ತುಮಕೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಕಂಟೈನರ್ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ತುಮಕೂರು(ಜೂ.6) ಕರ್ನಾಟಕದಲ್ಲಿ ಪ್ರತಿ ದಿನ ಒಂದಲ್ಲ ಒಂದು ಅವಾಂತರ, ಅವಘಡಗಳು ಸಂಭವಿಸುತ್ತಿದೆ. ಬೆಂಗಳೂರಿನಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಬೆನ್ನಲ್ಲೇ ಇದೀಗ ತುಮಕೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 48ರ ನಂದಿಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ. ಹೆದ್ದಾರಿಗೆ ಬರುತ್ತಿದ್ದ ಕಂಟೈನರ್ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಅಪಘಾತದ ತೀವ್ರತೆ ಹೆಚ್ಚಾಗಿದ್ದ ಕಾರಣ ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೆಟ್ರೋಲ್ ತುಂಬಿಸಿಕೊಂಡು ಬರುವಾಗ ಘಟನೆ
ಪೆಟ್ರೋಲ್ ಬಂಕ್‌ಗೆ ತೆರಳಿ ಪೆಟ್ರೋಲ್ ತುಂಬಿಸಿಕೊಂಡು ಹೆದ್ದಾರಿಗೆ ಬರುತ್ತಿದ್ದ ಕಂಟೈನರ್ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಲಾರಿ ಅತೀ ವೇಗವಾಗಿ ಹೆದ್ದಾರಿಗೆ ಆಗಮಿಸಿದ್ದು, ಇತ್ತ ಬೈಕ್ ಸವಾರರು ವೇಗವಾಗಿ ಹೆದ್ದಾರಿ ಮೂಲಕ ಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಎಎಸ್ಪಿ ಗೋಪಾಲ್, ಡಿವೈಎಸ್ ಚಂದ್ರಶೇಖರ್ ಭೇಟಿ ನೀಡಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಆಗಿದ್ದ ಮೂವರು
ತುಮಕೂರು ಹೆದ್ದಾರಿಯಲ್ಲಿ ಮೃತಪಟ್ಟ ಮೂವರು ಬೈಕ್ ಸವಾರರನ್ನು ರಾಜೇಶ್ (25), ಧನಂಜಯ (27), ಧನುಷ್ (23) ಎಂದು ಗುರುತಿಸಲಾಗಿದೆ. ತ್ರಿಬಲ್ ರೈಡಿಂಗ್ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಡಾಬಸ್ ಪೇಟೆ ಬಳಿಯಿರುವ ಎಂ.ವಿ ಸೋಲಾರ್ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಸೋಲಾರ್ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಈ ಮೂವರು ರಾತ್ರಿ ಪಾಳಿ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಸ್ಥಳೀಯ ರಸ್ತೆಗಳಿಂದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಈ ರೀತಿಯ ಅಪಘಾತಗಳು ಹೆಚ್ಚಾಗುತ್ತಿದೆ. ಇದೀಗ ತುಮಕೂರಿನಲ್ಲಿ ನಡೆದ ಅಪಘಾತವೂ ಇದೇ ರೀತಿ ಆಗಿದೆ. ಹೆದ್ದಾರಿಯಲ್ಲೇ ಈ ಘಟನೆ ಸಂಭವಿಸಿದೆ. ಸ್ಥಳೀಯ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಮೂಲಕ ವೇಗವಾಗಿ ಸಾಗಿ ಬಂದ ಕಂಟೈನರ್ ಲಾರಿ ಹೆದ್ದಾರಿಗೆ ಪ್ರವೇಶ ಪಡೆದಿದೆ. ಇತ್ತ ಬೈಕ್ ಮೂಲಕ ಸಾಗುತ್ತಿದ್ದ ವೇಳೆ ದಿಢೀರ್ ಹೆದ್ದಾರಿಗೆ ಲಾರಿಗೆ ಪ್ರವೇಶ ಮಾಡಿದ ಕಾರಣ ಅಪಘಾತ ನಡೆದಿದೆ.
