ಹುಬ್ಬಳ್ಳಿಯಲ್ಲಿ 42,354 ಮನೆಗಳನ್ನು ಹಂಚಿಕೆ ಮಾಡಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಬಡವರಿಗೆ ಮನೆ ನೀಡುತ್ತಿರುವುದನ್ನು ಕಂಡು ಬಿಜೆಪಿಗೆ ಹೊಟ್ಟೆಕಿಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು. ಹಿಂದಿನ ಬಿಜೆಪಿ ಸರ್ಕಾರ ಒಂದೂ ಮನೆ ನೀಡಿಲ್ಲ,
ಹುಬ್ಬಳ್ಳಿ: ಬಿಜೆಪಿಗೆ ಬಡವರು ಬೇಕಾಗಿಲ್ಲ, ಬರೀ ಅಧಿಕಾರ ಬೇಕು. ಅದಕ್ಕಾಗಿ ಹಿಂದೂ-ಮುಸ್ಲಿಂ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸುತ್ತಾರೆ. ಈಗ ಬಡವರಿಗೆ ಮನೆ ಹಂಚುತ್ತಿರುವುದನ್ನು ನೋಡಿ ಅವರಿಗೆ ಹೊಟ್ಟೆ ಕಿಚ್ಚು ಆಗಿದೆ ಎಂದು ವಸತಿ ಸಚಿವ ಜಮೀರ ಅಹಮದ್‌ಖಾನ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪೂರ್ಣಗೊಂಡಿರುವ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಶನಿವಾರ ಹುಬ್ಬಳ್ಳಿಯಲ್ಲಿ ನಡೆದ 42,354 ಮನೆ ಹಂಚಿಕೆಯಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಿದ್ದಾಗ ಸಾಕಷ್ಟು ಅವಕಾಶಗಳಿದ್ದರೂ ಒಂದೂ ಮನೆಯನ್ನು ನೀಡದ ಬಿಜೆಪಿ ಸರ್ಕಾರ, ಈಗ ಸಾವಿರಾರು ಬಡವರಿಗೆ ಮನೆ ಹಂಚುತ್ತಿರುವುದು ತಡೆಯಲಾಗುತ್ತಿಲ್ಲ. ಇಂತಹ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು.
ಸರ್ಕಾರದ ಸಾಧನೆ
ಒಂದು ಮನೆ ನಿರ್ಮಾಣಕ್ಕೆ ₹ 7.5 ಲಕ್ಷ ಖರ್ಚಾಗುತ್ತದೆ. ಈ ಪೈಕಿ ಕೇಂದ್ರ ಸರ್ಕಾರ ₹ 1.50 ಲಕ್ಷ ನೀಡುತ್ತಿದ್ದು, ರಾಜ್ಯ ಸರ್ಕಾರ ಎಸ್ಸಿ-ಎಸ್ಟಿಗೆ ₹ 2 ಲಕ್ಷ, ಇತರೆ ವರ್ಗಕ್ಕೆ ₹ 1.20 ಲಕ್ಷ ಮತ್ತು ಫಲಾನುಭವಿಗಳ ವಂತಿಕೆ ಮೊತ್ತ ಅವರೇ ಭರಿಸಬೇಕಿತ್ತು. ಫಲಾನುಭವಿಗಳು ಬಡವರಾಗಿದ್ದು ಬ್ಯಾಂಕ್ ಸಾಲ ಸಹ ಸಿಗದ ಸ್ಥಿತಿಯಲ್ಲಿತ್ತು. ಇದನ್ನು ಮನಗಂಡು ಸರ್ಕಾರ ಫಲಾನುಭವಿಗಳಿಂದ ಬರೀ ₹ 1 ಲಕ್ಷ ಸಂಗ್ರಹಿಸಲು ಮತ್ತು ಬಾಕಿ ವಂತಿಕೆಯನ್ನು ರಾಜ್ಯ ಸರ್ಕಾರದಿಂದಲೇ ಭರಿಸಲು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದು, ಗ್ಯಾರಂಟಿ ಯೋಜನೆ ಒತ್ತಡದ ಮಧ್ಯೆಯೂ ಇಷ್ಟೊಂದು ಸಂಖ್ಯೆಯ ಮನೆಗಳನ್ನು ಬಡವರಿಗೆ ನೀಡುತ್ತಿರುವುದು ಸರ್ಕಾರದ ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಅಪಪ್ರಚಾರ:
