ಭಾಲ್ಕಿ:  ಉಚಿತ ವೈಫೈ ಸೌಲಭ್ಯ ಹೊಂದಿದ ರಾಜ್ಯದ ಮೊದಲ ಪಟ್ಟಣವಾಗಿ ಬೀದರ್‌ ಜಿಲ್ಲೆಯ ಭಾಲ್ಕಿ ಹೊರಹೊಮ್ಮಿದೆ. 50 ಲಕ್ಷ ರು. ವೆಚ್ಚದಲ್ಲಿ ಪಟ್ಟಣದಲ್ಲಿ ಅಳವಡಿಸಿರುವ 10 ಎಂಬಿಪಿಎಸ್‌ ಸಾಮರ್ಥ್ಯದ 13 ವೈಫೈ, ಹಾಟ್‌ಸ್ಪಾಟ್‌ಗಳಿಗೆ ಬುಧವಾರ ಚಾಲನೆ ನೀಡಲಾಯಿತು.

ಪಟ್ಟಣದ ಗಾಂಧಿವೃತ್ತದ ಬಳಿ ವೈಫೈ ಸೌಲಭ್ಯಕ್ಕೆ ಚಾಲನೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, 13 ಸಾರ್ವಜನಿಕ ಸ್ಥಳಗಳಲ್ಲಿ ಬಿಎಸ್‌ಎನ್‌ಎಲ್‌ನ ವೈಫೈ ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗಿದೆ. ರಾಜ್ಯದಲ್ಲಿ ಉಚಿತ ವೈಫೈ ಸೌಲಭ್ಯ ಹೊಂದಿರುವ ಸಂಪೂರ್ಣ ಪಟ್ಟಣವಾಗಿ ಭಾಲ್ಕಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ ಎಂದರು.

ಒಂದು ಹಾಟ್‌ಸ್ಪಾಟ್‌ ಕೇಂದ್ರದಿಂದ ಸುಮಾರು 2 ಸಾವಿರ ಮಂದಿ ವೈಫೈ ಸೌಲಭ್ಯ ಪಡೆಯಬಹುದು. ಏಕಕಾಲದಲ್ಲಿ ಸುಮಾರು 22 ಸಾವಿರಕ್ಕೂ ಹೆಚ್ಚು ಜನ ಇಂಟರ್‌ನೆಟ್‌ ಬಳಸಬಹುದಾಗಿದೆ. ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಬಳಕೆದಾರರು ದಿನಕ್ಕೆ 1 ಜಿಬಿಯಷ್ಟುಉಚಿತವಾಗಿ ಇಂಟರ್‌ನೆಟ್‌ ಬಳಸಿಕೊಳ್ಳಬಹುದು ಎಂದರು.

ಇಲ್ಲಿನ ಡಾ.ಅಂಬೇಡ್ಕರ್‌ ವೃತ್ತ, ಮಹಾತ್ಮಾ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಸರ್ಕಾರಿ ಪದವಿ ಕಾಲೇಜು, ಚನ್ನಬಸವೇಶ್ವರ ಪದವಿ ಕಾಲೇಜು, ತಾ.ಪಂ. ಕಚೇರಿ, ಶಿವಾಜಿ ವೃತ್ತ, ತಹಸೀಲ್‌ ಕಚೇರಿ, ಸರ್ಕಾರಿ ಆಸ್ಪತ್ರೆ ಹಾಗೂ ಎಸ್‌ಬಿಐ ಬ್ಯಾಂಕ್‌ ಸೇರಿದಂತೆ ಒಟ್ಟು 13 ಪ್ರದೇಶಗಳಲ್ಲಿ ಹಾಟ್‌ಸ್ಪಾಟ್‌ ಅಳವಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಚಿವ ರಹೀಮ್‌ ಖಾನ್‌, ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ ಇತರರಿದ್ದರು.