ಚಿಕ್ಕೋಡಿಯಿಂದ ಅಮಿತ್‌ ಕೋರೆ ಸ್ಪರ್ಧಿಸ್ತಾರಾ? ಖಾನಾಪುರದಲ್ಲಿ ಬಿಜೆಪಿ ಟಿಕೆಟ್‌ಗೆ ಭಾರೀ ಡಿಮಾಂಡ್‌  ಕಾಗವಾಡದಲ್ಲಿ ಶ್ರೀಮಂತ ಪಾಟೀಲ ವಿರುದ್ಧ ಕಣಕ್ಕಿಳಿಯಲು ರಾಜು ಕಾಗೆ ತಯಾರಿ  ಹುಕ್ಕೇರಿಯಲ್ಲಿ ಬಿಜೆಪಿ ಟಿಕೆಟ್‌ಗೆ ದಿ.ಉಮೇಶ ಕತ್ತಿ ಸಹೋದರನ ಕಸರತ್ತು  ನಿಪ್ಪಾಣಿಯಲ್ಲಿ ಉತ್ತಮ ಪಾಟೀಲಗೆ ಕಾಂಗ್ರೆಸ್‌ ಗಾಳ

ಶ್ರೀಶೈಲ ಮಠದ

ಬೆಳಗಾವಿ (ಡಿ.20) : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಒಂದೆಡೆ ಸಕ್ಕರೆ ಲಾಬಿ, ಇನ್ನೊಂದೆಡೆ ಹೊಂದಾಣಿಕೆ ಹಾಗೂ ಒಳ ಒಪ್ಪಂದದ ರಾಜಕಾರಣ ಮಾಮೂಲಿ. ಇಲ್ಲಿ ಪಕ್ಷಗಳಿಗಿಂತ ವೈಯಕ್ತಿಕ ಪ್ರತಿಷ್ಠೆ ಮೇಲೆಯೇ ರಾಜಕಾರಣ ನಿಂತಿದೆ. ಪ್ರಸ್ತುತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರವ್ಯಾಪ್ತಿಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ, 6ರಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ‘ಕೈ’-‘ಕಮಲ’ದ ನಡುವೆ ನೇರ ಹಣಾಹಣಿ ಇದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್‌ನದು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಹ ಪರಿಸ್ಥಿತಿ. ಈ ಮಧ್ಯೆ, ಜಿಲ್ಲಾ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಲು ಆಮ್‌ ಆದ್ಮಿ ಪಾರ್ಟಿ ಮುಂದಾಗಿದೆ.

1. ಬೈಲಹೊಂಗಲ: ಬಿಜೆಪಿ ಟಿಕೆಟ್‌ಗೆ ಕಳೆದ ಬಾರಿಯ ಬಂಡಾಯ ಅಭ್ಯರ್ಥಿ ಯತ್ನ

ಕಾಂಗ್ರೆಸ್‌ನ ಹಾಲಿ ಶಾಸಕ ಮಹಾಂತೇಶ ಕೌಜಲಗಿ ಈ ಬಾರಿ ಮತ್ತೆ ರಾಜಕೀಯ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ ಮತ್ತು ಜಗದೀಶ ಮೆಟಗುಡ್‌ ಟಿಕೆಟ್‌ ಆಕಾಂಕ್ಷಿಗಳು. ವಿಶ್ವನಾಥ ಪಾಟೀಲ, 2013ರಲ್ಲಿ ಕೆಜೆಪಿಯಿಂದ ಶಾಸಕರಾಗಿದ್ದರೆ, 2008ರಲ್ಲಿ ಜಗದೀಶ ಮೆಟಗುಡ್‌ ಬಿಜೆಪಿಯಿಂದ ಶಾಸಕರಾಗಿದ್ದರು. ಕಳೆದ ಬಾರಿ ವಿಶ್ವನಾಥ ಪಾಟೀಲ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮೆಟಗುಡ್‌ ಸ್ಪರ್ಧಿಸಿದ್ದರು. ಇಬ್ಬರು ಸ್ಪರ್ಧೆ ಮಾಡಿದ್ದರಿಂದ ಬಿಜೆಪಿ ಸೋಲನ್ನು ಅನುಭವಿಸಿತು. ಈಗ ಜಗದೀಶ ಮೆಟಗುಡ್‌ ಅವರು ಬಿಜೆಪಿಯಲ್ಲಿದ್ದಾರೆ. ಜೆಡಿಎಸ್‌ನಿಂದ ಪಕ್ಷದ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಅವರ ಹೆಸರು ಕೇಳಿ ಬರುತ್ತಿದೆ. ಬಿ.ಎಂ.ಚಿಕ್ಕನಗೌಡರ ಅವರು ಆಮ್‌ ಆದ್ಮಿ ಪಾರ್ಟಿ ಟಿಕೆಟ್‌ನ ನಿರೀಕ್ಷೆಯಲ್ಲಿದ್ದಾರೆ.

Ground Report: ಬೆಳಗಾವಿಯಲ್ಲಿ ಹೇಗಿದೆ ಟಿಕೆಟ್‌ ಫೈಟ್‌?

2. ಖಾನಾಪುರ: ಬಿಜೆಪಿ ಟಿಕೆಟ್‌ಗೆ ಭಾರೀ ಡಿಮಾಂಡ್‌

ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಅಂಜಲಿ ಹೇಮಂತ ನಿಂಬಾಳಕರ ಹಾಲಿ ಶಾಸಕಿ. ಈ ಬಾರಿಯೂ ಮತ್ತೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಇವರನ್ನು ಬಿಟ್ಟರೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳಾರು ಇಲ್ಲ. ಆದರೆ, ಬಿಜೆಪಿಯಲ್ಲಿ ಮಾತ್ರ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಎಂಇಎಸ್‌ ತೊರೆದು ಬಿಜೆಪಿ ಸೇರಿದ ಮಾಜಿ ಶಾಸಕ ಅರವಿಂದ ಪಾಟೀಲ, ಡಾ.ಸೋನಾಲಿ ಸರ್ಬೋಬಾತ್‌, ವಿಠ್ಠಲರಾವ್‌ ಹಲಗೇಕರ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದಲೂ ಹಲವರು ಸ್ಪರ್ಧೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಕ್ಷೇತ್ರದಲ್ಲಿ ಮರಾಠಿ ಮತಗಳೇ ನಿರ್ಣಾಯಕ. ಇಲ್ಲಿ ಕಾಂಗ್ರೆಸ್‌, ಬಿಜೆಪಿ, ಎಂಇಎಸ್‌ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆಗಳಿವೆ.

3. ಚಿಕ್ಕೋಡಿ-ಸದಲಗಾ: ಅಮಿತ ಕೋರೆಗೆ ಬಿಜೆಪಿ ಟಿಕೆಟ್‌ ಕೊಡುತ್ತಾ?

ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ತಮ್ಮದೇ ಆದ ಮತಬ್ಯಾಂಕ್‌ ಹೊಂದಿರುವ ವಿಧಾನ ಪರಿಷತ್‌ ಸದಸ್ಯ, ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ಮತ್ತೆ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಯಲಿದ್ದಾರೆ. ಇವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಹುಡುಕಾಟ ನಡೆಸುತ್ತಿದೆ. ಜಗದೀಶ ಕವಟಗಿಮಠ ಇಲ್ಲವೇ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಪುತ್ರ ಅಮಿತ ಕೋರೆ ಅವರನ್ನು ಕಣಕ್ಕಿಳಿಸಿ, ಗಣೇಶ ಹುಕ್ಕೇರಿಯವರನ್ನು ಸೋಲಿಸುವ ಲೆಕ್ಕಾಚಾರ ಬಿಜೆಪಿಯದು. ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಕಾಂಗ್ರೆಸ್‌ ವಶದಲ್ಲಿರುವ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಜೆಡಿಎಸ್‌ನಿಂದ ಯಾರ ಹೆಸರೂ ಅಷ್ಟಾಗಿ ಕೇಳಿ ಬರುತ್ತಿಲ್ಲ.

