ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಎರಡನೇ ಜಿಲ್ಲೆಯಾಗಿದೆ. ಬಂಡೀಪುರ ಮತ್ತು ಬಿಳಿಗಿರಿರಂಗನ ಬೆಟ್ಟ ವನ್ಯಧಾಮಗಳಲ್ಲಿ ಹುಲಿಗಳ ಸಂರಕ್ಷಣೆ ಯಶಸ್ವಿಯಾಗಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದೆ.

DID YOU
KNOW
?
ದೇಶದ ಹುಲಿಗಳ ನಾಡು ಯಾವುದು?
ಮಧ್ಯ ಪ್ರದೇಶ ರಾಜ್ಯವು 785 ಹುಲಿಗಳನ್ನು ಹೊಂದಿದೆ. ಈ ಮೂಲಕ ದೇಶದ ಹುಲಿಗಳ ನಾಡು ಆಗಿದೆ. ಜಿಲ್ಲೆಗೆ ಹೋಲಿಸಿದರೆ, ಉತ್ತರಾಖಂಡ ರಾಜ್ಯದ ನೈನಿತಾಲ್‌ ಜಿಲ್ಲೆಯಲ್ಲಿ 260 ಹುಲಿಗಳಿವೆ.

ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಾಮರಾಜನಗರ (ಜು.29): ಕರ್ನಾಟಕದಲ್ಲಿ ಹುಲಿಗಳ ಸಂತತಿಗೆ ಪ್ರಾಶಸ್ತ್ಯ ಸ್ಥಳವಾಗಿರುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ ಆಗುತ್ತಿದೆ. ಚಾಮರಾಜನಗರ ಜಿಲ್ಲೆಯ ಬಂಡೀಪುರ, ಬಿಳಿಗಿರಿರಂಗನ ಬೆಟ್ಟ ವನ್ಯಧಾಮದಲ್ಲಿಯೂ ಕಳೆದ 15 ವರ್ಷದಲ್ಲಿ 150 ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮೂಲಕ ಅತಿಹೆಚ್ಚು ಹುಲಿಗಳನ್ನು ಪೋಷಿಸುತ್ತಿರುವ ಭಾರತದ 2ನೇ ಜಿಲ್ಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಪ್ರತಿ ವರ್ಷವೂ ಜುಲೈ 29ರ ದಿನವನ್ನು 'ವಿಶ್ವಹುಲಿ' ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿಂದೆ ಹುಲಿಗಳ ಸಂರಕ್ಷಣೆ ದೊಡ್ಡ ಸವಾಲಾಗಿತ್ತು. ಆದರೀಗ ಸಂರಕ್ಷಣೆ ಉತ್ತಮವಾಗಿದ್ದು, ಹುಲಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ಗಡಿಜಿಲ್ಲೆ ಚಾಮರಾಜನಗರ 'ಹುಲಿಗಳ ನಾಡು' ಎಂದೇ ಹೆಸರು ಗಳಿಸಿದೆ. ಭಾರತದಲ್ಲಿ ಉತ್ತರಾಖಂಡ್‌ನ ಜಿಮ್ ಕಾರ್ಬೆಟ್ ಅಭಯಾರಣ್ಯವನ್ನು ಹೊಂದಿರುವ ನೈನಿತಾಲ್ ಜಿಲ್ಲೆ ಅತಿಹೆಚ್ಚು (260) ಹುಲಿಗಳನ್ನು ಹೊಂದಿರುವ ಜಿಲ್ಲೆ ಎಂಬ ಖ್ಯಾತಿ ಪಡೆದಿದೆ. ಇದನ್ನು ಬಿಟ್ಟರೆ ಕರ್ನಾಟಕದ ಬಂಡೀಪುರ ಅಭಯಾರಣ್ಯ ಹೊಂದಿರುವ ಚಾಮರಾಜನಗರ ಜಿಲ್ಲೆ (2024ರ ವರದಿ ಪ್ರಕಾರ 154ಕ್ಕೂ ಅಧಿಕ) ಹೆಚ್ಚು ಹುಲಿಗಳನ್ನು ಹೊಂದಿದ ಜಿಲ್ಲೆಯಾಗಿದೆ. ಈ ಮೂಲಕ ದೇಶದಲ್ಲಿ ಅತಿಹೆಚ್ಚು ಹುಲಿಗಳನ್ನು ಹೊಂದಿದ 2ನೇ ಜಿಲ್ಲೆ ಎಂಬ ಖ್ಯಾತಿಯನ್ನು ಪಡೆದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಎರಡೂ ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. ಮಲೈ ಮಹದೇಶ್ವರ ವನ್ಯ ಜೀವಿಧಾಮವೂ ಕೂಡ ಹುಲಿ ಸಂರಕ್ಷಿತ ಪ್ರದೇಶ ಆಗುವ ನಿರೀಕ್ಷೆಯಿದೆ. ಅದರ ಜೊತೆಗೆ ಕಾವೇರಿ ವನ್ಯಧಾಮ ಕೂಡ ಚಾಮರಾಜನಗರ ಜಿಲ್ಲೆಯಲ್ಲಿದೆ.ಎರಡು ಹುಲಿ ಸಂರಕ್ಷಿತ ಅರಣ್ಯ, ಎರಡು ವನ್ಯಜೀವಿಧಾಮ ಹೊಂದಿರುವ ಜಿಲ್ಲೆ ಅಂದರೆ ಅದು ಚಾಮರಾಜನಗರ ಅಷ್ಟೇ. ಬಂಡೀಪುರ ಅರಣ್ಯ ಪ್ರದೇಶವು 1973ರಲ್ಲಿ ಮೊದಲಿಗೆ ಹುಲಿ ಸಂರಕ್ಷಿತ ಅರಣ್ಯಪ್ರದೇಶವಾಗಿ ಘೋಷಣೆಯಾಯಿತು. ಆ ಸಂದರ್ಭದಲ್ಲಿ ಹುಲಿಗಳ ಸಂಖ್ಯೆ ಕೇವಲ 12 ಇತ್ತು. ಕಾಲ ಕ್ರಮೇಣ ಹುಲಿಗಳ ಸಂರಕ್ಷಣೆ ಹೆಚ್ಚಾಗಿದ್ದರಿಂದ, ಹುಲಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಲೇ ಹೋಗುತ್ತಿದೆ.

