕಸುಬಾಗಿರುವುದರಿಂದ ತಾಂತ್ರಿಕತೆಯು ಅದಕ್ಕೆ ಪೂರಕವಾಗಿರಬೇಕು’ ಎಂದರು.

ಜಗತ್ತು ಈಗ ಜ್ಞಾನಾಧಾರಿತವಾಗಿ ರೂಪುಗೊಳ್ಳುತ್ತಿದ್ದು, ಕೋವಿಡ್ ನಂತರ ಡಿಜಿಟಲೀಕರಣಗೊಳ್ಳುತ್ತಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ನೀತಿಗಳು ಎಷ್ಟೇ ಚೆನ್ನಾಗಿದ್ದರೂ ಅಂತಿಮವಾಗಿ ತಂತ್ರಜ್ಞಾನದ ಲಾಭಗಳನ್ನು ಸಮಾಜದ ಕಟ್ಟಕಡೆಯ ಮನುಷ್ಯನಿಗೆ ತಲುಪಿಸಬೇಕಾದ್ದು ಮುಖ್ಯ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಇದನ್ನು ಸಾಧಿಸಿಕೊಂಡು ಬಂದಿದೆ. ತಂತ್ರಜ್ಞಾನದ ಮೂಲಕ ಇಡೀ ವ್ಯವಸ್ಥೆಯನ್ನು ಪರಿವರ್ತಿಸಬೇಕೆಂಬುದೇ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯೂ ಆಗಿದೆ ಎಂದರು. 

ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ವಲಯದ ಪಾತ್ರ ಬಹುಮುಖ್ಯ. ಇದಕ್ಕೆ ಪೂರಕವಾಗಿ ಪ್ರಧಾನಿಯವರು `ಸುಧಾರಣೆ-ಸಾಧನೆ-ಪರಿವರ್ತನೆ’ ಎಂಬುದನ್ನೇ ಮಂತ್ರವಾಗಿಸಿಕೊಂಡು ನೀತಿಗಳನ್ನು ರೂಪಿಸುತ್ತಿದ್ದಾರೆ. ಜಗತ್ತಿನ ವಿಖ್ಯಾತ ಉದ್ದಿಮೆಗಳಲ್ಲೆಲ್ಲ ಭಾರತೀಯರು ನಾಯಕತ್ವ ವಹಿಸಿಕೊಂಡಿರುವುದು ಭಾರತೀಯರಾದ ನಮ್ಮ ಬೌದ್ಧಿಕ ಪ್ರಗತಿಯನ್ನು ದೃಢಪಡಿಸುತ್ತದೆ ಎಂದು ನಾಯ್ಡು ನುಡಿದರು. 

ನಿರ್ದಿಷ್ಟವಾಗಿ ಬೆಂಗಳೂರು ಮತ್ತು ಒಟ್ಟಾರೆ ಭಾರತ ದೇಶವು ಅತ್ಯಂತ ಕ್ರಿಯಾಶೀಲವಾಗಿವೆ. ಇದಕ್ಕೆ ತಕ್ಕಂತೆ ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಸಾರವಾದ `ಹಂಚಿಕೊಳ್ಳುವಿಕೆ ಮತ್ತು ಇನ್ನೊಬ್ಬರ ಬಗ್ಗೆ ಗಮನ ಹರಿಸುವಿಕೆ (ಕಾಳಜಿ)’ ಎರಡನ್ನೂ ನಾವು ತಂತ್ರಜ್ಞಾನದ ಧಾರೆಗಳ ಮೂಲಕ ಮುಂದುವರಿಸಿಕೊಂಡು ಹೋಗಬೇಕು. ತಾಂತ್ರಿಕತೆ ಹಾಗೂ ನಾವೀನ್ಯತೆಯು ಅಂತಿಮ ಸಮಾಜದಲ್ಲಿ ಸಂತೋಷವನ್ನುಂಟು ಮಾಡುವ ಉದ್ದೇಶ ಹೊಂದಿರಬೇಕು ಎಂದರು. 

