ಭಾರತ ಸರ್ಕಾರ ಮತ್ತು ಟ್ವಿಟರ್ ಮಧ್ಯೆ ವಾರ್ ನಡೆದಿದ್ದು, ದೇಶೀ  ಟ್ವಿಟರ್ ‌ಎಂದೇ ಬಣ್ಣಿಸಲಾಗುತ್ತಿರುವ ಕೂ(Koo) ಸೋಷಿಯಲ್ ಮೀಡಿಯಾ ಬಗ್ಗೆ ಹೆಚ್ಚಿನ ಜನರು ಆಸಕ್ತಿ ತೋರಿಸುತ್ತಿದ್ದಾರೆ.

2020ರಲ್ಲಿ ಆತ್ಮನಿರ್ಭರ್ ಭಾರತ್ ಚಾಲೆಂಜ್ ಗೆದ್ದಿದ್ದ ಕೂ ಆಂಡ್ರಾಯ್ಡ್ ಮತ್ತು ಐಒಎಸ್‍ನಲ್ಲಿ  ಲಭ್ಯವಿದೆ. ಆದರೆ, ಟ್ವಿಟರ್ ಎದುರು ಈ ಕೂ ಅಷ್ಟೇನೂ ಜನಪ್ರಿಯತೆಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಕೆಲವು ಖಾತೆಗಳನ್ನು ಬ್ಲಾಕ್ ಮಾಡುವ ಸಂಬಂಧ ಟ್ವಿಟರ್ ಹಾಗೂ ಭಾರತ ಸರ್ಕಾರ ನಡುವೆ ವಿವಾದ ತಲೆದೋರಿದ್ದು, ಕೂ ಬಳಸುವಂತೆ ಕೇಂದ್ರ ಸರ್ಕಾರದ ಕೆಲವು ಮಂತ್ರಿಗಳು ಜನರಿಗೆ ಕರೆ ನೀಡುತ್ತಿದ್ದಾರೆ. ಈಗಾಗಲೇ ಅಂಚೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಕೂನಲ್ಲಿ ತಮ್ಮ ಖಾತೆಗಳನ್ನು ತೆರೆದಿವೆ. ಟ್ವೀಟ್ ಮಾಡಿ ಮಾಡಿಯೇ ವಿವಾದ ಮೇಲೆ ವಿವಾದ ಸೃಷ್ಟಿಸಿಕೊಳ್ಳುವ ಕಂಗನಾ ರಣಾವತ್ ಕೂಡ ಟ್ವಿಟರ್ ತೊರೆದೆ ಕೂ ಸೇರುವುದಾಗಿ ಬೆದರಿಕೆ ಹಾಕಿದ್ದಾರೆ!

5ಜಿ ಇಂಟರ್ನೆಟ್‌ಗಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು?

ಈಗಾಗಲೇ ಹೇಳಿದಂತೆ ಟ್ವಿಟರ್ ರೀತಿಯಲ್ಲಿ ಕೂ ಆಪ್ ಕೂಡ ಒಂದು ಮೈಕ್ರೊಬ್ಲಾಗಿಂಗ್ ಆಪ್. ಬಳಕೆದಾರರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಬಹುದು.

ಕಳೆದ ವರ್ಷವಷ್ಟೇ ಕೂ ಆಪ್ ಬಿಡುಗಡೆಯಾಗಿದ್ದು, ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಆತ್ಮನಿರ್ಭರ್ ಭಾರತ ಇನ್ನೋವೇಟ್ ಚಾಲೆಂಜ್ ಗೆದ್ದುಕೊಂಡಿತ್ತು. ಭಾರತದ ಅತ್ಯುತ್ತಮ ಆಪ್ ಎಂದು ಗುರುತಿಸಿಕೊಂಡಿದ್ದ ಈ ಕೂ ಜಾಗತಿಕ ಮಟ್ಟದ ಆಪ್‌ಗಳ ಸಾಲಿನಲ್ಲಿ ನಿಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಣ್ಣಿಸಲಾಗಿತ್ತು.
ಟ್ವಿಟರ್ ಇಂಗ್ಲಿಷ್ ಭಾಷೆಯನ್ನೇ ಪ್ರಮುಖವಾಗಿಸಿಕೊಂಡಿರುವ ವೇದಿಕೆ. ಟ್ವಿಟರ್‌ನಲ್ಲೂ ನೀವು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಟ್ವೀಟ್ ಮಾಡಬಹುದು. ಆದರೆ, ಕೂ ಸಂಪೂರ್ಣವಾಗಿ ಭಾರತೀಯ ಭಾಷೆಗಳಲ್ಲಿ ವ್ಯವಹರಿಸುವ ಮಾಡೆಲ್ ಹೊಂದಿದೆ. ದೇಶದ ಪ್ರಾದೇಶಿಕ ಭಾಷೆಗಳಲ್ಲಿ ಹೆಚ್ಚು ಜನರು ಸಂವಹನ ನಡೆಸುವುದರಿಂದ ಆ ಅವಕಾಶವನ್ನು ಉಪಯೋಗಿಸಿಕೊಳ್ಳುವ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಿದೆ. ಈಗ ಅಂತೂ ಕೂ ಆಪ್‌ಗೆ ಲಡ್ಡು ಬಂದು ಬಾಯಿಗೆ ಬಿದ್ದಿದೆ. ಯಾಕೆಂದರೆ, ಸರ್ಕಾರದ ಭಾಗವಾಗಿರುವ ಹಲವು ಮಂತ್ರಿಗಳು ಮತ್ತು ಗಣ್ಯರೇ ಮುಂದೆ ನಿಂತು ಕೂ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಪರಿಣಾಮ ಅದರ ಜನಪ್ರಿಯತೆ ದಿಢೀರ್ ಏರಿಕೆಯಾಗುತ್ತಿದೆ ಮತ್ತು ಡೌನ್‌ಲೋಡ್‌ಗಳಲ್ಲಿ ವಿಪರೀತ ಹೆಚ್ಚಾಗುತ್ತಿದೆ.