ಇದಿಗ 2024ರ ಕರ್ನಾಟಕ ಅರಣ್ಯ ಇಲಾಖೆ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 393 ಹುಲಿಗಳಿವೆ. ಅದರಲ್ಲಿ ಬಂಡೀಪುರದಲ್ಲಿ ಸುಮಾರು 154ಕ್ಕೂ ಹೆಚ್ಚು ಹುಲಿಗಳಿರೋದು ಗೊತ್ತಾಗಿದೆ. ನಾಗರಹೊಳೆ 149, ಭದ್ರಾ 29, ಅದೇ ರೀತಿ ಬಿಳಿಗಿರಿ ರಕ್ಷಿತಾರಣ್ಯದಲ್ಲೂ ಅಂದಾಜು 39 ಹುಲಿಗಳಿರೋದು ಕಂಡು ಬಂದಿದೆ. ಕಾಳಿ(ಅಣಶಿ ದಾಂಡೇಲಿ) 22 , ಮಲೈ ಮಹದೇಶ್ವರ ವನ್ಯಜೀವಿಧಾಮದಲ್ಲಿ 15 ರಿಂದ 20 ಕ್ಕೂ ಹೆಚ್ಚು ಹುಲಿಗಳಿವೆ. ಇದೀಗ ಅದರ ಸಂಖ್ಯೆ 25 ರಿಂದ 30ಕ್ಕೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ 15 ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 150 ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೆ, ಅರಣ್ಯ ಇಲಾಖೆಯ ಸರಂಕ್ಷಣಾ ಕ್ರಮಗಳು ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಬಹುದು.

ಅರಣ್ಯ ಇಲಾಖೆ ಹುಲಿಗಳ ಹಾಗೂ ವನ್ಯಜೀವಿ ಕಳ್ಳ ಬೇಟೆಗಾರರ ಮೇಲೆ ಸಾಕಷ್ಟು ನಿಗಾ ಇಟ್ಟಿತು. ಇದರಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರವಾಸೋದ್ಯಮ ಚಟುವಟಿಕೆ ಕೂಡ ಹೆಚ್ಚಾಗಿದೆ. ದೇಶ ವಿದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಅದೇ ರೀತಿ ಕಾಡಿನ ಸಂರಕ್ಷಣೆಯಲ್ಲೂ ಹುಲಿಗಳು ಮಹತ್ವದ ಪಾತ್ರವಹಿಸಿವೆ. ಹುಲಿಗಳ ಸಂಖ್ಯೆ ಚಾಮರಾಜನಗರ ಜಿಲ್ಲೆಯಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಪ್ರವಾಸಿಗರೂ ಕೂಡ ಸಂತೋಷಗೊಂಡಿದ್ದಾರೆ. ಹುಲಿಗಳ ದರ್ಶನದಿಂದ ಪುಳಕಿತರಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಚಾಮರಾಜನಗರ ಜಿಲ್ಲೆಯಲ್ಲಿ ಪೋಷಣೆ ಆಗುತ್ತಿರುವುದರಿಂದ 'ಹುಲಿಗಳ ನಾಡು' ಎಂಬ ಪ್ರಖ್ಯಾತಿ ಗಳಿಸಿದೆ.