ಬೆಂಗಳೂರು ತಂತ್ರಜ್ಞಾನ ಸಮಾವೇಶದ ವಿಶೇಷಗಳು

ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), `ಬೆಂಗಳೂರು ಮತ್ತು ಒಟ್ಟಾರೆಯಾಗಿ ರಾಜ್ಯದಲ್ಲಿ ಮನುಷ್ಯನ ಪ್ರತಿಭೆಯ ವಿಕಸನಕ್ಕೆ ತಕ್ಕ ವಾತಾವರಣವಿದ್ದು, ಉದ್ಯಮಗಳ ಬೆಳವಣಿಗೆಗೆ ಪೂರಕವಾದ ರಚನಾತ್ಮಕ ನೀತಿಗಳಿವೆ. ಪ್ರತಿಯೊಂದು ಉದ್ಯಮವನ್ನೂ ರಾಜ್ಯವು ಮುಕ್ತವಾಗಿ ಸ್ವಾಗತಿಸಲಾಗುವುದು’ ಎಂದರು. 

ರಾಜ್ಯವು ಐಟಿ-ಬಿಟಿ ತಂತ್ರಜ್ಞಾನ, ಬಾಹ್ಯಾಕಾಶ, ವೈಮಾಂತರಿಕ್ಷ, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್ ಹೀಗೆ ಎಲ್ಲದರಲ್ಲೂ ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ. ಇದರ ಜತೆಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಯಲ್ಲೂ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ರಾಜ್ಯವು ತಂತ್ರಜ್ಞಾನದ ಭವಿಷ್ಯದ ಬೆಳವಣಿಗೆಗೆ ಪ್ರಶಸ್ತ ತಾಣವಾಗಿದೆ ಎಂದು ವಿವರಿಸಿದರು. 

ಹೊಸ ಕರ್ನಾಟಕದಿಂದ ಹೊಸ ಭಾರತವನ್ನು ಕಟ್ಟಬಹುದು. ಪ್ರಧಾನಿ ನೀಡಿರುವ ‘ಆತ್ಮನಿರ್ಭರ ಭಾರತ’ ನಿರ್ಮಾಣದ ಕನಸು ನನಸಾಗಬೇಕು. ಮೇಕ್ ಇನ್ ಕರ್ನಾಟಕ’ದ ಮೂಲಕ ನಾವು `ಮೇಕ್ ಇನ್ ಇಂಡಿಯಾ’ವನ್ನು ಸಾಕಾರಗೊಳಿಸಬೇಕು. ಯಶಸ್ಸು ಎಂಬುದು ಸಾಧನೆಯ ಒಂದಂಶ ಮಾತ್ರ. ಹೀಗಾಗಿ ಯಶಸ್ಸಿಗಿಂತ ಸಾಧನೆ ಮುಖ್ಯವಾಗಿದ್ದು, ತಂತ್ರಜ್ಞಾನ ವಲಯದಲ್ಲಿರುವವರು ಸಾಧನೆಯನ್ನೇ ಗುರಿಯಾಗಿಸಿಕೊಳ್ಳಬೇಕು. ತಂತ್ರಜ್ಞಾನವು ಕೊನೆಗೆ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಅಭಿಪ್ರಾಯಪಟ್ಟರು. 

ವಾಟ್ಸಪ್ ನಲ್ಲಿ ಹೊಸ ಪೀಚರ್ ಬಂತು

ಸ್ವಾಗತ ಭಾಷಣ ಮಾಡಿದ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ(Dr. CN Ashwath Narayan) `ಕೋವಿಡ್ ಪಿಡುಗಿನ ನಂತರ ಅಭಿವೃದ್ಧಿಯ ಮಾನದಂಡಗಳು ಬದಲಾಗಿದ್ದು, ರಾಜ್ಯವು ಈ ಪರಿಸ್ಥಿತಿಯನ್ನು ತಂತ್ರಜ್ಞಾನದ ಬಲದಿಂದ ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಿದೆ’ ಎಂದರು. 

