ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ 2028ರ ಸಿಎಂ ಕನಸನ್ನು ಸಚಿವ ಜಮೀರ್ ಅಹ್ಮದ್ ಖಾನ್ 'ಹಗಲುಗನಸು' ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ತನ್ನ ಶಕ್ತಿ ಕಳೆದುಕೊಂಡಿದೆ ಹಾಗೂ 2028ರವರೆಗೂ ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂದರು.

ದಾವಣಗೆರೆ (ಜ.26): ಎಲ್ಲರೂ ರಾತ್ರಿ ಕನಸು ಕಂಡರೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹಗಲುಗನಸು ಕಾಣುತ್ತಾರೆ. 2028ರಲ್ಲಿ ಅವರು ಮುಖ್ಯಮಂತ್ರಿಯಾಗುವುದು ಅಸಾಧ್ಯದ ಮಾತು' ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಭವಿಷ್ಯವಾಣಿಗಳ ವಿರುದ್ಧ ಅಂಕಿ-ಅಂಶಗಳ ಸಮೇತ ವಾಗ್ದಾಳಿ ನಡೆಸಿದರು. 'ನಾನು ಕುಮಾರಸ್ವಾಮಿ ಅವರ ಜೊತೆಗಿದ್ದವನು, ಅವರ ಸ್ವಭಾವ ನನಗೆ ಚೆನ್ನಾಗಿ ಗೊತ್ತು. 2008ರಿಂದಲೂ ಪ್ರತಿ ಚುನಾವಣೆಯಲ್ಲೂ 'ನಮ್ಮದೇ ಸರ್ಕಾರ' ಎನ್ನುತ್ತಾರೆ. ಆದರೆ 2023ರಲ್ಲಿ ಏನಾಯಿತು? 19 ಸೀಟು ಗೆದ್ದು ಸುಮ್ಮನಾದರು. ಸಿದ್ದರಾಮಯ್ಯ ಅವರು ಜೆಡಿಎಸ್‌ನಲ್ಲಿದ್ದಾಗ ಪಕ್ಷ 59 ಸ್ಥಾನ ಗೆದ್ದಿತ್ತು. ಅದನ್ನು ತಲುಪಲು ಇಂದಿಗೂ ಇವರಿಂದ ಸಾಧ್ಯವಾಗಿಲ್ಲ. ಕುಮಾರಸ್ವಾಮಿಯವರಿಗೆ ಇಂತಹ ಕನಸು ಕಾಣುವುದು ಒಂದು ಚಟ' ಎಂದು ಲೇವಡಿ ಮಾಡಿದರು.

ಜೆಡಿಎಸ್ ಶಕ್ತಿ ಕಳೆದುಕೊಂಡಿದೆ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಕುರಿತು ಮಾತನಾಡಿದ ಜಮೀರ್, 'ಈಗ ಜೆಡಿಎಸ್ ಪಕ್ಷ ಬಿಜೆಪಿಯೊಳಗೆ ವಿಲೀನವಾದಂತೆ ಕಾಣುತ್ತಿದೆ. ಬಿಜೆಪಿ ಒಳಗೆ ಹೋದವರಿಗೆ ಅದರ ಅಸಲಿ ಮುಖ ಏನು ಎಂಬುದು ಆಮೇಲೆ ಗೊತ್ತಾಗುತ್ತದೆ. ಇದ್ದ ಅಲ್ಪಸ್ವಲ್ಪ ಶಕ್ತಿಯನ್ನೂ ಕುಮಾರಸ್ವಾಮಿ ಅವರು ಮೈತ್ರಿ ಮಾಡಿಕೊಳ್ಳುವ ಮೂಲಕ ಕಳೆದುಕೊಂಡಿದ್ದಾರೆ. ಹೆಚ್.ಡಿ. ದೇವೇಗೌಡರು ಇರುವವರೆಗೂ ಈ ಮೈತ್ರಿ ಇರಬಹುದು. ದೇವೇಗೌಡರು ನನ್ನ ರಾಜಕೀಯ ಗುರುಗಳು, ಅವರು 100 ವರ್ಷ ಬಾಳಲಿ ಎಂದು ಆಶಿಸುತ್ತೇನೆ. ಆದರೆ ಕುಮಾರಸ್ವಾಮಿ ಅವರ ರಾಜಕೀಯ ನಡೆ ಸರಿಯಿಲ್ಲ' ಎಂದರು.

ಸಿಎಂ ಕುರ್ಚಿಯಲ್ಲಿ ಟಗರು ಕೂತಿದೆ!

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗೆ ಸಂಬಂಧಿಸಿದಂತೆ ದಾವಣಗೆರೆಯ ಶಿವಗಂಗಾ ಬಸವರಾಜ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವರು, '2028ರವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಅಲ್ಲಿ 'ಟಗರು' (ಸಿದ್ದರಾಮಯ್ಯ) ಕುಳಿತಿದೆ. ಕುರ್ಚಿ ಖಾಲಿ ಇದ್ದರೆ ತಾನೇ ಹೊಸಬರು ಕೂರಲು ಸಾಧ್ಯ? ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಅವರ ಬೆಂಬಲಿಗರು ಬಯಸುವಂತೆ ನಾವು ಬಯಸುತ್ತೇವೆ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹಾಕಿದ ಗೆರೆಯನ್ನು ನಾವು ದಾಟುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆಯಾಗಿ, ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಮತ್ತು ಕುಮಾರಸ್ವಾಮಿ ಅವರ ಮುಂದಿನ ರಾಜಕೀಯ ಭವಿಷ್ಯದ ಕುರಿತಾದ ಜಮೀರ್ ಅಹ್ಮದ್ ಅವರ ಹೇಳಿಕೆಗಳು ಈಗ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿವೆ.