ಜನವರಿಯಿಂದ ಎಲ್‌ಇಡಿ ಟೀವಿಗಳ ದರ ಹೆಚ್ಚಾಗುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್‌ಗಳ ಕೊರತೆ, ಚಿಪ್‌ಗಳ ಬೆಲೆ ಏರಿಕೆ ಮತ್ತು ರುಪಾಯಿ ಮೌಲ್ಯ ಕುಸಿತ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಬೆಲೆ ಏರಿಕೆಯು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೂ ಪರಿಣಾಮ ಬೀರಲಿದೆ.
ನವದೆಹಲಿ: ಜಿಎಸ್ಟಿ ಕಡಿತದ ಖುಷಿಯಲ್ಲಿ ಮುಂದಿನ ತಿಂಗಳಲ್ಲಿ ಟೀವಿ ಖರೀದಿಸುವ ಯೋಚನೆಯಿದ್ದರೆ ನಿಮ್ಮ ಕಿಸೆಗೆ ದರ ಏರಿಕೆ ಬಿಸಿ ತಟ್ಟುವುದು ಖಚಿತ. ಏಕೆಂದರೆ ಜನವರಿಯಿಂದ ಎಲ್‌ಇಡಿ ಟೀವಿ ದರ ಶೇ.3ರಿಂದ 4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್‌ಗಳ ಕೊರತೆ, ಚಿಪ್ ಬೆಲೆ ಹೆಚ್ಚಳ ಹಾಗೂ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿರುವ ಕಾರಣ ಟೀವಿ ದರ ಏರಿಕೆ ಅನಿವಾರ್ಯ ಎಂದು ಉತ್ಪಾದಕರು ತಿಳಿಸಿದ್ದಾರೆ. ದೇಶದಲ್ಲಿ ಉತ್ಪಾದನೆಯಾಗುವ ಎಲ್‌ಇಡಿ ಟೀವಿಗಳಲ್ಲಿ ಶೇ.30ರಷ್ಟು ಭಾಗ ಮಾತ್ರ ಮೇಡ್ ಇನ್ ಇಂಡಿಯಾದ್ದು. ಓಪನ್ ಸೆಲ್, ಸೆಮಿಕಂಡಕ್ಟರ್ ಚಿಪ್‌ಗಳು ಹಾಗೂ ಮದರ್ ಬೋರ್ಡ್‌ಗಳನ್ನು ವಿದೇಶಗಳಿಂದಲೇ ತರಿಸಿಕೊಳ್ಳಲಾಗುತ್ತದೆ. ರುಪಾಯಿ ಮೌಲ್ಯ ಕುಸಿತದಿಂದಾಗಿ ಬಿಡಿಭಾಗಗಳ ಆಮದು ದುಬಾರಿಯಾಗುತ್ತಿದೆ.
ಈ ನಡುವೆ, ಕಳೆದ ಮೂರ್ನಾಲ್ಕು ತಿಂಗಳಿಂದ ಎಐ ಸರ್ವರ್‌ಗಳಿಗೆ ಹೈಬ್ಯಾಂಡ್‌ವಿಡ್ತ್ ಮೆಮೊರಿ (ಎಚ್‌ಬಿಎಂ) ಚಿಪ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಪೂರೈಕೆ ಅಷ್ಟಿಲ್ಲ. ಹೀಗಾಗಿ ಡಿಆರ್‌ಎಎಂ, ಫ್ಲಾಶ್ ಸೇರಿ ಎಲ್ಲ ಮೆಮೊರಿ ಚಿಪ್‌ಗಳ ದರ ಹೆಚ್ಚಾಗಿದೆ. ಇದರಿಂದ ಚಿಪ್ ಉತ್ಪಾದಕರು ಲಾಭದಾಯಕವಾದ ಎಐ ಚಿಪ್‌ಗಳತ್ತ ಆದ್ಯತೆ ನೀಡಲು ಆರಂಭಿಸಿದ ಹಿನ್ನೆಲೆಯಲ್ಲಿ ಟೀವಿಯಂಥ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದಕರಿಗೆ ಸಮಸ್ಯೆ ಸೃಷ್ಟಿಸಿದೆ.