ಉದ್ದಿಮೆಗಳ ಬೆಳವಣಿಗೆಗೆ ಸರಕಾರವು ಹಲವು ಅನುಕೂಲಕರ ನೀತಿಗಳನ್ನು ರೂಪಿಸಿದೆ. ಇದರಿಂದಾಗಿ ಐಟಿ, ಬಿಟಿ, ಯೂನಿಕಾರ್ನ್  ಉದ್ದಿಮೆಗಳಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ನವೋದ್ಯಮಗಳ ಸ್ಥಾಪನೆಯಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಅಗ್ರಪಂಕ್ತಿಯಲ್ಲಿದೆ. ನೀತಿ ಆಯೋಗದ ಸಮೀಕ್ಷೆಯಲ್ಲಿ ರಾಜ್ಯವು ಸತತ ಎರಡನೇ ವರ್ಷವೂ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಐಟಿ ರಫ್ತಿನಲ್ಲಿ ಕರ್ನಾಟಕವು ದೇಶದ ಶೇ.40ರಷ್ಟು ಕೊಡುಗೆಯ ಸಿಂಹಪಾಲನ್ನು ನೀಡುತ್ತಿದೆ ಎಂಬುದರ ಬಗ್ಗೆ ಗಮನಸೆಳೆದರು. 

ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಐಟಿ, ಬಿಟಿ ಮತ್ತು ಸ್ಟಾರ್ಟಪ್ ವಿಷನ್ ಗ್ರೂಪ್ ಗಳ ಮುಖ್ಯಸ್ಥರಾದ ಕ್ರಮವಾಗಿ ಕ್ರಿಸ್ ಗೋಪಾಲಕೃಷ್ಣನ್, ಕಿರಣ್ ಮಜುಂದಾರ್ ಷಾ ಮತ್ತು ಪ್ರಶಾಂತ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. 

ಉಳಿದಂತೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಕಿಂಡ್ರೆಲ್ ಕಂಪನಿಯ ಸಿಇಓ ಮಾರ್ಟಿನ್ ಶ್ರೋಟರ್ ಶೃಂಗವನ್ನು ಉದ್ದೇಶಿಸಿ ವರ್ಚುಯಲ್ ಸೌಲಭ್ಯದ ಮೂಲಕ ಮಾತನಾಡಿದರು.

ಗೋಷ್ಠಿಗಳು; ಬಿಟಿಎಸ್ ವಿದ್ವತ್ ಗೋಷ್ಠಿಯಲ್ಲಿ ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಮಾತನಾಡಿದರು. ಆಹಾರ ಭದ್ರತೆ, ಸುಸ್ಥಿರ ಇಂಧನ, ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು  ನೀಡುವುದರ ಬಗ್ಗೆ ತಿಳಿಸಿದರು.

ಬೆಂಗಳೂರು: ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದಲ್ಲಿ ಮಾತ್ರ ಭವಿಷ್ಯ ಸುಭದ್ರವಾಗಿರುತ್ತದೆ.  ಆಹಾರ ಸುಭದ್ರತೆ, ಸುಸ್ಥಿರ ಇಂಧನ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗಾಗಿ ನಿರಂತರವಾಗಿ ಅಧ್ಯಯನ ಮತ್ತು ಸಂಶೋಧನೆಗಳು ನಡೆಯುವುದು ಅವಶ್ಯಕ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಅಭಿಪ್ರಾಯಪಟ್ಟರು. 

ಸುಸ್ಥಿರ ಅಭಿವೃದ್ಧಿ ಹೆಚ್ಚಿಸುವ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ನಡೆಸುವ ಸಾಧ್ಯತೆಗಳು ಹೆಚ್ಚಬೇಕು ಎಂದರು. 

