ನೆರೆಪೀಡಿತ ಜಿಲ್ಲೆಗಳಲ್ಲಿ ಬಿಎಸ್ಸೆನ್ನೆಲ್ ಉಚಿತ ಕರೆ, ಡೇಟಾ
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿರುವ ಪ್ರದೇಶಗಳಲ್ಲಿ ಉಚಿತ ಸೇವೆ ನೀಡಲು BSNL ನಿರ್ಧರಿಸಿದೆ.
ಬೆಂಗಳೂರು [ಆ.11]: ರಾಜ್ಯದ ಪ್ರವಾಹಪೀಡಿತ ಪ್ರದೇಶಗಳ ತನ್ನ ಗ್ರಾಹಕರಿಗೆ ಉಚಿತ ಕರೆ, ಡೇಟಾ ಸೌಲಭ್ಯ ಕಲ್ಪಿಸುವ ಮೂಲಕ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆ ನೆರವಿನ ಹಸ್ತ ಚಾಚಿದೆ.
ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಬೆಳಗಾವಿ, ಯಾದಗಿರಿ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಶನಿವಾರದಿಂದ ಏಳು ದಿನಗಳ ಕಾಲ ಗ್ರಾಹಕರಿಗೆ ಉಚಿತ ಕರೆ ಸೌಲಭ್ಯ ಕಲ್ಪಿಸಿದೆ. ಈ ಅವಧಿಯಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರು ಬಿಎಸ್‌ಎನ್‌ಎಲ್ ನೆಟ್‌ವರ್ಕ್ಗೆ ಅನಿಯಮಿತ ಉಚಿತ ಕರೆ ಹಾಗೂ ಬೇರೆ ನೆಟ್‌ವರ್ಕ್ಗಳಿಗೆ ಉಚಿತ 20 ನಿಮಿಷ ಕರೆ ಮಾಡಬಹುದು. ಜತೆಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ಹಾಗೂ ಒಂದು ಜಿ.ಬಿ. ಇಂಟರ್‌ನೆಟ್ ಡೇಟಾ ಸೌಲಭ್ಯ ಪಡೆಯಬಹುದು.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬದ್ಧವಾಗಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ನೀರು, ಭೂಕುಸಿತ ಮೊದಲಾದ ಕಾರಣಗಳಿಂದ ನೆಟ್‌ವರ್ಕ್ ಟವರ್, ಆಪ್ಟಿಕಲ್ ಫೈಬರ್ ಕೇಬಲ್‌ಗಳಿಗೆ ಕೊಂಚ ಹಾನಿಯಾಗಿದೆ. ಈ ನಡುವೆ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಸಮಸ್ಯೆ ಇರುವ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತದ ಸಹಕಾರ ಪಡೆದು ಸರಿಪಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಬಿಎಸ್‌ಎನ್‌ಎಲ್ ಕಾಲ್ ಸೆಂಟರ್ 1503/18001801503 ಸಂಪರ್ಕಿಸಬಹುದು ಎಂದು ಬಿಎಸ್‌ಎನ್‌ಎಲ್ ಕರ್ನಾಟಕ ವೃತ್ತದ ಚೀಫ್ ಜನರಲ್ ಮ್ಯಾನೇಜರ್ (ಟೆಲಿಕಾಂ) ಸುಶೀಲ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.