ಫೋನ್ ಇತರ ಗ್ಯಾಜೆಟ್ ಬೆಲೆಯೂ ಹೆಚ್ಚಳ
ಜಾಗತಿಕ ಮಟ್ಟದಲ್ಲಿ ಮೆಮೊರಿ ಚಿಪ್‌ಗಳ ತೀವ್ರ ಕೊರತೆ ಹಾಗೂ ರೂಪಾಯಿ ಮೌಲ್ಯ ಮೊದಲ ಬಾರಿಗೆ ಡಾಲರ್‌ಗೆ 90 ಗಡಿ ದಾಟಿರುವ ದುರ್ಬಲತೆಯ ಪರಿಣಾಮವಾಗಿ, ಎಲ್‌ಇಡಿ ಮತ್ತು ಸ್ಮಾರ್ಟ್ ಟಿವಿಗಳ ಬೆಲೆಗಳು ಶೇಕಡಾ 3ರಿಂದ 10ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಸರ್ಕಾರ 32 ಇಂಚು ಮತ್ತು ಅದಕ್ಕಿಂತ ದೊಡ್ಡ ಟಿವಿಗಳ ಮೇಲಿನ ಜಿಎಸ್‌ಟಿಯನ್ನು 28ರಿಂದ 18 ಶೇಕಡಕ್ಕೆ ಇಳಿಸಿದ್ದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಚೇತರಿಕೆ ಕಂಡುಬಂದಿತ್ತು. ಆದರೆ ಈಗ ಎದುರಾಗುತ್ತಿರುವ ವೆಚ್ಚದ ಒತ್ತಡ ಆ ಲಾಭವನ್ನು ಬಹುತೇಕ ನುಂಗಿಹಾಕುವ ಭೀತಿ ಇದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಮುಂದಿನ ವರ್ಷ ಖರೀದಿದಾರರು ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಗ್ಯಾಜೆಟ್‌ಗಳಿಗೆ ಕೂಡ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಓಪನ್ ಸೆಲ್‌ಗಳು, ಸೆಮಿಕಂಡಕ್ಟರ್ ಚಿಪ್‌ಗಳು, ಮೆಮೊರಿ ಘಟಕಗಳು ಹಾಗೂ ಮದರ್‌ಬೋರ್ಡ್‌ಗಳಂತಹ ಪ್ರಮುಖ ಭಾಗಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗಿದೆ. ಇದರ ಪರಿಣಾಮವಾಗಿ, ಕರೆನ್ಸಿ ಏರಿಳಿತ ಮತ್ತು ಜಾಗತಿಕ ಪೂರೈಕೆ ಸಮಸ್ಯೆಯಿಂದ ತಯಾರಿಕ ಕಂಪೆನಿಗಳು ಸಂಕಷ್ಟಕ್ಕೆ ಸಿಲುಕಿದೆ.
ಕಾರಣವೇನು?
ಟಿವಿ, ಫೋನ್, ಲ್ಯಾಪ್‌ಟಾಪ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿ ಮೆಮೊರಿ ಚಿಪ್‌ಗಳ ಕೊರತೆ ಹೊರಹೊಮ್ಮಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಸರ್ವರ್‌ಗಳು ಮತ್ತು ಡೇಟಾ ಸೆಂಟರ್‌ಗಳಲ್ಲಿ ಬಳಸಲಾಗುವ ಹೈ-ಬ್ಯಾಂಡ್‌ವಿಡ್ತ್ ಮೆಮೊರಿಗೆ ಜಾಗತಿಕವಾಗಿ ಭಾರೀ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಚಿಪ್ ತಯಾರಕರು ಹೆಚ್ಚು ಲಾಭದಾಯಕ AI ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದು, ಟಿವಿಗಳಂತಹ ಲೆಗಸಿ ಎಲೆಕ್ಟ್ರಾನಿಕ್ಸ್‌ಗಳಿಗೆ ಮೆಮೊರಿ ಪೂರೈಕೆ ತೀವ್ರವಾಗಿ ಕುಂಠಿತವಾಗಿದೆ. ಇತ್ತೀಚೆಗೆ ಜಿಎಸ್‌ಟಿ ಕಡಿತದಿಂದಾಗಿ ಟಿವಿಗಳ ಬೆಲೆಗಳು ಸರಾಸರಿ 4,500 ರೂ.ಗಳಷ್ಟು ಇಳಿಕೆಯಾಗಿದ್ದವು. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿತ್ತು. ಆದರೆ ಈಗ ಎದುರಾಗುತ್ತಿರುವ ಉತ್ಪಾದನಾ ವೆಚ್ಚ ಏರಿಕೆ, ಆ ಜಿಎಸ್‌ಟಿ ಲಾಭವನ್ನು ಮಸುಕುಗೊಳಿಸಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಪಾವಧಿಯಲ್ಲಿ ಬೆಲೆ ಏರಿಕೆ ಒತ್ತಡ ಇದ್ದರೂ, ಭಾರತದ ಟಿವಿ ಮಾರುಕಟ್ಟೆಯ ದೀರ್ಘಾವಧಿ ಭವಿಷ್ಯ ಹಿತಕರವಾಗಿಯೇ ಇದೆ. 2024ರಲ್ಲಿ 10–12 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದ ಟಿವಿ ಮಾರುಕಟ್ಟೆ ಮುಂದಿನ ವರ್ಷಗಳಲ್ಲಿ ವೃದ್ಧಿಯಾಗುವ ನಿರೀಕ್ಷೆಯಿದೆ.


