ಅಭಿವೃದ್ಧಿಯಲ್ಲಿ ಹಿಂದೆ, ರಾಜಕೀಯದಲ್ಲಿ ಮುಂದಿರುವ ರಾಯಚೂರು ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದರೂ ಕಳೆದ ಕೆಲ ವರ್ಷಗಳಿಂದ ಬಿಜೆಪಿ-ಜೆಡಿಎಸ್‌ ತನ್ನ ಪ್ರಾಬಲ್ಯ ವೃದ್ಧಿಸಿಕೊಂಡು ಬಂದಿದೆ. 

ರಾಮಕೃಷ್ಣ ದಾಸರಿ

ರಾಯಚೂರು (ಡಿ.18): ಅಭಿವೃದ್ಧಿಯಲ್ಲಿ ಹಿಂದೆ, ರಾಜಕೀಯದಲ್ಲಿ ಮುಂದಿರುವ ರಾಯಚೂರು ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದರೂ ಕಳೆದ ಕೆಲ ವರ್ಷಗಳಿಂದ ಬಿಜೆಪಿ-ಜೆಡಿಎಸ್‌ ತನ್ನ ಪ್ರಾಬಲ್ಯ ವೃದ್ಧಿಸಿಕೊಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ ಮತ್ತು ಮಸ್ಕಿ ಕ್ಷೇತ್ರಗಳು ಪರಿಶಿಷ್ಟಪಂಗಡಕ್ಕೆ ಹಾಗೂ ಲಿಂಗಸುಗೂರು ಪರಿಶಿಷ್ಟಜಾತಿ, ರಾಯಚೂರು ನಗರ ಮತ್ತು ಸಿಂಧನೂರು ಸಾಮಾನ್ಯ ವರ್ಗಕ್ಕೆ ಮೀಸಲಾದ ಕ್ಷೇತ್ರಗಳಾಗಿವೆ. ಜಿಲ್ಲೆಯಲ್ಲಿ ಸುಮಾರು 31 ಲಕ್ಷ ಮತದಾರರಿದ್ದಾರೆ. 2018ರ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಮೂರು ಕಾಂಗ್ರೆಸ್‌, ತಲಾ ಎರಡು ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳು ಗೆದ್ದು ಶಾಸಕರಾಗಿದ್ದಾರೆ.

1.ರಾಯಚೂರು ಗ್ರಾಮೀಣ: ಕಾಂಗ್ರೆಸ್‌-ಬಿಜೆಪಿ ನಡುವೆ ಫೈಟ್‌
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಸನಗೌಡ ದದ್ದಲ್‌ ಹಾಲಿ ಶಾಸಕರು. ದದ್ದಲ್‌ ಈ ಬಾರಿಯೂ ಪಕ್ಷದ ಟಿಕೆಟ್‌ ಆಕಾಂಕ್ಷಿ. ಆದರೆ ಚಂದ್ರಶೇಖರ ನಾಯಕ ಇಡಪನೂರು, ಮಾಜಿ ಸಂಸದ, ಡಿಸಿಸಿ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಅವರು ಪಕ್ಷದಲ್ಲಿ ಟಿಕೆಟ್‌ಗಾಗಿ ಸ್ಪರ್ಧೆಗಿಳಿದಿದ್ದಾರೆ. ಈ ಸಂಬಂಧ ಈಗಾಗಲೇ ಕೆಪಿಸಿಸಿಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಅವರು ಮತ್ತೆ ಬಿಜೆಪಿಯಿಂದ ಕಣಕ್ಕಿಳಿಯುವುದು ಖಚಿತವಾದಂತಿದೆ. ಈಗಾಗಲೇ ಕ್ಷೇತ್ರಾದ್ಯಂತ ಸಂಚರಿಸಿ ಅವರು ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ಸಣ್ಣ ನರಸಿಂಹ ನಾಯಕ ಜೆಡಿಎಸ್‌ನಿಂದ ಕಣಕ್ಕಿಳಿಯುವುದು ಖಾತ್ರಿ.

