ಬೆಂಗಳೂರು (ಫೆ. 12): ಅಮೆರಿಕ ಮೂಲದ ಚುಟುಕು ಜಾಲತಾಣ ಟ್ವೀಟರ್‌, ಕೇಂದ್ರ ಸರ್ಕಾರದ ಜೊತೆಗೆ ಸಮರಕ್ಕೆ ಇಳಿದಿರುವಾಗಲೇ, ಇತ್ತ ಅದಕ್ಕೆ ಪರ್ಯಾಯವೆಂದು ಬಿಂಬಿತವಾದ ‘ಕೂ’ ಎಂಬ ದೇಶೀ ಆ್ಯಪ್‌ ಬಹಳ ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಈ ನವಜಾತ ತಾಣ, ಇತ್ತೀಚಿನ ದಿನಗಳಲ್ಲಿ ಭಾರೀ ಜನಪ್ರಿಯವಾಗಿದೆ.

ಕೆಲವೇ ತಿಂಗಳ ಅಂತರದಲ್ಲಿ ಆ್ಯಪ್‌ನ ಬಳಕೆದಾರರ ಸಂಖ್ಯೆ 30 ಲಕ್ಷ ದಾಟಿದೆ. ಕೇಂದ್ರ ಸಚಿವರು, ಕರ್ನಾಟಕದ ಹಲವು ಸಚಿವರು, ಶಾಸಕರು, ಸೆಲೆಬ್ರಿಟಿಗಳು ಕ್ರೀಡಾಪಟುಗಳು ಕೂ ಆ್ಯಪ್‌ ಬಳಸಲು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂ ಆಪ್‌ನ ಬಗೆಗಿನ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಏನಿದು ಕೂ ಆಪ್‌?
‘ಕೂ’ ಎನ್ನುವುದು ಟ್ವೀಟರ್‌ ರೀತಿಯ ಒಂದು ಸಾಮಾಜಿಕ ಜಾಲತಾಣ ವೇದಿಕೆ. ಕೂ ಆ್ಯಪ್‌ 2020ರ ಮಾಚ್‌ರ್‍ನಲ್ಲಿ ಬಿಡುಗಡೆಗೊಂಡಿದೆ. ಭಾರತದಲ್ಲೇ ಅಭಿವೃದ್ಧಿಯಾದ ಆ್ಯಪ್‌ ಇದಾಗಿದೆ. ಬೆಂಗಳೂರಿನ ಉದ್ಯಮಿಗಳಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್‌ ಬಿಡ್‌ವಟ್ಕಾ ಈ ಆ್ಯಪ್‌ನ ಸ್ಥಾಪಕರಾಗಿದ್ದಾರೆ. ಕಳೆದ ವರ್ಷ ಕೇಂದ್ರ ಸರ್ಕಾರ ಆತ್ಮನಿರ್ಭರ ಆ್ಯಪ್‌ ಚಾಲೆಂಜ್‌ ಆಯೋಜಿಸಿದ್ದಾಗ ಟಿಕ್‌ಟಾಕ್‌ಗೆ ಪ್ರತಿಸ್ಪರ್ಧಿಯಾಗಿ ಚಿಂಗಾರಿ ಎಂಬ ಆ್ಯಪ್‌ ಅನ್ನು ಬೆಂಗಳೂರು ಮೂಲದ ಸಂಸ್ಥೆ ಅಭಿವೃದ್ಧಿಪಡಿಸಿ ಮೊದಲ ಸ್ಥಾನ ಪಡೆದುಕೊಂಡಿತ್ತು. 2ನೇ ಸ್ಥಾನ ಕೂಗೆ ಸಿಕ್ಕಿತ್ತು.

ಬಾಯಿಗೆ ಬಂದು ಬಿದ್ದ ಲಡ್ಡು! Koo ಆಪ್ ಸೇರಲು ಜನರು Queue

ಸುದ್ದಿಯಾಗಿದ್ದು ಏಕೆ?
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ವೇಳೆ ಖಲಿಸ್ತಾನಿ ಬೆಂಬಲಿಗರು, ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಟ್ವೀಟರ್‌ ಖಾತೆಗಳಿಗೆ ನಿರ್ಬಂಧ ವಿಧಿಸಲು ಟ್ವೀಟರ್‌ ಸಂಸ್ಥೆ ಹಿಂದೇಟು ಹಾಕುತ್ತಿರುವುದು ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಮತ್ತು ಟ್ವೀಟರ್‌ನ ಹಗ್ಗಜಗ್ಗಾಟ ‘ಕೂ’ಗೆ ವರದಾನವಾಗಿದ್ದು ಆ್ಯಪ್‌ ಬಳಕೆದಾರರ ಸಂಖ್ಯೆ ಭಾರೀ ಏರಿಕೆ ಕಂಡಿದೆ.