4. ಅಥಣಿ: ಕುಮಟಳ್ಳಿಗೆ ಟಕ್ಕರ್‌ ಕೊಡಲು ಸತೀಶ ಜಾರಕಿಹೊಳಿ ಪ್ಲ್ಯಾನ್‌

ಅಥಣಿ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಈಗ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಹಾಗಾಗಿ, ಹಾಲಿ ಬಿಜೆಪಿ ಶಾಸಕ ಮಹೇಶ ಕುಮಟಳ್ಳಿ ಅವರೇ ಈ ಬಾರಿಯೂ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕುಮಟಳ್ಳಿ ಅವರು, ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಲಕ್ಷ್ಮಣ ಸವದಿ ವಿರುದ್ಧ ಗೆಲುವು ಸಾಧಿಸಿದ್ದರು. ಬಳಿಕ, ಕಾಂಗ್ರೆಸ್‌ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿ, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಇನ್ನು, ಹಣಬಲದ ಜೊತೆಗೆ ಉತ್ತಮ ಸಂಪರ್ಕ ಹೊಂದಿರುವ ಎಸ್‌.ಕೆ.ಬುಟಾಳಿ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಯೋಜನೆ ರೂಪಿಸಿದ್ದಾರೆ. ಆ ಮೂಲಕ, ಕುಮಟಳ್ಳಿಗೆ ಟಕ್ಕರ್‌ ಕೊಡುವುದು ಸತೀಶ ಜಾರಕಿಹೊಳಿಯವರ ಪ್ಲ್ಯಾನ್‌. ಅಲ್ಲದೆ, ಪೊಲೀಸ್‌ ಅಧಿಕಾರಿಯಾಗಿರುವ ಬಸವರಾಜ ಬೀಸನಕೊಪ್ಪ ಮತ್ತು ಗಜಾನನ ಮಂಗಸೂಳಿ ಅವರು ಕೂಡ ಕಾಂಗ್ರೆಸ್‌ ಟಿಕೆಟ್‌ಗೆ ಕಸರತ್ತು ನಡೆಸುತ್ತಿದ್ದಾರೆ.

Ticket Fight: ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ಇಲ್ಲಿ ಬಂಡವಾಳ!

5. ಹುಕ್ಕೇರಿ: ದಿ.ಉಮೇಶ ಕತ್ತಿ ಸಹೋದರಗೆ ಬಿಜೆಪಿ ಟಿಕೆಟ್‌ ಸಿಗುತ್ತಾ?

