ನೆಲಮಂಗಲದ ಗೊಲ್ಲಹಳ್ಳಿ ಬಳಿ ಯುವಕ ದರ್ಶನ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಆರೋಪಿ ವೇಣುಗೋಪಾಲ್ ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನೆಲಮಂಗಲ (ಜೂ.7): ತಾಲೂಕಿನ ಗೊಲ್ಲಹಳ್ಳಿ ಬಳಿ ತಡರಾತ್ರಿ 1.30ರ ಸುಮಾರಿಗೆ ಯುವಕನೋರ್ವನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು 24 ವರ್ಷದ ದರ್ಶನ್ ಎಂದು ಗುರುತಿಸಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ವೇಣುಗೋಪಾಲ್ ಎಂಬ ಆರೋಪಿಯನ್ನು ಗುರುತಿಸಲಾಗಿದ್ದು ಆರೋಪಿ ಪರಾರಿಯಾಗಿದ್ದಾನೆ.

ಘಟನೆ ಹಿನ್ನೆಲೆ:

ಮೇಲ್ನೋಟಕ್ಕೆ ಇಬ್ಬರು ಯುವಕರು ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಗಲಾಟೆ ಶುರುವಾಗಿದೆ ಎನ್ನಲಾಗಿದೆ. ಈ ಗಲಾಟೆಯು ಕೊಲೆಯಲ್ಲಿ ಅಂತ್ಯಗೊಂಡಿದೆ. ಘಟನೆಗೆ ಮುನ್ನ ಆರೋಪಿಗಳು ದರ್ಶನ್‌ನನ್ನು ಪಾರ್ಟಿಗೆ ಕರೆದಿದ್ದು, ಪಾರ್ಟಿಯ ಬಳಿಕ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ವೇಣುಗೋಪಾಲ್‌ಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೃತ ದರ್ಶನ್‌ನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರು ಘಟನೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸುತ್ತಿದ್ದು, ಯುವತಿಯ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯೇ ಕೊಲೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.