ಸಾವಿರಾರು ಹೆಣ್ಮಕ್ಕಳ ಮೇಲೆ ಪ್ರಜ್ವಲ್ ರೇವಣ್ಣ ದೌರ್ಜನ್ಯ: ರಾಜ್ಯ ಮಹಿಳಾ ಆಯೋಗ
ಹಾಸನ ಲೈಂಗಿಕ ಹಗರಣದಲ್ಲಿ ಅಧಿಕಾರ ಹಾಗೂ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಸಾವಿರಾರು ಹೆಣ್ಣು ಮಕ್ಕಳನ್ನು ಹೆದರಿಸಿ, ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.
ಬೆಂಗಳೂರು (ಏ.29): ‘ಹಾಸನ ಲೈಂಗಿಕ ಹಗರಣದಲ್ಲಿ ಅಧಿಕಾರ ಹಾಗೂ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಸಾವಿರಾರು ಹೆಣ್ಣು ಮಕ್ಕಳನ್ನು ಹೆದರಿಸಿ, ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಇಡೀ ಪ್ರಪಂಚದಲ್ಲೇ ಇಂತಹ ಕೃತ್ಯ ಇದೇ ಮೊದಲ ಬಾರಿಗೆ ನಡೆದಿದ್ದು, ನಮ್ಮ ಮಣ್ಣಿನಲ್ಲಿ ನಡೆದಿರುವುದು ನಮ್ಮ ಪಾಲಿನ ದೊಡ್ಡ ದುರಂತ’ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಯಾರೇ ಬಂದು ದೂರು ಕೊಟ್ಟರೂ ಅವರ ಗೌಪ್ಯತೆ ಕಾಪಾಡುತ್ತೇವೆ. ಜತೆಗೆ ರಕ್ಷಣೆ ನೀಡುತ್ತೇವೆ. ಹೀಗಾಗಿ ಧೈರ್ಯವಾಗಿ ಬಂದು ದೂರು ದಾಖಲಿಸಬೇಕು ಎಂದು ಕರೆ ನೀಡಿದರು. ಇನ್ನು ಪೆನ್‌ಡ್ರೈವ್‌ನಲ್ಲಿರುವ ವಿಡಿಯೋಗಳನ್ನು ನೋಡಲು ಕಷ್ಟವಾಯಿತು. ಅಮಾಯಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರನ್ನು ಅಕ್ಷರಶಃ ಶೋಷಣೆ ಮಾಡಲಾಗಿದೆ. ಇನ್ನು ಮುಂದೆ ಯಾರೂ ಆ ವಿಡಿಯೋಗಳನ್ನು ವೈರಲ್ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಆ ವ್ಯಕ್ತಿಯೂ ಚಿತ್ರೀಕರಣ ಮಾಡಿದ್ದಾರೆ: ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ಹೆಣ್ಣು ಮಕ್ಕಳನ್ನು ಹೆದರಿಸಿ, ನಂಬಿಸಿ ಲೈಂಗಿಕ ಶೋಷಣೆ ನಡೆಸಲಾಗಿದೆ. ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಅವಮಾನ. ಇಂತಹ ಘಟನೆ ನಮ್ಮ ಮಣ್ಣಿನಲ್ಲಿ ನಡೆದಿದೆ ಎಂಬುದು ದುರಂತ. ಹೆಣ್ಣು ಮಕ್ಕಳು, ಮಹಿಳೆಯರ ಅಸಹಾಯಕತೆಯನ್ನು ಉಪಯೋಗಿಸಿಕೊಂಡು ಲೈಂಗಿಕ ಶೋಷಣೆ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣದು ವಿಶ್ವದಲ್ಲೇ ದೊಡ್ಡ ಲೈಂಗಿಕ ಹಗರಣ: ಸಚಿವ ಕೃಷ್ಣ ಬೈರೇಗೌಡ
ಲೈಂಗಿಕ ಶೋಷಣೆ ನಡೆಸಿದ ವ್ಯಕ್ತಿಯೇ ಚಿತ್ರೀಕರಣವನ್ನೂ ಮಾಡಿದ್ದಾರೆ. ಸಾವಿರಾರು ಹೆಣ್ಣು ಮಕ್ಕಳ ಭವಿಷ್ಯ ಇದರ ಮೇಲೆ ಇರುವುದರಿಂದ ಸೂಕ್ಷ್ಮತೆ ಅರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿ ರಚನೆ ಮಾಡಿದ್ದಾರೆ. ಹಾಸನ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗೆ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲು ತಿಳಿಸಿದ್ದರೂ ಮಾಡಿರಲಿಲ್ಲ. ಇದೀಗ ಸಂತ್ರಸ್ತೆ ದೂರಿನ ಆಧಾರದ ಮೇಲೆ ಎಫ್‌ಐಆರ್ ಆಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಆಗಲಿದೆ ಎಂದು ಹೇಳಿದರು.