Ticket Fight: ಹಾಲಿಗಳಿಗೆ ವಯೋಮಿತಿ, ಹೊಸ ಮುಖ ಅಡ್ಡಿ

2.ರಾಯಚೂರು ನಗರ: ಕಾಂಗ್ರೆಸ್ಸಲ್ಲಿ ಹೆಚ್ಚಿದ ಮುಸ್ಲಿಮರ ಒತ್ತಡ
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಶಿವರಾಜ ಪಾಟೀಲ್‌ ಗೆದ್ದಿದ್ದಾರೆ. ಈ ಬಾರಿಯೂ ಸ್ಪರ್ಧಿಸಲು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿಯಿದ್ದು, ಇದು ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಮುಸ್ಲಿಂ ಸಮಾಜದವರಿಗೇ ಟಿಕೆಟ್‌ ನೀಡಬೇಕೆನ್ನುವ ಒತ್ತಾಯ ಹೆಚ್ಚಾಗಿದೆ. ಒಟ್ಟು 17 ಮಂದಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 13 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬುದು ವಿಶೇಷ. ಪಕ್ಷದ ಹಿರಿಯ ಮುಖಂಡರೂ ಆದ ಮಾಜಿ ಶಾಸಕ ಸೈಯದ್‌ ಯಾಸೀನ್‌, ಎನ್‌.ಎಸ್‌.ಬೋಸರಾಜು, ರವಿ ಬೋಸರಾಜು, ಬಷಿರುದ್ದೀನ್‌, ಸಾಜಿದ್‌ ಸಮೀರ್‌, ಅಸ್ಲಾಂ ಪಾಷಾ, ಡಾ.ರಜಾಕ್‌ ಉಸ್ತಾದ್‌, ಯಂಕಣ್ಣ ಯಾದವ್‌, ಬಸವರಾಜ ಪಾಟೀಲ್‌ ಇಟಗಿ, ಸೈಯದ್‌ ಶೋಯಲ್‌, ಎಂ.ಕೆ.ಬಾಬರ್‌, ಎಂ.ಡಿ.ಅಮ್ಜದ್‌ ಸೇಠ್‌, ಮುಜುಬುದ್ದೀನ್‌, ಎಂ.ಡಿ.ಶಾಲಂ ಅವರು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದವರು. ಕಾಂಗ್ರೆಸ್‌ ನಡೆ ನೋಡಿಕೊಂಡು ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ. ನಗರÜಸಭೆ ಮಾಜಿ ಅಧ್ಯಕ್ಷ ಇ.ವಿನಯ್‌ ಕುಮಾರ್‌ ಹೆಸರು ಸದ್ಯ ಕೇಳಿಬರುತ್ತಿದೆ.

3.ದೇವದುರ್ಗ: ಮೂರೂ ಪಕ್ಷಗಳ ‘ನಾಯಕರ’ ನಡುವೆ ಕಾದಾಟ
ಜಿಲ್ಲೆಯಲ್ಲೇ ಕುಟುಂಬ ರಾಜಕಾರಣಕ್ಕೆ ಪ್ರಸಿದ್ಧಿ ಪಡೆದಿರುವ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ರಾಜಕೀಯ ಪಕ್ಷಗಳು ಒಂದೇ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಿದ್ದವು. ಬಿಜೆಪಿಯ ಕೆ.ಶಿವನಗೌಡ ನಾಯಕ ಎದುರು ಕಾಂಗ್ರೆಸ್‌ನಿಂದ ಎ.ರಾಜಶೇಖರ ನಾಯಕ, ಜೆಡಿಎಸ್‌ನಿಂದ ದಿ.ವೆಂಕಟೇಶ ಪೂಜಾರಿ ಸ್ಪರ್ಧಿಸಿ ಸೋತಿದ್ದರು. ಬಿಜೆಪಿಯಲ್ಲಿ ಈ ಬಾರಿಯೂ ಕೆ.ಶಿವನಗೌಡ ನಾಯಕ ಅವರೇ ಕಣಕ್ಕಿಳಿಯುವುದು ಖಚಿತವಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ಸಿಗದೆ ಪಕ್ಷೇತರೆಯಾಗಿ ಸ್ಪರ್ಧಿಸಿದ್ದ ಕರೆಮ್ಮ ಜಿ.ನಾಯಕ ನಿರೀಕ್ಷೆಗೂ ಮೀರಿ ಮತಗಳನ್ನು ಪಡೆದಿದ್ದರು. ಈ ಬಾರಿ ಅವರಿಗೆ ಜೆಡಿಎಸ್‌ ಟಿಕೆಟ್‌ ಪಕ್ಕಾ ಆಗಿದ್ದು, ಈಗಾಗಲೇ ಪಕ್ಷ ಸಂಘಟನೆಯಲ್ಲೂ ತೊಡಗಿದ್ದಾರೆ. ಕಾಂಗ್ರೆಸ್‌ನಲ್ಲಿ ಮಾಜಿ ಸಂಸದ ದಿ.ವೆಂಕಟೇಶ ನಾಯಕ ಅವರ ಪುತ್ರ ಬಿ.ವಿ.ನಾಯಕ, ಎ.ರಾಜಶೇಖರ ನಾಯಕ ಮತ್ತು ಇವರ ಪತ್ನಿ ಶ್ರೀದೇವಿ ರಾಜಶೇಖರ ನಾಯಕ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

4.ಮಾನ್ವಿ: ಜೆಡಿಎಸ್‌ ವಿರುದ್ಧ ಪ್ರಬಲರ ಕೊರತೆ
ಪರಿಶಿಷ್ಟಪಂಗಡಕ್ಕೆ ಮೀಸಲಾಗಿರುವ ಮಾನ್ವಿ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರೇ ಈ ಬಾರಿ ಜೆಡಿಎಸ್‌ ಅಭ್ಯರ್ಥಿ. ವೆಂಕಟಪ್ಪ ನಾಯಕ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಾಂಗ್ರೆಸ್‌-ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಮಾಜಿ ಶಾಸಕ, ಕಾಂಗ್ರೆಸ್‌ ಹಿರಿಯ ಮುಖಂಡ ಜಿ.ಹಂಪಯ್ಯ ನಾಯಕ ಅವರಿಗೆ ವಯಸ್ಸಾಗಿದೆ. ಹೀಗಾಗಿ ಮತ್ತೊಂದು ಬಾರಿ ಸ್ಪರ್ಧೆಗೆ ಅವರು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಮಾಜಿ ಸಂಸದ ಬಿ.ವಿ.ನಾಯಕ, ಶರಣಯ್ಯ ಗುಡದಿನ್ನಿ, ಈ ಭಾಗದ ಪ್ರಭಾವಿ ಮುಖಂಡ ಎಂ.ಈರಣ್ಣ ಅವರ ಸೊಸೆ ಡಾ.ತನುಶ್ರೀ ಅವರು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಬಿಜೆಪಿಯಿಂದ ಕೆ.ಶಿವನಗೌಡ ನಾಯಕ ಅವರ ಕುಟುಂಬ ಸದಸ್ಯರ ಜೊತೆಗೆ ಗಂಗಾಧರ ನಾಯಕ, ಮಾನಪ್ಪ ನಾಯಕ ಸೇರಿ ಹಲವರು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

5.ಲಿಂಗಸುಗೂರು: ಕೈ ಟಿಕೆಟ್‌ ಗೊಂದಲ, ತ್ರಿಕೋನ ಸ್ಪರ್ಧೆ ಸಂಭವ
ರಾಜಕೀಯ ಮುಖಂಡರನ್ನು ರೂಪಿಸುವ ಕಾರ್ಖಾನೆ ಎಂದೇ ಖ್ಯಾತಿ ಪಡೆದಿರುವ ಲಿಂಗಸುಗೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟಜಾತಿಗೆ ಮೀಸಲಿದೆ. ಕ್ಷೇತ್ರದಿಂದ ಇಲ್ಲಿವರೆಗೆ ಶಾಸಕರಾದವರು ವಲಸಿಗರು ಹಾಗೂ ಭೋವಿ ಸಮಾಜದವರು. ಈ ಬಾರಿ ಸ್ಥಳೀಯರಿಗೆ ಅದರಲ್ಲೂ ಎಸ್ಸಿ ಸಮುದಾಯದ ದಲಿತರಿಗೆ ಟಿಕೆಟ್‌ ನೀಡಬೇಕು ಎನ್ನುವ ಕೂಗು ಕ್ಷೇತ್ರದಲ್ಲಿ ಎದ್ದಿದ್ದು, ಇದನ್ನೇ ಮುಂದಿಟ್ಟುಕೊಂಡು ಹಾಲಿ ಶಾಸಕ, ಕಾಂಗ್ರೆಸ್‌ನ ಡಿ.ಎಸ್‌. ಹುಲಗೇರಿ ಅವರಿಗೆ ಟಿಕೆಟ್‌ ತಪ್ಪಿಸುವ ಪ್ರಯತ್ನಗಳನ್ನು ಪಕ್ಷದ ನಾಯಕರೇ ಮಾಡುತ್ತಿದ್ದಾರೆ. ಇದರಿಂದ ಮತ್ತೊಂದು ಅವಧಿಗೆ ಹುಲಗೇರಿ ಅವರ ಸ್ಪರ್ಧಾಕಾಂಕ್ಷೆ ಇನ್ನೂ ತೂಗುಯ್ಯಾಲೆಯಲ್ಲಿದೆ. ಕಾಂಗ್ರೆಸ್‌ನಲ್ಲಿ ಹುಲಗೇರಿ ಮಾತ್ರವಲ್ಲದೆ, ಆರ್‌.ರುದ್ರಯ್ಯ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಮೂರಾರಿ ಸಹೋದರರು ಸೇರಿ ಹಲವು ಆಕಾಂಕ್ಷಿಗಳು ಇದ್ದಾರೆ. ಬಿಜೆಪಿಯಲ್ಲಿ ಮಾನಪ್ಪ ವಜ್ಜಲ್‌, ಜೆಡಿಎಸ್‌ನಿಂದ ಸಿದ್ದು ಬಂಡಿ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ.