ದಿ.ಉಮೇಶ ಕತ್ತಿ ಅವರ ಅಕಾಲಿಕ ನಿಧನದಿಂದ ಹುಕ್ಕೇರಿ ವಿಧಾನಸಭೆ ಕ್ಷೇತ್ರ ಈಗ ತೆರವುಗೊಂಡಿದೆ. ಹೀಗಾಗಿ, ಉಮೇಶ ಕತ್ತಿಯವರ ಜಾಗಕ್ಕೆ ಯಾರು ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಕತ್ತಿ ಸಹೋದರರು ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸನ್ನು ಹೊಂದಿದ್ದಾರೆ. ಉಮೇಶ ಕತ್ತಿ ಅವರ ಸಹೋದರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಇಲ್ಲವೇ ಅವರ ಪುತ್ರ ಪೃಥ್ವಿ ಕತ್ತಿ ಅವರಿಗೆ ಬಿಜೆಪಿಯ ಟಿಕೆಟ್‌ ಸಿಗಬಹುದು ಎನ್ನಲಾಗುತ್ತಿದೆ. ಜೊತೆಗೆ, ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಂದ್ರ ನೇರ್ಲಿ, ಮಾಜಿ ಸಚಿವ ಶಶಿಕಾಂತ ನಾಯಿಕ ಕೂಡ ಇಲ್ಲಿ ಬಿಜೆಪಿ ಟಿಕೆಟ್‌ಗೆ ಆಕಾಂಕ್ಷಿಗಳು. ಅಂತಿಮವಾಗಿ ಯಾರಿಗೆ ಬಿಜೆಪಿಯ ‘ಬಿ’ ಫಾಮ್‌ರ್‍ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಎ.ಬಿ.ಪಾಟೀಲ ಅವರು ಸ್ಪರ್ಧಿಸಬಹುದು. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಜೆಡಿಎಸ್‌ಗೆ ಹೇಳಿಕೊಳ್ಳುವಂತಹ ನೆಲೆಯೂ ಇಲ್ಲ, ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರ ಹೆಸರೂ ಅಷ್ಟಾಗಿ ಕೇಳಿ ಬರುತ್ತಿಲ್ಲ.

6. ನಿಪ್ಪಾಣಿ: ಮೂರನೇ ಬಾರಿಗೆ ಕಣಕ್ಕಿಳಿಯಲು ಸಚಿವೆ ಜೊಲ್ಲೆ ಸಿದ್ಧತೆ

ಮುಜರಾಯಿ, ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಈ ಕ್ಷೇತ್ರದ ಬಿಜೆಪಿ ಹಾಲಿ ಶಾಸಕಿ. ಈ ಕ್ಷೇತ್ರದಿಂದ ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ. ಇದೀಗ ಮೂರನೇ ಬಾರಿ, ಬಿಜೆಪಿಯಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಜೊಲ್ಲೆ ಅವರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ಯೋಜಿಸುತ್ತಿದೆ. ಜಾರಕಿಹೊಳಿ ಸಹೋದರರ ಆಪ್ತ ಬೋರಗಾಂವ ಗ್ರಾಮದ ಉತ್ತಮ ಪಾಟೀಲ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಯೋಜಿಸಿದೆ. ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಉತ್ತಮಗೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯನ್ನೂ ನೀಡಿದೆ. ಜೊತೆಗೆ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಕೂಡ ಕಾಂಗ್ರೆಸ್‌ ಟಿಕೆಟ್‌ಗೆ ಕಸರತ್ತು ನಡೆಸುತ್ತಿದ್ದಾರೆ.

7. ರಾಯಬಾಗ: ದುಯೋಧನನ ವಿರುದ್ಧ ಕಣಕ್ಕಿಳಿಯಲು ಮಹಾವೀರ ಕಸರತ್ತು:

ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ರಾಯಬಾಗದಲ್ಲಿ ದುರ್ಯೋಧನ ಐಹೊಳೆ, ಬಿಜೆಪಿಯ ಹಾಲಿ ಶಾಸಕ. ಸತತವಾಗಿ ಮೂರು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಬಾರಿ ಮತ್ತೆ ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದಾರೆ. ಇನ್ನು, ಐಹೊಳೆ ಅವರ ಗೆಲುವಿಗೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್‌ನಿಂದ ಮಹಾವೀರ ಮೋಹಿತೆ, ಜಿ.ಪಂ. ಮಾಜಿ ಅಧ್ಯಕ್ಷೆ ಶಾಂತಾ ಕಲ್ಲೋಳಿಕರ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮಹಾವೀರ ಮೋಹಿತೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದರಿಂದಾಗಿ ಮತಗಳ ವಿಭಜನೆಯಾಗಿ, ಬಿಜೆಪಿ ಇಲ್ಲಿ ಸುಲಭವಾಗಿ ಗೆಲುವು ಸಾಧಿಸಿತ್ತು.