ಗೂಗಲ್, ಮೈಕ್ರೊಸಾಫ್ಟ್ ಅಂತಹ ಖಾಸಗಿ ಸಂಸ್ಥೆಗಳು ಸಹ ಸಂಶೋಧನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ. ಕಡಿಮೆ ದರದಲ್ಲಿ ದೊರಕುವ ಉದ್ಯೋಗಿಗಳಿಂದ ಆರ್ಥಿಕತೆ ಬೆಳೆಯುವುದಿಲ್ಲ, ಬದಲಾಗಿ ತಂತ್ರಜ್ಞಾನ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದಲ್ಲಿ ಮಾತ್ರ ಭವಿಷ್ಯ ಸುಭದ್ರವಾಗಿರಲಿದೆ. ಈಗ ಭಾರತದಲ್ಲಿ ಸಂಶೋಧನೆಗಳಿಗಾಗಿ ಜಿ.ಡಿ.ಪಿ.ಯ ಶೇ 0.8ರಷ್ಟು ಹೂಡಿಕೆಯಾಗುತ್ತಿದ್ದು, ಇದು ಕೊರಿಯಾ, ಜಪಾನ್ ಮತ್ತಿತರ ದೇಶಗಳಿಗೆ ಹೋಲಿಸಿದರೆ ಶೇ 25ಕ್ಕಿಂತ ಕಡಿಮೆ ಇದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದು ಸಮಾಧಾನಕರ ಎಂದರು. 

ಸಂಶೋಧನೆ ಮತ್ತು ತಂತ್ರಜ್ಞಾನ ಪರಸ್ಪರ ಪೂರಕ.  ಯಾವುದೇ ದೇಶದ ಬೆಳವಣಿಗೆಯು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳಿಗಿಂತ  ಜ್ಞಾನ ಮತ್ತು ಸಂಶೋಧನೆಯ ಮೇಲೆ ಅವಲಂಬಿತವಾಗಿರುತ್ತದೆ. ತಂತ್ರಜ್ಞಾನ ಮತ್ತು ಸಂಶೋಧನೆಗಳಿಗೆ ಹೆಚ್ಚು ತೆರೆದುಕೊಂಡಿಲ್ಲದ ರಾಷ್ಟ್ರಗಳು ಅಭಿವೃದ್ಧಿ ಹೊಂದಿಲ್ಲ ಎಂದು ಪ್ರೊ. ವೆಂಕಿ ರಾಮಕೃಷ್ಣನ್ ಅಭಿಪ್ರಾಯಪಟ್ಟರು. 

ಇಂದು ಜಗತ್ತಿನ ಟ್ರಿಲಿಯನ್ ಗಟ್ಟಲೆ ಡಾಲರ್ ವ್ಯವಹಾರ ನಡೆಸುವ ಹಲವು ಕಂಪನಿಗಳು ಹುಟ್ಟಿರುವುದಕ್ಕೆ ಹೊಸ ಸಂಶೋಧನೆಗಳೇ ಕಾರಣ.  ಕ್ವಾಂಟಮ್ ವಿಜ್ಞಾನದ ಅಧ್ಯಯನದ ಫಲವಾಗಿ ಟ್ರಾನ್ಸಿಸ್ಟರ್. ಲೇಸರ್ನಂತಹ ಹೊಸ ಶೋಧನೆಗಳು ಸಾಧ್ಯವಾದವು. ನ್ಯೂಟನ್ ಅವರ ‘ಲಾ ಆಫ್ ಮೋಷನ್’ ಬಳಸಿ ರಾಕೆಟ್, ಉಪಗ್ರಹಗಳ ಉಡಾವಣೆಯಲ್ಲಿ ಬಹಳ ದೊಡ್ಡ ಸಾಧನೆ ಸಾಧ್ಯವಾಯಿತು. ಜಿಪಿಎಸ್ ಅನ್ವೇಷಣೆಯ ಹಿಂದಿನ ತತ್ವವು ಆಲ್ಬರ್ಟ್ ಐನ್ ಸ್ಟೀನ್ ಅವರ ‘ಥಿಯರಿ ಆಫ್ ರಿಲೇಟಿವಿಟಿ’ಯನ್ನು ಆಧರಿಸಿದೆ ಎಂದು ವಿವರಿಸಿದರು. 

