ಬೆಂಗಳೂರು (ಜು.11): ಏಜೆಂಟ್ ಸ್ಮಿತ್ ಎಂಬ ಮಾಲ್‌ವೇರ್ ಸ್ಮಾರ್ಟ್‌ಪೋನ್‌ಗಳಿಗೆ ದಾಳಿ ಮಾಡಿದೆ.  ಭಾರತದ ಸುಮಾರು 15 ಮಿಲಿಯನ್ ಸ್ಮಾರ್ಟ್‌ಫೋನ್ ಸೇರಿದಂತೆ ಜಗತ್ತಿನಾದ್ಯಂತ 25 ಮಿಲಿಯನ್ ಮೊಬೈಲ್‌ಗಳು ಏಜೆಂಟ್ ಸ್ಮಿತ್ ದಾಳಿಯಿಂದ ಬಾಧಿತವಾಗಿವೆ. ಚೆಕ್ ಪಾಯಿಂಟ್ ಎಂಬ ಸೈಬರ್ ಸೆಕ್ಯೂರಿಟಿ ಕಂಪನಿಯು ಬೆಚ್ಚಿಬೀಳಿಸುವ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ಗೂಗಲ್‌ಗೆ ಸಂಬಂಧಿಸಿದ ಅಪ್ಲಿಕೇಶನ್‌ನ ಸೋಗಿನಲ್ಲಿ ಸ್ಮಾರ್ಟ್‌ಫೋನೊಳಗಡೆ ನುಸುಳುವ ಈ ಏಜೆಂಟ್ ಸ್ಮಿತ್, ಇತರೆಲ್ಲಾ ಅಪ್ಲಿಕೇಶನ್‌ಗಳನ್ನು ಹಾಳು ಮಾಡುತ್ತಿದೆ. ಹಾಗೂ ಬಳಕೆದಾರರ ಅರಿವಿಗೆ ಬಾರದಂತೆ ಇತರ ಅಪಾಯಕಾರಿ ಅಪ್ಲಿಕೇಶನ್‌ಗಳಿಂದ  ಬದಲಾಯಿಸುತ್ತದೆ ಎಂದು ಚೆಕ್ ಪಾಯಿಂಟ್ ಹೇಳಿದೆ.

ಹಣಕಾಸು- ಲಾಭಗಳಿಸುವ ವ್ಯವಹಾರದ ಜಾಹೀರಾತುಗಳನ್ನು ತೋರಿಸುವ ಈ ಮಾಲ್‌ವೇರ್ ಎಂಟ್ರಿ ಬಳಕೆದಾರರ ಗೌಪ್ಯ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಸಾಧ್ಯತೆಯೂ ಇದೆ ಎಂದು ಸಂಸ್ಥೆಯು ಎಚ್ಚರಿಸಿದೆ.

ಇದನ್ನೂ ಓದಿ | 1 ಕೋಟಿಗೂ ಅಧಿಕ ಫೋನ್‌ಗಳಲ್ಲಿದೆ ಈ ಫೇಕ್ ಆ್ಯಪ್: ಕೂಡಲೇ ಡಿಲೀಟ್ ಮಾಡಿ!

ಈ ಹಿಂದೆ Gooligan, Hummingbad, ಮತ್ತು CopyCat ಎಂಬ ಮಾಲ್‌ವೇರ್‌ಗಳು ಇದೇ ರೀತಿ ಮೊಬೈಲ್ ಬಳಕೆದಾರರನ್ನು ಬೆಚ್ಚಿ ಬೀಳಿಸಿದ್ದುವು.

ಆ್ಯಂಡ್ರಾಯಿಡ್ ಫೋನ್‌ಗಳು ಈ ಮಾಲ್‌ವೇರ್‌ನ ಸುಲಭವಾದ ಟಾರ್ಗೆಟ್. ಹಿಂದಿ, ಅರೇಬಿಕ್ ಮತ್ತು ಇಂಡೋನೇಶ್ಯನ್ ಭಾಷಿಕರನ್ನು ಪ್ರಮುಖವಾಗಿ ಏಜೆಂಟ್ ಸ್ಮಿತ್ ಗುರಿಯಾಗಿಸಿದೆ.

ಏಷ್ಯಾಖಂಡದ ಇತರ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶದ ಮೊಬೈಲ್ ಬಳಕೆದಾರರು ಇದರಿಂದ ತೊಂದರೆಗೊಳಗಾಗಿದ್ದಾರೆ. 

ಇಂತಹ ದಾಳಿಯಿಂದ ಬಚಾವಾಗಬೇಕಾದರೆ, ಬಳಕೆದಾರರರು ಮೊಬೈಲ್ ‘ಸುರಕ್ಷತೆ’ಗೆ ಹೆಚ್ಚು ಒತ್ತು ಕೊಡಬೇಕು, ವಿಶ್ವಾಸಾರ್ಹ ಪ್ಲೇ ಸ್ಟೋರ್‌ನಿಂದ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಕು ಎಂದು ಸಂಸ್ಥೆಯು ಹೇಳಿದೆ. ತೃತೀಯ ಪಕ್ಷ ಪ್ಲೇ ಸ್ಟೋರ್ ಗಳಲ್ಲಿ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುವ ಸಾಧ್ಯತೆಗಳಿವೆ.