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ತಮ್ಮ ಅವಧಿಯಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಮುಖಂಡರು ಹತಾಶರಾಗಿ, ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಕಟ್ಟಿದ ಮನೆಗಳ ಎದುರು ಫೋಟೊ ತೆಗೆಸಿಕೊಂಡು, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಿದ್ದು ಎಂದು ಬಿಂಬಿಸುತ್ತಿದ್ದಾರೆ. ಒಟ್ಟಾರೆ, ನಮ್ಮ ಸಾಧನೆ ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಶೇ. 50ರಷ್ಟು ಹಣ ರಾಜ್ಯ ಸರ್ಕಾರದ್ದು ಹಾಗೂ ಜಾಗ ಸಹ ನಮ್ಮದು. ಆದರೆ, ಪ್ರಧಾನಿಗಳ ಫೋಟೊ ಮಾತ್ರ ಹಾಕಿಕೊಂಡು ಬಿಜೆಪಿಯದ್ದು ಎಂದು ಬಿಂಬಿಸುತ್ತಿದ್ದಾರೆ. ಹೀಗಾಗಿ ಮನೆಗಳ ನಿರ್ಮಾಣದ ಎಲ್ಲ ಕ್ರೆಡಿಟ್ ನಮಗೆ ಸಲ್ಲಬೇಕು ಎಂದು ಅಬ್ಬಯ್ಯ ಪ್ರಸಾದ ಸಮರ್ಥಿಸಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕ್ ಹಣ ತರುತ್ತೇನೆ, ಯುವಕರಿಗೆ ಉದ್ಯೋಗ ಕೊಡುತ್ತೇನೆ. ರೈತರ ಆದಾಯ ದ್ವಿಗುಣ ಮಾಡುತ್ತೇನೆಂದು ಮೋದಿ ಹೇಳಿದ್ದರು. ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳೆಲ್ಲವೂ ಏನಾಗಿವೆ? ದೇಶದಲ್ಲಿ ಬಡವರು ಜೀವನ ಮಾಡದಷ್ಟು ಬೆಲೆ ಏರಿಕೆ ಆಗಿದ್ದು, ಈ ಬಗ್ಗೆ ಬಿಜೆಪಿ ಮುಖಂಡರನ್ನು ಜನರು ಪ್ರಶ್ನಿಸಬೇಕೆಂದರು.
ವೇದಿಕೆ ಮೇಲೆ ಅದ್ಭುತವಾಗಿ ನಿರ್ಮಿಸಿದ ಮಾದರಿ ಮನೆಗಳ ಬಳಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನೆಯ ಕೀ ಹಸ್ತಾಂತರಿಸಿದರು. ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ವಿಪ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮ್ಮದ್, ವಿಪ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವ ಎಚ್.ಕೆ. ಪಾಟೀಲ, ಶಾಸಕರಾದ ಎನ್.ಎಚ್. ಕೋನರಡ್ಡಿ, ಬಿ.ಆರ್. ಪಾಟೀಲ, ಬಿ.ಕೆ. ಹರಿಪ್ರಸಾದ, ಎಫ್.ಎಚ್. ಜಕ್ಕಪ್ಪನವರ, ಅಶೋಕ ಪಟ್ಟಣ, ಬಿ. ನಾಗೇಂದ್ರ, ಯು.ಬಿ. ಬಣಕಾರ, ಯಾಸೀನ ಪಠಾಣ, ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ ಎಲಿಗಾರ, ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಮಾಧ್ಯಮ ವಕ್ತಾರ ಶಿವಾನಂದ ಮುತ್ತಣ್ಣವರ, ಮುಖಂಡರಾದ ಸದಾನಂದ ಡಂಗನವರ ಸೇರಿದಂತೆ ಮತ್ತಿತರರು ಇದ್ದರು.