ಕೋವಿಡ್ ಸಂದರ್ಭದಲ್ಲಿ ನೀಡಲಾದ ಲಸಿಕೆಯ ಶೋಧನೆಯ ಹಿಂದೆ ಸುಮಾರು 1965-2018ರ ನಡುವಿನ ಹಲವು ಶೋಧನೆಗಳು ನೆರವಿಗೆ ಬಂದಿವೆ ಎಂದ ಅವರು, ತಮ್ಮ ಸಂಶೋಧನೆಯ ರೈಬೋಸೋಮ್ಸ್ ಅಧ್ಯಯನವು ಕೋವಿಡ್ ಲಸಿಕೆ ತಯಾರಿಕೆಯಲ್ಲಿ ನೆರವಾದ ಬಗೆ, ಇನ್ನಿತರ ಪೂರಕ ಶೋಧನೆಗಳ ಬಗ್ಗೆ ವಿಷಯಗಳನ್ನು ಹಂಚಿಕೊಂಡರು. 

ಬೆಂಗಳೂರು ಜಗತ್ತಿನ ತಂತ್ರಜ್ಞಾನದ ಬೇಡಿಕೆಯನ್ನು ಪೂರೈಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಕೋವಿಡ್ ನಂತರ ಜಗತ್ತಿನ ಡಿಜಿಟಲ್ ಎಕಾನಮಿ ವ್ಯವಸ್ಥೆಯು ಬಹು ದೊಡ್ಡ ಸ್ಥಿತ್ಯಂತರವನ್ನು ಕಂಡಿದ್ದು, ಭಾರತದಲ್ಲೇ  ನೂರು ಕೋಟಿ ವ್ಯವಹಾರ ನಡೆಸುವಂತೆ ಸಾಧ್ಯವಾಗಿದ್ದು ತಂತ್ರಜ್ಞಾನದ ಪ್ರಭಾವದಿಂದ ಎಂದು ಕಿಂಡ್ರೆಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್  ಅಭಿಪ್ರಾಯಪಟ್ಟರು. 

ಸಾಮಾಜಿಕ ಜೀವನ, ವೈದ್ಯವೃತ್ತಿ, ಉದ್ಯೋಗಗಳು, ಕೃಷಿ-ಆಹಾರ ಉತ್ಪನ್ನಗಳ ಕ್ಷೇತ್ರಗಳ ಕಾರ್ಯಶೈಲಿಯಲ್ಲಿ ಕೋವಿಡ್ ತರುವಾಯದ ಸಮಗ್ರ ಬದಲಾವಣೆಗೆ ತಂತ್ರಜ್ಞಾನವು ಸಹಾಯಕವಾಗಿ ಒದಗಿಬಂದಿದೆ ಎಂದರು. 

2020ರ ವೇಳೆಗೆ ಭಾರತದಲ್ಲಿ 500 ದಶಲಕ್ಷ ಸ್ಮಾರ್ಟ್ ಫೋನ್ ಬಳಕೆದಾರರಿದ್ದರೆ, ಈಗ ಅದು 820 ದಶಲಕ್ಷಕ್ಕೆ ಹೆಚ್ಚಾಗಿದೆ. ಭಾರತ ಸರ್ಕಾರವು ಕೇವಲ 278 ದಿನಗಳಲ್ಲಿ 100 ಕೋಟಿ ಕೋವಿಡ್ ಲಸಿಕೆ ನೀಡಿರುವುದು ದೊಡ್ಡ ಸಾಧನೆಯಾಗಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯ ಉಜ್ವಲವಾಗಿದ್ದು ದತ್ತಾಂಶಗಳ ಬಳಕೆ ಮತ್ತು ನಿರ್ವಹಣೆ ಮೂಲಕ ಮಹತ್ತನ್ನು ಸಾಧಿಸಬಹುದು ಎಂದು ಹೇಳಿದರು. 

ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಅವರು ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಅವರ ಬದುಕು-ಸಾಧನೆಗಳ ಕಿರುಪರಿಚಯ ಮಾಡಿದರು.

ಬಿಟಿಎಸ್-2021ರಲ್ಲಿ ಯಶಸ್ವಿ ಸಾಧಕಿಯರ ಪ್ರತಿಪಾದನೆ:  ಮಹಿಳೆಯರು ಪ್ರತಿಭೆ ಮತ್ತು ಸಾಮರ್ಥ್ಯಗಳಲ್ಲಿ ಪುರುಷರಿಗೆ ಸರಿಸಮನಾಗಿದ್ದು, 2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ಯಮಶೀಲತೆಗೆ ಅಪಾರ ಅವಕಾಶಗಳಿವೆ. ಮಹಿಳಾ ಸಮೂಹವನ್ನು ಸಕಾರಾತ್ಮಕವಾಗಿ ಬಿಂಬಿಸಿದರೆ ದೇಶದಲ್ಲಿ 15 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಪೋರ್ಟಿಯಾ ಮೆಡಿಕಲ್ ಕಂಪನಿಯ ಸಹ-ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮೀನಾ ಗಣೇಶ್ ಹೇಳಿದ್ದಾರೆ. 

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಮೊದಲ ದಿನವಾದ ಬುಧವಾರ ನಡೆದ `ಮಹಿಳಾ ಉದ್ಯಮಶೀಲತೆ: ಸವಾಲುಗಳು ಮತ್ತು ಪರಿಹಾರಗಳು’ ವಿಚಾರಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. 

ಮಹಿಳೆಯರ ದೃಷ್ಟಿಯಿಂದ ಹೇಳುವುದಾದರೆ ಕಳೆದ 20 ವರ್ಷಗಳಲ್ಲಿ ಪರಿಸ್ಥಿತಿ ಸಾಕಷ್ಟು ಸಕಾರಾತ್ಮಕವಾಗಿ ಬದಲಾಗಿದೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಕೆಲವೇ ಉದ್ಯೋಗಗಳಿಗೆ ಸೀಮಿತಗೊಳಿಸಬಾರದು. ಕರ್ನಾಟಕದಲ್ಲಂತೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿದ್ದು, ಮಹಿಳಾ ಸಾಹಸಿಗಳಿಗೆ ಅಗತ್ಯ ಬಂಡವಾಳ ವ್ಯವಸ್ಥೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು. 

ಉದ್ಯಮಶೀಲತೆ ಬೆಳೆಯಬೇಕಾದರೆ ನಾವು ಹೆಚ್ಚು ರೋಲ್ ಮಾಡೆಲ್ ಗಳನ್ನು ಬಿಂಬಿಸಬೇಕು. ಜೊತೆಗೆ ಶಿಕ್ಷಣ ಕ್ರಮದಲ್ಲಿ ಪದವಿ ಮಟ್ಟದಲ್ಲಾದರೂ ಉದ್ಯಮಶೀಲತೆಯ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಬಲು ದೊಡ್ಡ ಶಕ್ತಿ ಬರುತ್ತದೆ ಎಂದು ಮೀನಾ ಸಲಹೆ ನೀಡಿದರು. 

ಷುಗರ್ ಕಾಸ್ಮೆಟಿಕ್ಸ್ ಕಂಪನಿಯ ಸಹಸಂಸ್ಥಾಪಕಿ ಮತ್ತು ಸಿಇಒ ಸಾಕ್ಷಿ ಚೋಪ್ರಾ ಮಾತನಾಡಿ, ಕಂಪನಿಗಳಲ್ಲಿ ಮಹಿಳೆಯರಿಗೆ ಉನ್ನತ ಮಟ್ಟದಲ್ಲಿ ಅಧಿಕಾರ ಮತ್ತು ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶಗಳು ಹೆಚ್ಚುಹೆಚ್ಚು ಸಿಗಬೇಕು. ಹೀಗಾದರೆ, ಬಂಡವಾಳ ಕ್ರೋಡೀಕರಿಸಲು ಸುಲಭವಾಗುತ್ತದೆ ಎಂದರು. 

