ಶಿಯೋಮಿಯ 5551 ಕೋಟಿ ರೂ. ಆಸ್ತಿಯನ್ನು ಜಪ್ತಿಗೆ ಆದೇಶ ನೀಡಿರುವುದು ಸರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ತಿಳಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ನೋಟಿಸ್‌ ಜಾರಿಗೊಳಿಸಿದೆ.

ಚೀನಾ ಮೂಲದ ಶಿಯೋಮಿ ಟೆಕ್ನಾಲಜಿ ಕಂಪನಿಗೆ ಸೇರಿದ 5551.27 ಕೋಟಿ ರೂ. ಜಪ್ತಿ ಮಾಡಲು ಜಾರಿ ನಿರ್ದೇಶನಾಲಯ (Enforcement Directorate) (ಇಡಿ) ಹೊರಡಿಸಿದ್ದ ಆದೇಶವನ್ನು ಕಾಯಂಗೊಳಿಸಿದ ಸಕ್ಷಮ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಶಿಯೋಮಿ ಕಂಪನಿ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಶಿಯೋಮಿ ಟೆಕ್ನಾಲಜಿ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಎಸ್‌.ಸಂಜಯ್‌ ಗೌಡ ಅವರ ರಜಾಕಾಲದ ನ್ಯಾಯಪೀಠ, ಈ ಆದೇಶ ಮಾಡಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ.

ಇಡಿ (ED) ಜಪ್ತಿ ಆದೇಶವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ-1999ರ ಅಡಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರವು ಕಾಯಂಗೊಳಿಸಿದೆ. ಇದರಿಂದ 2022ರ ಏಪ್ರಿಲ್‌ 29ರಂದು ‘ಇಡಿ’ ಹೊರಡಿಸಿದ್ದ ಜಪ್ತಿ ಆದೇಶ ಮತ್ತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ‘ಇಡಿ’ ಆದೇಶಕ್ಕೆ ತಡೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ಶಿಯೋಮಿ ಕೋರಿತ್ತು. ಆ ಮನವಿ ಪುರಸ್ಕರಿಸಲು ನ್ಯಾಯಪೀಠ ಗುರುವಾರ ನಿರಾಕರಿಸಿದೆ.

ಇದನ್ನು ಓದಿ: Xiaomi ಬಳಿ 5,551 ಕೋಟಿ ವಶಪಡಿಸಿಕೊಂಡ ED: ವಿದೇಶಿ ವಿನಿಮಯ ಪ್ರಾಧಿಕಾರ ಸ್ಪಷ್ಟನೆ

ಪ್ರಕರಣದ ಹಿನ್ನೆಲೆ:
ಯಾವುದೇ ಗುತ್ತಿಗೆ ಒಪ್ಪಂದ ಮಾಡಿಕೊಳ್ಳದೆ ಬೌದ್ಧಿಕ ಆಸ್ತಿ ಹಕ್ಕಿನ ಅಡಿ ವಿದೇಶಿ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಶಿಯೋಮಿ ಕಂಪನಿಗೆ ಸೇರಿದ ಭಾರತದ ನಾಲ್ಕು ಬ್ಯಾಂಕ್‌ ಖಾತೆಗಳಲ್ಲಿನ 5,551.27 ಕೋಟಿ ರೂ. ಜಪ್ತಿ ಮಾಡಲು 2022ರ ಏಪ್ರಿಲ್‌ 29ರಂದು ‘ಇಡಿ’ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಶಿಯೋಮಿ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ‘ಇಡಿ’ ಆದೇಶಕ್ಕೆ ಹೈಕೋರ್ಟ್‌ ತಾತ್ಕಾಲಿಕವಾಗಿ ತಡೆ ನೀಡಿ ಕಂಪನಿಯ ದಿನನಿತ್ಯದ ಖರ್ಚುಗಳಿಗೆ ತನ್ನ ಬ್ಯಾಂಕಿನಿಂದ ಹಣ ತೆಗೆಯಲು ಅನುಮತಿ ನೀಡಿತ್ತು.

ನಂತರ ಶಿಯೋಮಿ ಬ್ಯಾಂಕ್‌ ಖಾತೆಗಳ ಜಪ್ತಿಗೆ ಆದೇಶ ಮಾಡಿರುವ ಇಡಿ ಅಧಿಕಾರಿ, ಆ ಆದೇಶವನ್ನು 30 ದಿನಗಳಲ್ಲಿ ಸಕ್ಷಮ ಪ್ರಾಧಿಕಾರದ ಮುಂದೆ ಇಡಬೇಕು. ಸಕ್ಷಮ ಪ್ರಾಧಿಕಾರವು 180 ದಿನಗಳಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯವರೆಗೆ ಶಿಯೋಮಿ ದೈನಂದಿನ ಚಟುವಟಿಕೆಗಳನ್ನು ನಡೆಸಲು ಜಪ್ತಿ ಮಾಡಿರುವ ಬ್ಯಾಂಕ್‌ ಖಾತೆಗಳಿಂದ ಹಣ ಬಳಸಬಹುದಾಗಿದೆ ಎಂದು ನೀಡಿರುವ ಮಧ್ಯಂತರ ಆದೇಶ ಅಸ್ತಿತ್ವದಲ್ಲಿರಲಿದೆ ಎಂದು ಹೈಕೋರ್ಟ್‌ 2022ರ ಜುಲೈನಲ್ಲಿ ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತ್ತು. ‘ಇಡಿ’ ಆದೇಶವನ್ನು ಎತ್ತಿಹಿಡಿದು ಸಕ್ಷಮ ಪ್ರಾಧಿಕಾರ ಇತ್ತೀಚೆಗೆ ಆದೇಶಿಸಿತ್ತು. ಇದರಿಂದ ಶಿಯೋಮಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಇದನ್ನೂ ಓದಿ: ಚೀನಾದ ಸ್ಮಾರ್ಟ್‌ಫೋನ್ ಸಂಸ್ಥೆಗೆ ಇಡಿ ಶಾಕ್‌: ಶಿಯೋಮಿಗೆ ಸೇರಿದ 5,551.27 ರೂ.ಜಪ್ತಿ