8. ಕುಡಚಿ: ಕಾಂಗ್ರೆಸ್‌ ಟಿಕೆಟ್‌ಗೆ ತಂದೆ-ಮಗನ ನಡುವೆ ಫೈಟ್‌:

ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಪಿ.ರಾಜೀವ ಅವರು ಬಿಜೆಪಿಯ ಹಾಲಿ ಶಾಸಕ. ಎರಡು ಬಾರಿ ಅವರು ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಒಂದು ಬಾರಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಈಗ ಮೂರನೇ ಬಾರಿಗೆ ಕಣಕ್ಕಿಳಿಯಲು ಬಿಜೆಪಿ ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಸ್‌.ಬಿ.ಘಾಟಗೆ ಇಲ್ಲವೇ ಅವರ ಪುತ್ರ ಅಮಿತ ಘಾಟಗೆ ಸ್ಪರ್ಧಿಸಬಹುದು. ಜೊತೆಗೆ, ಹಾರೂಗೇರಿಯ ಮಹೇಶ ತಮ್ಮನ್ನವರ ಅವರ ಹೆಸರು ಕೂಡ ಕಾಂಗ್ರೆಸ್‌ನಿಂದ ಕೇಳಿ ಬರುತ್ತಿದೆ. ಇಲ್ಲಿಯೂ ಜೆಡಿಎಸ್‌ಗೆ ನೆಲೆ ಇಲ್ಲ.

Ticket Fight: ಸಿಂಧನೂರಿನಲ್ಲೂ ಗಣಿ ರೆಡ್ಡಿ ಸ್ಪರ್ಧೆ ವದಂತಿ: ಕಾಂಗ್ರೆಸ್‌-ಬಿಜೆಪಿ ಟಿಕೆಟ್‌ಗೆ ತೀವ್ರ ಕದನ

9. ಕಾಗವಾಡ: ಶ್ರೀಮಂತ ಪಾಟೀಲಗೆ ಬಿಜೆಪಿ ಟಿಕೆಟ್‌ ಬಹುತೇಕ ಪಕ್ಕಾ?

ಮಾಜಿ ಸಚಿವ ಶ್ರೀಮಂತ ಪಾಟೀಲ ಕಾಗವಾಡ ಅವರು ಕ್ಷೇತ್ರದ ಹಾಲಿ ಶಾಸಕ. ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಶ್ರೀಮಂತ ಪಾಟೀಲ, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಈ ಬಾರಿಯೂ ಅವರು ಬಿಜೆಪಿಯಿಂದ ಕಣಕ್ಕಿಳಿಯುವುದು ಬಹುತೇಕ ಪಕ್ಕಾ. ಕಾಗವಾಡ ಕ್ಷೇತ್ರದಲ್ಲಿ ತಮ್ಮದೇ ಆದ ಜನಬಲ ಹೊಂದಿರುವ ಶ್ರೀಮಂತ ಪಾಟೀಲ ಅವರು, ಸಕ್ಕರೆ ಉದ್ಯಮಿಯೂ ಹೌದು. ಇನ್ನು, ಕಾಂಗ್ರೆಸ್‌ನಿಂದ ಮಾಜಿ ಶಾಸಕ ರಾಜು ಕಾಗೆಯವರು ಕಣಕ್ಕಿಳಿಯುವುದು ಬಹುತೇಕ ಪಕ್ಕಾ. ಜೊತೆಗೆ, ಅಂಕಲಿಯ ವೈದ್ಯ ಡಾ.ಎನ್‌.ಎ.ಮಗದುಮ್ಮ ಅವರು ಕೂಡ ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.

ಜಿಲ್ಲೆ: ಬೆಳಗಾವಿ (ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು)

ಕ್ಷೇತ್ರಗಳ ಬಲಾಬಲ:

  • ಒಟ್ಟೂಕ್ಷೇತ್ರ: 9
  • ಬಿಜೆಪಿ: 6
  • ಕಾಂಗ್ರೆಸ್‌ 3