ಉದ್ಯಮಶೀಲತೆ ಎಂದರೆ ಕೇವಲ ದೊಡ್ಡ ನಗರಗಳತ್ತ ನೋಡುವುದೆಂದು ಅರ್ಥವಲ್ಲ. ಇಲ್ಲಿನ ಸಣ್ಣಪುಟ್ಟ ಪೇಟೆ-ಪಟ್ಟಣಗಳು ನಿಜಕ್ಕೂ ಭಾರತದ ಹೃದಯದಂತಿವೆ. ಇಲ್ಲಿರುವ ಉಜ್ವಲ ಅವಕಾಶಗಳನ್ನು ಉದ್ಯಮಶೀಲ ಮಹಿಳೆಯರು ಬಳಸಿಕೊಳ್ಳಬೇಕು. ಇದರಿಂದ ನಷ್ಟದ ಸಂಭವನೀಯತೆ ತಾನಾಗಿಯೇ ನಗಣ್ಯವಾಗುತ್ತದೆ ಎಂದು ಅವರು ಕಿವಿಮಾತು ನುಡಿದರು. 

ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸಿಕೋಯಿಯಾ ಕ್ಯಾಪಿಟಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ವಿನೀತಾ ಸಿಂಗ್, ಮಹಿಳೆಯರು ಎಲ್ಲ ಸಮಸ್ಯೆಗಳನ್ನೂ ಲಿಂಗ ತಾರತಮ್ಯಕ್ಕೆ ತಳುಕು ಹಾಕಬಾರದು. ದೇಶದಲ್ಲಿ ಈಗ ಲಿಂಗ ಸಮಾನತೆ ವ್ಯಾಪಕವಾಗಿ ಕಂಡುಬರುತ್ತಿದೆ. ಕಳೆದ 5-6 ವರ್ಷಗಳಿಂದ ಮಹಿಳೆಯರು ದೊಡ್ಡ ಗ್ರಾಹಕ ಶಕ್ತಿಯಾಗಿ ಹೊರಹೊಮ್ಮಿದ್ದು, ಇದು ಸ್ತ್ರೀ ಸಮೂಹಕ್ಕೆ ವರದಾನವಾಗಿದೆ. ಕೋವಿಡ್ ನಂತರದ ಸಂದರ್ಭವಂತೂ ಮಹಿಳೆಯರಿಗೆ ಸದವಕಾಶ ಸೃಷ್ಟಿಸಿದೆ ಎನ್ನುವ ಮೂಲಕ ಗಮನ ಸೆಳೆದರು. 

ಮಹಿಳಾ ಉದ್ಯಮಿಗಳು ಒಳ್ಳೆಯ ತಂಡ ಕಟ್ಟುವುದಕ್ಕೆ ಮತ್ತು ಪ್ರತಿಭಾವಂತ ಅನುಭವಿಗಳ ನೇಮಕಕ್ಕೆ ಒತ್ತು ಕೊಡಬೇಕು. ಇದರ ಜತೆಗೆ ಬಂಡವಾಳ ಕ್ರೋಡೀಕರಣವನ್ನು ಸರಕಾರ ಮತ್ತು ಖಾಸಗಿ ವಲಯದ ಉದ್ದಿಮೆಗಳು ಸುಲಭಗೊಳಿಸಬೇಕು ಎಂದು ನುಡಿದರು. ಹಿರಿಯ ಪತ್ರಕರ್ತೆ ಅರ್ಚನಾ ರಾಯ್ ಸಂವಾದವನ್ನು ನಡೆಸಿಕೊಟ್ಟರು. 

Follow Us:
Download App:
  • android
  • ios