AnyDesk Down: ಕೈಕೊಟ್ಟ ಎನಿಡೆಸ್ಕ್ ಸರ್ವರ್, ಜಗತ್ತೇ ಡಿಸ್ಕನೆಕ್ಟ್
AnyDesk Down: ಎನಿಡೆಸ್ಕ್ ಆ್ಯಪ್‌ನ ಸೇವೆಯಲ್ಲಿ ವ್ಯತ್ಯಯವಾಗಿರುವ ಬಗ್ಗೆ ಹಲವು ಬಳಕೆದಾರರು ದೂರು ನೀಡಿದ್ದಾರೆ
ನವದೆಹಲಿ (ಆ. 28): ಜಗತ್ತಿನ ಯಾವುದೇ ಮೂಲೆಯಲ್ಲಿರುವ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳನ್ನು ರಿಮೋಟ್ (Remote) ಪಡೆಯಲು ಸಹಾಯ ಮಾಡುವ ಎನಿಡೆಸ್ಕ್ (AnyDesk) ಆ್ಯಪ್‌ನ ಸೇವೆಯಲ್ಲಿ ವ್ಯತ್ಯಯವಾಗಿರುವ ಬಗ್ಗೆ ಹಲವು ಬಳಕೆದಾರರು ದೂರು ನೀಡಿದ್ದಾರೆ. ಕೊರೋನಾ ನಂತರ ವರ್ಕ್ ಫ್ರಾಮ್ ಹೋಮ್ ಮಾದರಿಗೆ ಬದಲಾಗಿರುವ ಉದ್ಯೋಗಿಗಳಿಗೆ ಎನಿಡೆಸ್ಕ್ ಆ್ಯಪ್ ಬೆನ್ನಲುಬಾಗಿ ನಿಂತಿದೆ. ಎನಿಡೆಸ್ಕ್ ಆ್ಯಪ್ ಸೇವೆಯಲ್ಲಿ ವ್ಯತ್ಯಯವಾಗಿರುವುದರಿಂದ ಕೆಲಕಾಲ ಜಗತ್ತೇ ಡಿಸ್ಕನೆಕ್ಟ್ ಆಗಿದೆ. ಈ ಬಗ್ಗೆ ಟ್ವೀಟರ್‌ನಲ್ಲಿ ಹಲವು ಬಳಕೆದಾರರು ದೂರು ನೀಡಿದ್ದಾರೆ.
ಇನ್ನು ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎನಿಡೆಸ್ಕ್ "ನಮ್ಮ ಬ್ಯಾಕೆಂಡ್ ಸಿಸ್ಟಮ್‌ಗಳಲ್ಲಿ ಒಂದು ವಿಫಲವಾಗಿದೆ ಮತ್ತು ನಾವು ಬದಲಿಗೆ ಇನ್ನೊಂದು ವ್ಯವಸ್ಥೆಯನ್ನು ಅಳವಡಿಸಿದ್ದೇವೆ ಮತ್ತು ಕ್ರಮೇಣ ನಮ್ಮ ಸೇವೆಯನ್ನು ಮರುಸ್ಥಾಪಿಸುತ್ತೇವೆ. ಸ್ಟೇಟಸ್ ಪುಟವನ್ನು ಪರಿಶೀಲಿಸಿ, ಅಲ್ಲಿ ನಿರಂತರವಾಗಿ ಮಾಹಿತಿ ನೀಡುತ್ತೇವೆ" ಎಂದು ಹೇಳಿದೆ.
