ನವದೆಹಲಿ(ಆ.01): ಈಗ ಬಹುತೇಕ ಎಲ್ಲರ ಕೈಯಲ್ಲಿ ರಿಂಗಣಿಸಿ, ಸಂವಹನ ಕ್ರಾಂತಿಯನ್ನೇ ಸೃಷ್ಟಿಸಿರುವ ಮೊಬೈಲ್‌ ಫೋನ್‌ ಭಾರತದ ಜನರ ಕೈಗೆ ಬಂದು ಶುಕ್ರವಾರಕ್ಕೆ ಸರಿಯಾಗಿ 25 ವರ್ಷ.

ದೇಶದಲ್ಲಿ ಮೊದಲ ಬಾರಿ ಮೊಬೈಲ್‌ನಲ್ಲಿ ಸಂವಹನ ನಡೆಸಿದ್ದು ಅಂದಿನ ಕೇಂದ್ರ ಟೆಲಿಕಾಂ ಸಚಿವ ಸುಖರಾಂ ಹಾಗೂ ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಜ್ಯೋತಿ ಬಸು ಅವರ ನಡುವೆ. 1995ರ ಜುಲೈ 31ರಂದು ಇಬ್ಬರೂ ಮೊಬೈಲ್‌ನಲ್ಲಿ ಸಂವಹನ ನಡೆಸಿದರು. ನೋಕಿಯಾ ಕಂಪನಿಯ ಮೊಬೈಲನ್ನು ಅಂದು ಇಬ್ಬರೂ ಬಳಸಿದ್ದರು.

ವಿಶೇಷವೆಂದರೆ ಅಂದು ಒಂದು ನಿಮಿಷದ ಕರೆಗೆ 8.4 ರು. ದರ ವಿಧಿಸಲಾಗುತ್ತಿತ್ತು. ‘ಪೀಕ್‌ ಅವರ್‌’ನ ದರ ಇನ್ನೂ ಹೆಚ್ಚಿದ್ದು, ಒಂದು ನಿಮಿಷಕ್ಕೆ 16.8 ರು. ಕರೆ ದರ ವಿಧಿಸಲಾಗುತ್ತಿತ್ತು. ಅಂದು ಹೊರಹೋಗುವ ಹಾಗೂ ಒಳ ಬರುವ ಕರೆಗಳೆರಡಕ್ಕೂ ದರ ಅನ್ವಯವಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಒಳ ಬರುವ ಕರೆಗಳಷ್ಟೇ ಅಲ್ಲ, ಹೊರ ಹೋಗುವ ಕರೆಗಳೂ ಉಚಿತವಾಗಿವೆ.

ಸ್ಮಾರ್ಟ್ ಫೋನ್, ಟಿವಿ ಬದಲು ಮಕ್ಕಳಿಗೆ ರೇಡಿಯೋ ಕೊಡಲಿ: ವೈರಲ್ ಆಯ್ತು ಐಡಿಯಾ!

ಅಂದು ಕೇವಲ ಉಳ್ಳವರ ಸಾಧನಗಳಾಗಿದ್ದ ಮೊಬೈಲ್‌ ಇಂದು ಕಾಲ ಬದಲಾದಂತೆ ಜನಸಾಮಾನ್ಯರ ಸಾಧನಗಳೂ ಆಗಿವೆ. ಹಳೆಯ ಕೀಪ್ಯಾಡ್‌ ಮೊಬೈಲ್‌ಗಳು ಹೋಗಿ ಸ್ಮಾರ್ಟ್‌ಫೋನ್‌ ಬಂದಿವೆ. ತೀರಾ ವೆಚ್ಚದಾಯಕ ಮೊಬೈಲ್‌ಗಳು ಹಾಗೂ ಕೇವಲ 1,000 ರು. ಬೆಲೆಗೆ ಸಿಗುವ ಮೊಬೈಲ್‌ಗಳೂ ಇವೆ. ಇಂದು ಕರೆಯಷ್ಟೇ ಅಲ್ಲ, ಇಂಟರ್ನೆಟ್‌ ಬಳಕೆಗಾಗಿ ಕೂಡ ಜನರು ಮೊಬೈಲನ್ನೇ ಆಶ್ರಯಿಸಿದ್ದು, ಇಂಟರ್ನೆಟ್‌ ಡಾಟಾ ಪ್ಯಾಕ್‌ಗಳ ಬಳಕೆಯು ಕರೆಗಿಂತ ಅಧಿಕವಾಗಿದೆ. ದೇಶದ ಜನರ ಸಂವಹನ ವಿಧಾನವನ್ನೇ ಮೊಬೈಲ್‌ಗಳು ಬದಲಿಸಿವೆ.