ಈಗಾಗಲೇ ಕೂ ಆಪ್‌ನಲ್ಲಿ ಕೇಂದ್ರ ಪಿಯೂಷ್ ಗೋಯೆಲ್ ಮಾತ್ರವಲ್ಲದೇ ಐಟಿ ಸಚಿವ ರವಿ ಶಂಕರ್ ಪ್ರಸಾದ್, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ,  ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಿಸ್, ಎನ್ಐಇಎಲ್ಐಟಿ, ಅಂಚೆ ಇಲಾಖೆ, ಮೈಗೌಇಂಡಿಯಾ, ಡಿಜಿಟಲ್ ಇಂಡಿಯಾ, ಎನ್ಐಸಿ ಸೇರಿದಂತೆ ಅನೇಕ ಸಚಿವಾಲಯಗಳು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿವೆ. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಅಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಸೇರಿದಂತೆ ಹಲವು ಗಣ್ಯರು ಕೂ ಆಪ್‌ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.

ವ್ಯಾಲೆಂಟೈನ್ಸ್ ಡೇ ಮರುದಿನವೇ ಸ್ಯಾಮ್ಸಂಗ್ ಗ್ಯಾಲಕ್ಸಿ F62 ಬಿಡುಗಡೆ, ಬೆಲೆ ಎಷ್ಟು?

ಕೂ ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಕ್ಯೂ ಆಪ್ ಉಚಿತವಾಗಿದ್ದು, ಯಾರೂ ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಈ ಆಪ್ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೂ ಅಂತಾ ಶೋಧ ಮಾಡಿದರೆ ಕೂ ಆಪ್ ದೊರೆಯುತ್ತದೆ ಮತ್ತು ಅದನ್ನು ಡೌನ್‌ಲೋಡ್ ಮಾಡಿಕೊಂಡು ಇನ್ಸ್‌ಟಾಲ್ ಮಾಡಿಕೊಳ್ಳಬಹುದು.

ಟ್ವಿಟರ್ ರೀತಿಯಲ್ಲಿ ಕೂ ಆಪ್ ಹಲವು ಫೀಚರ್‌ಗಳನ್ನು ಹೊಂದಿದೆ. ಫೀಡ್ ಅನ್ನು ಬಳಕೆದಾರರು ಬ್ರೌಸ್ ಮಾಡಲು ಇದು ಅವಕಾಶ ನೀಡುತ್ತದೆ. ಬಳಕೆದಾರರು ತಮ್ಮ ಸಂದೇಶಗಳನ್ನು, ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು ಷೇರ್ ಮಾಡಿಕೊಳ್ಳಬಹುದು. ಆಡಿಯೋ, ವಿಡಿಯೋ ಫೈಲ್‌ಗಳನ್ನು ಪೋಸ್ಟ್ ಮಾಡಬಹುದು ಇಲ್ಲವೇ ಷೇರ್ ಮಾಡಬಹುದು.

ಸುವರ್ಣ ನ್ಯೂಸ್ ಕೂ ಪ್ರೊಫೈಲ್‌ಗೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬಳೆಕೆದಾರರು ಕೂ ಬಳಸಬಹುದು. ಶೀಘ್ರವೇ ಇನ್ನಿತರ ಭಾರತೀಯ ಭಾಷೆಗಳಲ್ಲೂ ಕೂ ತನ್ನ ಸೇವೆ ನೀಡಲಿದೆ. ಸ್ಥಳೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇದು ಅವಕಾಶವನ್ನು ಕಲ್ಪಿಸುತ್ತದೆ. ಬಳಕೆದಾರರು 400 ಅಕ್ಷರಗಳಲ್ಲಿ ತಮ್ಮ ಸಂದೇಶಗಳನ್ನು ಬರೆಯಬಹುದು.

ಆ್ಯಂಡ್ರಾಯ್ಡ್ 12 ಬಿಡುಗಡೆಗೆ ಸಿದ್ಧವಾಗುತ್ತಿದೆಯಾ ಗೂಗಲ್?