ಬಳಕೆದಾರರ ವರದಿಗಳ ಬಳಿಕ ಎನಿಡೆಸ್ಕ್ ತಕ್ಷಣ ಕ್ರಮಕೈಗೊಂಡಿದ್ದು ಸೇವೆಯನ್ನು ಮರುಸ್ಥಾಪಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. "ನಾವು ಸಮಸ್ಯೆ ಪರಿಹರಿಸುತ್ತಿದ್ದೇವೆ ಮತ್ತು ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡುತ್ತೇವೆ" ಎಂದು ಹೇಳಿದೆ. ಎನಿಡೆಸ್ಕ್ ಸೇವೆ ವ್ಯತ್ಯಯದ ಕೆಲ ಕಾಲ ಬಳಿಕ ಈಗ ಎನಿಡೆಸ್ಕ್ ಸೇವೆ ಮರುಸ್ಥಾಪನೆಯಾಗಿದೆ.
ಎನಿಡೆಸ್ಕ್ ಎಂದರೇನು?: ಕೊರೋನಾ ನಂತರ ಜಗತ್ತಿನ ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಾಮ್ ಮಾಡಲು ಅವಕಾಶ ನೀಡಿದ್ದವು. ಕೊರೋನಾ ಕ್ರಮೇಣ ಕಡಿಮೆಯಾದಂತೆ ಕಂಪನಿಗಳು ವರ್ಕ್ ಫ್ರಾಂ ಆಫೀಸ್ ಪ್ರಾರಂಭಿಸಿವೆ. ಆದರೆ ಇನ್ನೂ ವರ್ಕ್ ಫ್ರಾಂ ಮಾದರಿಯಲ್ಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತಮ್ಮ ಕಚೇರಿಯಲ್ಲಿರುವ ಸಿಸ್ಟಮ್‌ಗಳನ್ನು ಆಕ್ಸ್‌ಸ್ ಪಡೆಯಲು ಹಲವು ಆ್ಯಪ್‌ಗಳು ಲಭ್ಯವಿವೆ.
ಇಂಥಹ ಆ್ಯಪ್‌ಗಳಲ್ಲಿ ಎನಿಡೆಸ್ಕ್ ಕೂಡ ಒಂದು. ಎನಿಡೆಸ್ಕ್ ಬಳಸಿ ಯಾವುದೇ ಸಿಸ್ಟಮನ ಆಕ್ಸಸ್ ಪಡೆದು ನಿರಾಯಾಸವಾಗಿ ಕೆಲಸ ಮಾಡಬಹುದು. ನೂರಾರು ಕಿಲೋ ಮೀಟರ್ ದೂರದಲ್ಲಿರುವ ಕಂಪ್ಯೂಟರನ್ನು ಮನೆಯಲ್ಲೇ ಕುಳಿತು ಚಲಾಯಿಸಬಹುದು. ಹೀಗೆ ಕಚೇರಿಯಲ್ಲಿ ಸಿಸ್ಟಮ್ ಮುಂದೆ ಕುಳಿತು ಮಾಡುವ ಕೆಲಸವನ್ನು ಮನೆಯಲ್ಲಿ ಕುಳಿತ ಮಾಡಬಹುದು.
ಯಾವುದೇ ಜಾಗದಲ್ಲಿ ಕುಳಿತು ಕಚೇರಿಯಲ್ಲಿರುವ ಸಿಸ್ಟನಲ್ಲಿ ಕೆಲಸ ಮಾಡಲು ಈ ಆ್ಯಪ್ ಸಹಾಯ ಮಾಡುತ್ತದೆ. ಇನ್ನು ತಂತ್ರಜ್ಞಾನ ಬೆಳೆದಂತೆ ಈಂಥಹ ಆ್ಯಪ್‌ಗಳ ವ್ಯಾಪ್ತಿ ಹೆಚಿದ್ದು, ಇತ್ತಿಚೆಗೆ ಎನಿಡೆಸ್ಕ್ ಸೇರಿದಂತೆ ಇಂಥಹ ಆ್ಯಪ್‌ಗಳನ್ನು ಬಳಸಿ ಜನರನ್ನು ವಂಚಿಸಿದ ಪ್ರಕರಣಗಳೂ ವರದಿಯಾಗಿವೆ.