ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರವೇಶಕ್ಕೆ ನಿರ್ಬಂಧ; ಪ್ರವಾಸಿಗರಿಗೆ ಬಿಗ್ ಶಾಕ್!
ಕನ್ನಡ ನಾಡಿನ ಜೋಗ ಜಲಪಾತ ವೀಕ್ಷಣೆಗೆ ಸರ್ಕಾರದಿಂದ ಮೂರು ತಿಂಗಳ ಕಾಲ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಜಲಪಾತದ ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಈ ನಿರ್ಬಂಧವನ್ನು ಜಾರಿಗೊಳಿಸಲಾಗಿದೆ. ಜನವರಿ 1 ರಿಂದ ಮಾರ್ಚ್ 15 ರವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ಶಿವಮೊಗ್ಗ (ಡಿ.17): ಕನ್ನಡ ನಾಡಿನಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಸರ್ಕಾರದಿಂದ ಮೂರು ತಿಂಗಳ ಕಾಲ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಲಾಗಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತಕ್ಕೆ ಮೂರು ತಿಂಗಳ ಕಾಲ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಜಲಪಾತದ ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿರ್ಬಂಧವು ಜನವರಿ 01 ರಿಂದ ಮಾರ್ಚ್ 15ರ ವರೆಗೆ ಸುಮಾರು ಎರಡೂವರೆ ತಿಂಗಳಿಂದ 3 ತಿಂಗಳುಗಳ ಕಾಲ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶಕ್ಕೆ ನಿರ್ಭಂಧ ವಿಧಿಸಲಾಗಿದೆ.
ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯ ಧ್ಯೇಯವಾಕ್ಯವಾಗಿರುವ 'ಒಂದು ರಾಜ್ಯ ಹಲವು ಪ್ರಪಂಚ' ಎಂಬುದರಲ್ಲಿ ನೈಸರ್ಗಿಕ ಸೌಂದರ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದ ಜೋಗ ಜಲಪಾತವೇ ಇದೀಗ ಪ್ರವಾಸಿಗರಿಗೆ ಪ್ರವೇಶಕ್ಕೆ ಅಲಭ್ಯವಾಗುತ್ತಿದೆ. ಅದು ಕೂಡ ಪ್ರವಾಸಕ್ಕೆ ಪ್ರಾಶಸ್ತ್ಯವಾದ ಡಿಸೆಂಬರ್‌ನಿಂದ ಮಾರ್ಚ್ ತಿಂಗಳ ಅವಧಿಯ ನಡುವೆಯೇ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಪ್ರವಾಸಿಗರಿಗೆ ಭಾರೀ ನಿರಾಸೆ ಉಂಟಾಗಲಿದೆ. ಇನ್ನು ಕೆಎಸ್‌ಆರ್‌ಟಿಸಿಯಿಂದ ಜೋಗ ಜಲಪಾತಕ್ಕೂ ನಿರಂತರವಾಗಿ ಪ್ರವಾಸಿ ಬಸ್‌ಗಳನ್ನು ಬಿಡಲಾಗುತ್ತಿದ್ದು, ಜ.01ರಿಂದ ಈ ಪ್ರವಾಸಿ ಬಸ್‌ಗಳು ಕೂ ಸ್ಥಗಿತವಾಗಲಿವೆ.