ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಹಿಂದೂ ಜಾಗೃತಾ ವೇದಿಕೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಯತ್ನಾಳ್ ಅವರ ಭಾಷಣವು ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಅಥವಾ ಬಿಜೆಪಿ ನಾಯಕತ್ವದ ವಿರುದ್ಧವೇ ಎಂಬ ಕುತೂಹಲ!

ಮೈಸೂರು, (ನ. 19): ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯರ ವಿರುದ್ಧ ನೇರಾನೇರ ವಾಗ್ದಾಳಿ ನಡೆಸುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಗೆ ಪ್ರವೇಶಿಸಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳರ ಆಗಮನಕ್ಕೆ ಹಿಂದೂ ಜಾಗೃತಾ ವೇದಿಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

ಅದ್ಧೂರಿ ಮೆರವಣಿಗೆ: ಬೆಳಿಗ್ಗೆ 11 ಗಂಟೆಗೆ ಆರಂಭ

ಮೈಸೂರು ಟೋಲ್‌ಗೇಟ್ ಬಳಿ ಯತ್ನಾಳ್ ಅವರಿಗೆ ಭರ್ಜರಿ ಸ್ವಾಗತ ಕೋರಲಾಗುತ್ತಿದೆ. ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರಾಲಿ, ಭರ್ಜರಿ ಮೆರವಣಿಗೆಯೊಂದಿಗೆ ಕಲಾಮಂದಿರಕ್ಕೆ ತೆರಳಲಿದ್ದಾರೆ.

ಕಲಾಮಂದಿರದಲ್ಲಿ 11:30ಕ್ಕೆ ಭರ್ಜರಿ ಕಾರ್ಯಕ್ರಮ:

ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವೇದಿಕೆಯಲ್ಲಿ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಭಾಷ್ಯಂ ಸ್ವಾಮೀಜಿ, ಎಂಎಲ್‌ಸಿ ಹೆಚ್. ವಿಶ್ವನಾಥ್, ಬಿಜೆಪಿ ಮಾಜಿ ಶಾಸಕ ಮಾರುತಿ ರಾವ್ ಪವಾರ್ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಸಾವಿರಾರು ಅಭಿಮಾನಿಗಳನ್ನ ಕರೆಸಲು ವ್ಯಾಪಕ ತಯಾರಿ ನಡೆಸಲಾಗಿದೆ.

ಸಿಎಂ ತವರು ಜಿಲ್ಲೆಯಲ್ಲೇ ಹುಲಿ ಗರ್ಜನೆ:

ಇಂದಿನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಥವಾ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧವೇ ಗುರಿ ಇಡಲಿದ್ದಾರಾ? ಯತ್ನಾಳ್ ಅವರು ಭಾಷಣದಲ್ಲಿ ಯಾರ ಮೇಲೆ ದಾಳಿ ಮಾಡಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ. ಈ ಘಟನೆ ಮೈಸೂರಿನ ರಾಜಕೀಯ ವಾತಾವರಣವನ್ನು ಬಿಸಿಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.