* ಈಶ್ವರಪ್ಪ ಭ್ರಷ್ಟಾಚಾರ ದಾಹಕ್ಕೆ ಗುತ್ತಿಗೆದಾರ ಜೀವ ಬಲಿ* ಈ ಹೋರಾಟವನ್ನು ಇಲ್ಲಿಗೆ ಬಿಟ್ಟರೆ ಜನರಿಗೆ ನ್ಯಾಯ ಸಿಗುವುದಿಲ್ಲ* ರಾಜ್ಯದಲ್ಲಿ ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು
ಬೆಂಗಳೂರು(ಏ.16): ಸಚಿವ ಕೆ.ಎಸ್.ಈಶ್ವರಪ್ಪ(KS Eshwrarappa) ಬಂಧನ ಆಗುವವರೆಗೂ ಯುವ ಕಾಂಗ್ರೆಸ್ ವತಿಯಿಂದ ಹೋರಾಟ ಮುಂದುವರೆಯಲಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್(BV Shrinivas) ಹೇಳಿದ್ದಾರೆ.
ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ 40 ಪರ್ಸೆಂಟ್ ಭ್ರಷ್ಟಾಚಾರದಿಂದ(Corruption) ಕರ್ನಾಟಕದ(Karnataka) ಮಾನ ದೇಶದೆಲ್ಲೆಡೆ ಹರಾಜಾಗುತ್ತಿದೆ. ಈಶ್ವರಪ್ಪ ಅವರ ಭ್ರಷ್ಟಾಚಾರದ ದಾಹಕ್ಕೆ ಅಮಾಯಕ ಗುತ್ತಿಗೆದಾರ ಜೀವ ಕಳೆದುಕೊಳ್ಳುವಂತಾಗಿದೆ. ಈ ವಿಚಾರವಾಗಿ ಈಗಾಗಲೇ ಅಮಿತ್ ಶಾ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದೇವೆ. ಈ ಹೋರಾಟವನ್ನು ಇಲ್ಲಿಗೆ ಬಿಟ್ಟರೆ ಜನರಿಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.
Santosh Suicide Case: ಕಾಂಗ್ರೆಸ್ಸಿಗರು ತನಿಖಾಧಿಕಾರಿಗಳಾಗುವುದು ಬೇಡ: ಸಿಎಂ ಬೊಮ್ಮಾಯಿ
ಮೋದಿಯ ಕುಮ್ಮಕ್ಕು:
ರಾಜ್ಯದಲ್ಲಿ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಡವರ ಲೂಟಿಯನ್ನೇ ಕೆಲಸ ಮಾಡಿಕೊಂಡಿದ್ದಾರೆ. ಕೇವಲ ಸಂತೋಷ್(Santosh Patil) ಮಾತ್ರವಲ್ಲ ರಾಜ್ಯದಲ್ಲಿರುವ ಎಲ್ಲಾ ಗುತ್ತಿಗೆದಾರರಿಗೂ 40 ಪರ್ಸೆಂಟ್ ಕಮಿಷನ್(40 Percent Commission) ಸಮಸ್ಯೆ ಎದುರಾಗಿದೆ. ಹೀಗಾಗಿ ಗುತ್ತಿಗೆದಾರರ ಸಂಘವೇ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರಿಗೆ ಪತ್ರ ಬರೆದಿದ್ದಾರೆ. ಹೀಗಿದ್ದರೂ ನಾನು ತಿನ್ನಲು, ತಿನ್ನಲು ಬಿಡುವುದಿಲ್ಲ ಎನ್ನುವ ಮೋದಿಯೂ ಮೌನವಾಗಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಬೇಕು. ಇದಕ್ಕಾಗಿ ಯುವ ಕಾಂಗ್ರೆಸ್(Congress) ಹೋರಾಟ ಮುಂದುವರೆಸಲಿದೆ. ಈಶ್ವರಪ್ಪ ಬಂಧನವಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಜತೆಗೆ ಸಂತೋಷ್ ಕುಟುಂಬಸ್ಥರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು. ಅಲ್ಲಿಯವರೆಗೂ ನಾವು ಹೋರಾಟ ಹಿಂಪಡೆಯಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸತ್ಯ ಎದುರಿಸುವ ದಿನ ಬರಲಿದೆ: ವಿಪಕ್ಷದ ವಿರುದ್ಧ ಬೊಮ್ಮಾಯಿ ಕಿಡಿ
'ಸಂತೋಷ ಸಾವಿಗೂ ಡಿಕೆಶಿ, ಹೆಬ್ಬಾಳ್ಕರ್‌ಗೂ ಏನು ಸಂಬಂಧ?'
ಕೊಪ್ಪಳ: ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೆಸರನ್ನು ಸಂತೋಷ ಪಾಟೀಲ್(Santosh Patil) ಅವರು ಬರೆದಿಟ್ಟು ಆತ್ಮಹತ್ಯೆ(Suicide) ಮಾಡಿಕೊಂಡಿರುವಾಗ ವಿನಾಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೆಸರನ್ನು ಎಳೆದು ತರುವುದು ಸರಿಯಲ್ಲ. ಕೇಸ್‌ಗೂ- ಅವರಿಗೂ ಏನು ಸಂಬಂಧ? ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಅವರು ಖಾರವಾಗಿ ಪ್ರಶ್ನಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್(Congress) ಹಮ್ಮಿಕೊಂಡಿದ್ದ ಪ್ರತಿಭಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಹೀಗೆಲ್ಲಾ ಹಗುರವಾಗಿ ಮಾತನಾಡುವುದು ಮತ್ತು ಆರೋಪ ಮಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.