ಕಾರ್ಯನಿರ್ವಹಣೆ ಹೇಗೆ?

ಇದು ಆಡಿಯೋ ಕ್ಲಿಪ್‌ ಸೇರಿದಂತೆ ಮಲ್ಟಿಮೀಡಿಯಾವನ್ನು ಬೆಂಬಲಿಸುತ್ತದೆ. ಇದರಲ್ಲಿ ಗರಿಷ್ಠ 400 ಅಕ್ಷರಗಳ ಬರಹವನ್ನು ಪೋಸ್ಟ್‌ ಮಾಡಬಹುದಾಗಿದೆ. ಟ್ವಿಟರ್‌ನಲ್ಲಿ ಇರುವ ಬಹುತೇಕ ಎಲ್ಲಾ ಲಕ್ಷಣಗಳನ್ನು ಒಳಗೊಂಡಿದೆ.

ಕನ್ನಡದಲ್ಲೇ ಆರಂಭ:
ಮೊದಲು ಕನ್ನಡದಲ್ಲಿ ಸೇವೆ ಆರಂಭಿಸಿದ ‘ಕೂ’ ನಂತರದಲ್ಲಿ ತಮಿಳು, ಹಿಂದಿ, ಬಂಗಾಳಿ, ತೆಲುಗು ಸೇರಿದಂತೆ 6 ಭಾರತೀಯ ಭಾಷೆ ಮತ್ತು ಇಂಗ್ಲಿಷ್‌ನಲ್ಲಿ ಸೇವೆ ನೀಡುತ್ತಿದೆ.

ಭಾಷಾಂತರ ಸೇವೆ ಲಭ್ಯ:
ಕೂನಲ್ಲಿ ನಾವು ಆಂಗ್ಲ ಭಾಷೆಯಲ್ಲಿ ಯಾವುದೇ ಪದ ಟೈಪ್‌ ಮಾಡಿದರೆ, ಅದು ಅದನ್ನು ನಮಗೆ ಬೇಕಾದ ಭಾಷೆಗೆ ಭಾಷಾಂತರ ಮಾಡುತ್ತದೆ.

ಟ್ವಿಟರ್‌ಗೆ ಸಡ್ಡು: ದೇಶಿ 'ಕೂ'ಗೆ ಬಿಜೆಪಿಗರು, ಗಣ್ಯರ ಸೇರ್ಪಡೆ!

ಮೋದಿ ಮೆಚ್ಚಿದ್ದರು:
ಕೇವಲ 10 ತಿಂಗಳ ಆರಂಭವಾದ ಈ ಆ್ಯಪ್‌ ದೇಶಿ ಸೊಗಡನ್ನು ಹೊಂದಿದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಇದನ್ನು ಹೊಗಳಿದ್ದರು. ಕಳೆದ ವರ್ಷ ಕೇಂದ್ರ ಸರ್ಕಾರ ಆಯೋಜಿಸಿದ್ದ ಆತ್ಮನಿರ್ಭರ ಆ್ಯಪ್‌ ಚಾಲೆಂಜ್‌ನಲ್ಲಿ ಕೂ ಆ್ಯಪ್‌ 2ನೇ ಸ್ಥಾನ ಪಡೆದಿತ್ತು.

ಸುವರ್ಣ ನ್ಯೂಸ್ ಕೂ ಆ್ಯಪ್ ಪ್ರೊಫೈಲ್‌ಗೆ ಇಲ್ಲಿ ಕ್ಲಿಕ್ ಮಾಡಿ

ಡೌನ್‌ಲೋಡ್‌ ಹೇಗೆ?
ಕೂ ಆ್ಯಪ್‌ ಅನ್ನು ಆ್ಯಪಲ್‌ ಫೋನ್‌ಗಳಗೆ ಐಒಎಸ್‌ ಹಾಗೂ ಆಂಡ್ರಾಯ್ಡ್‌ ಫೋನ್‌ ಬಳಕೆದಾರರಿಗೆ ಗೂಗಲ್‌ ಪ್ಲೇಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.