ಕಣ್ಣು ಕಾಣದಿದ್ರೂ ಲೆಕ್ಕಪತ್ರದ ಜೊತೆ ಸರ್ಕಾರಿ ನೌಕರಿ ಮಾಡುತ್ತ ಅಂಗವಿಕಲರಿಗೆ ಮಾದರಿಯಾದ ದಿಲೀಪ್!
ಆತನಿಗೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ. ದೃಷ್ಟಿದೋಷ ಹೊಂದಿರುವ ಅಂಗವಿಕಲ. ಆದ್ರೂ ಹಠ ಬಿಡದೇ ಕಷ್ಟಪಟ್ಟು ಪರೀಕ್ಷೆ ಪಾಸು ಮಾಡಿ ಇದೀಗ ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಅದ್ರಲ್ಲೂ ಲೆಕ್ಕಪತ್ರ ಹೊಂದಿರೋ ಖಜಾನೆ ಇಲಾಖೆಯಲ್ಲಿ ನಿತ್ಯದ ಕೆಲಸ ಮಾಡ್ತಿದ್ದು, ಎಲ್ಲರೊಂದಿಗೆ ಬೆರೆತು ಸೈ ಎನಿಸಿಕೊಂಡಿದ್ದಾನೆ. ಆ ಸಾಧಕನ ಪರಿಚಯ ಇಲ್ಲಿದೆ
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ: (ಡಿ.3)- ಆತನಿಗೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ. ದೃಷ್ಟಿದೋಷ ಹೊಂದಿರುವ ಅಂಗವಿಕಲ. ಆದ್ರೂ ಹಠ ಬಿಡದೇ ಕಷ್ಟಪಟ್ಟು ಪರೀಕ್ಷೆ ಪಾಸು ಮಾಡಿ ಇದೀಗ ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಅದ್ರಲ್ಲೂ ಲೆಕ್ಕಪತ್ರ ಹೊಂದಿರೋ ಖಜಾನೆ ಇಲಾಖೆಯಲ್ಲಿ ನಿತ್ಯದ ಕೆಲಸ ಮಾಡ್ತಿದ್ದು, ಎಲ್ಲರೊಂದಿಗೆ ಬೆರೆತು ಸೈ ಎನಿಸಿಕೊಂಡಿದ್ದಾನೆ. ಸಾಲದ್ದಕ್ಕೆ ಆತ್ಮಸ್ಥೈರ್ಯ ಕಳೆದುಕೊಳ್ಳುವಂತಹ ಇತರ ವಿಕಲಚೇತನರಿಗೆ ಮಾದರಿಯಾಗಿದ್ದಾನೆ. ಹಾಗಾದರೆ ಆತ ಯಾರು? ಎಲ್ಲಿದ್ದಾನೆ? ಹೇಗೆ? ಕೆಲಸ ಮಾಡ್ತಾನೆ ಎಂಬ ಕುತೂಹಲವೇ ಇಲ್ಲಿದೆ ನೋಡಿ ಸಾಧಕನ ಪರಿಚಯ.
ಹೌದು, ದೃಷ್ಟಿದೋಷದಿಂದ ತನ್ನೆರಡು ಕಣ್ಣುಗಳು ಕಾಣಿಸದಿದ್ದರೂ ಕಂಪ್ಯೂಟರ್ ಮುಂದೆ ಕುಳಿತು ಸಲೀಸಾಗಿ ಕೆಲಸ ಮಾಡಬಲ್ಲ ಈತನ ಹೆಸರು ದಿಲೀಪ್ ಮಲ್ಲಿಕಾರ್ಜುನ ಕೊಳ್ಳಿ ಅಂತ. ಮೂಲತಃ ಬಾಗಲಕೋಟೆ ಜಿಲ್ಲೆಯ ಕಿರಸೂರು ಗ್ರಾಮದವರು. ಈತನಿಗೆ ಚಿಕ್ಕ ವಯಸ್ಸಿನಲ್ಲೇ ಕಣ್ಣುಗಳು ಹೋಗಿವೆ. ತಂದೆ ತಾಯಿಗಳು ಎಲ್ಲೆ ಚಿಕಿತ್ಸೆಗೆ ಎಂದು ತೋರಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ತಾನೇ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅನ್ನೋ ಕಾರಣಕ್ಕೆ ಬ್ರೈಲ್ ಲಿಪಿಯ ಮೂಲಕ ಜ್ಞಾನವನ್ನ ಪಡೆದು ಪರೀಕ್ಷೆ ಪಾಸಾಗಿದ್ದೇನೆ. ಸದ್ಯ ಬಾಗಲಕೋಟೆ ಜಿಲ್ಲಾಡಳಿತದ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ನಿತ್ಯ ಲೆಕ್ಕಪತ್ರ ನೋಡಿಕೊಳ್ಳುವ ಜವಾಬ್ದಾರಿ ಈತನದ್ದಾಗಿದೆ. ಇನ್ನು ತಾನು ಕೆಲಸ ಮಾಡುವ ಕಂಪ್ಯೂಟರ್ ಗೆ ಸೌಂಡ್ ಬಾಕ್ಸ್ ಕೂರಿಸಿದ್ದು, ಏನೇ ಮಾಡಿದ್ರೂ ಕಂಪ್ಯೂಟರ್ ಮೌಖಿಕವಾಗಿ ಮಾಹಿತಿ ನೀಡುತ್ತೆ. ಈ ಮೂಲಕ ತಾನು ನಿತ್ಯ ಕೆಲಸ ಮಾಡುತ್ತಿದ್ದು, ತನಗೆ ಕಣ್ಣಿಲ್ಲ ಎಂಬ ಕೊರಗು ಇಲ್ಲ, ಮೇಲಾಗಿ ಕಣ್ಣು ಬರೋದಿಲ್ಲ ಅನ್ನೋ ಮಾತನ್ನು ಸಹ ವೈದ್ಯರು ತಿಳಿಸಿದ್ದು, ಹೀಗಾಗಿ ಅಂಗವಿಕಲರು ತಮ್ಮ ಶಕ್ತ್ಯಾನುಸಾರ ಪ್ರಯತ್ನಿಸಿ ಎಲ್ಲರಂತೆ ನಾವು ಸಹ ಬಾಳಬಹುದು ಅನ್ನೋದನ್ನ ತೋರಿಸಬಹುದು ಅಂತಾರೆ ದಿಲೀಪ್.
ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಗಣಿನಾಡಿನ ಯುವಕ: ಅಂಗವಿಕಲತೆಯನ್ನೂ ಮೀರಿ ಸಾಧನೆ ಗೈದ 17ರ ಪೋರ !
ಉಪನ್ಯಾಸಕನಾಗಬೇಕೆಂಬ ಹಂಬಲ:
ಇನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಬ್ಬಳ್ಳಿಯ ಸಿದ್ದಾರೂಢರ ಅಂಧ ಮಕ್ಕಳ ಶಾಲೆಯಲ್ಲಿ ಕಲಿತು, ಬೆಂಗಳೂರಿನಲ್ಲಿ ಪಿಯುಸಿ ಮುಗಿಸಿ, ಬಾಗಲಕೋಟೆಯಲ್ಲಿ ಪದವಿ ಪಡೆದು ಸದ್ಯ ಎಂಎ ಪದವೀಧರನಾಗಿರೋ ದಿಲೀಪ್ ಜೀವನದಲ್ಲಿ ಉಪನ್ಯಾಸಕನಾಗಬೇಕೆಂಬ ಕನಸು ಹೊತ್ತಿದ್ದು, ಸಿಇಟಿ ಬರೆಯುವ ಮೂಲಕ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದಾನೆ. ಆದ್ರೂ ಛಲ ಬಿಡದ ದಿಲೀಪ್ ಇನ್ನಷ್ಟು ಓದಿ ಪರೀಕ್ಷೆ ಬರೆದು ಉಪನ್ಯಾಸಕನಾಗುವ ಹಠ ತೊಟ್ಟಿದ್ದಾನೆ. ಇನ್ನು ಮನೆಯಲ್ಲೂ ತನ್ನ ಕೆಲಸಗಳನ್ನ ತಾನೇ ಮಾಡಿಕೊಂಡು ಕಣ್ಣಿರದಿದ್ದರೂ ಇನ್ನೊಬ್ಬರಿಗೆ ಹೊರೆಯಾಗದಂತೆ ಜೀವನ ನಡೆಸುತ್ತಿದ್ದು, ಇತ್ತ ಕಚೇರಿಯಲ್ಲೂ ಸಹ ಯಾವುದೇ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿಲ್ಲ. ಹೀಗಾಗಿ ದಿಲೀಪ್ ಕೆಲಸ ನಮಗೂ ಸಹ ಅಚ್ಚರಿ ಮೂಡಿಸಿದೆ ಅಂತಾರೆ ಖಜಾನೆ ಇಲಾಖೆ ಅಧಿಕಾರಿ ಶಿವಶರಣಪ್ಪ ಕುಂಬಾರ.
ರಾಜ್ಯ ಸರ್ಕಾರದಿಂದ ಅಂಗವಿಕಲರ ನಿರ್ಲಕ್ಷ್ಯ; ಹೊಸಪೇಟೆಯಿಂದ ಬೆಂಗಳೂರಿಗೆ ಪಾದಾಯಾತ್ರೆ ಹೊರಟ ವಿಶೇಷಚೇತನರು
ಒಟ್ಟಿನಲ್ಲಿ ಕಣ್ಣಿದ್ದೂ ಕೆಲಸ ಮಾಡದ ಎಷ್ಟೋ ಜನ ಸರ್ಕಾರಿ ನೌಕರರ ಮಧ್ಯೆ ಇಂದು ದಿಲೀಪ್ ಕಣ್ಣಿರದಿದ್ದರೂ ಉತ್ತಮವಾಗಿ ಕೆಲಸ ನಿರ್ವಹಣೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದು ಇತರರಿಗೂ ಮಾದರಿಯಾಗಿದ್ದಾನೆ.