6.ಸಿಂಧನೂರು: ಗಣಿ ರೆಡ್ಡಿ ಹೆಸರು ಇಲ್ಲೂ ಚರ್ಚೆ
ಸಾಮಾನ್ಯ ವರ್ಗಕ್ಕೆ ಮೀಸಲಿರುವ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಹಾಲಿ ಶಾಸಕ ವೆಂಕಟರಾವ್‌ ನಾಡಗೌಡ ಅವರೇ ಈ ಬಾರಿಯೂ ಪಕ್ಷದ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ಮತ್ತೆ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದು, ಅವರ ಮೊಮ್ಮಗ ಬಸನಗೌಡ ಬಾದರ್ಲಿ ಹಾಗೂ ಕುರುಬ ಸಮಾಜದ ಹಿರಿಯ ಮುಖಂಡ ಕೆ.ಕರಿಯಪ್ಪ ಅವರೂ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಬಿಜೆಪಿ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಕಳೆದ ಎರಡೂ ಚುನಾವಣೆಗಳಲ್ಲಿ ಸೋತಿರುವ ಕೊಲ್ಲ ಶೇಷಗಿರಿರಾವ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದರೂ, ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ಟಿಕೆಟ್‌ ನೀಡುವುದು ಅನುಮಾನ. ಬಳ್ಳಾರಿಯ ಗಾಲಿ ಜನಾರ್ಧನರೆಡ್ಡಿ ಈ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಚರ್ಚೆ ಹಲವು ಸಮಯದಿಂದ ನಡೆಯುತ್ತಿದೆ.

Ticket Fight: ಹಾಸನದಲ್ಲಿ ಪ್ರೀತಂಗೌಡ VS ಭವಾನಿ ರೇವಣ್ಣ?

7.ಮಸ್ಕಿ: ಬಿಜೆಪಿಗೆ ಉಪಚುನಾವಣೆ ಸೋಲಿನ ಸೇಡು
ಪರಿಶಿಷ್ಟಪಂಗಡಕ್ಕೆ ಮೀಸಲಿರುವ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಪ್ರತಾಪ್‌ಗೌಡ ಪಾಟೀಲ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಕ್ಷೇತ್ರಕ್ಕೆ 2021ರಲ್ಲಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ್‌ ಅವರು ಕಾಂಗ್ರೆಸ್‌ನ ಆರ್‌.ಬಸನಗೌಡ ತುರ್ವಿಹಾಳ ವಿರುದ್ಧ ಸೋತಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಾಸಕ ಆರ್‌.ಬಸನಗೌಡ ತುರ್ವಿಹಾಳ ಅವರೇ ಸ್ಪರ್ಧಿಸುವುದು ಖಚಿತವಾಗಿದ್ದು, ಈಗಾಗಲೇ ಅಗತ್ಯ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಜೆಡಿಎಸ್‌ನಿಂದ ರಾಘವೇಂದ್ರ ನಾಯಕ ಟಿಕೆಟ್‌ಗಾಗಿ ಪ್ರಯತ್ನಿಸಿದ್ದಾರೆ. ಬಿಜೆಪಿಯಲ್ಲಿ ಪ್ರತಾಪಗೌಡ ಪಾಟೀಲ್‌ ಮತ್ತೊಮ್ಮೆ ಅದೃಷ್ಟಪರೀಕ್ಷೆಗಿಳಿಯುವ ಸಾಧ್ಯತೆಯಿದ್ದು, ಈ ಮೂಲಕ ಮತ್ತೆ ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲ್‌ ಹಾಗೂ ಬಸನಗೌಡ ತುರ್ವಿಹಾಳ ನಡುವಿನ ಕದನಕ್ಕೆ ಮತ್ತೆ ವೇದಿಕೆ ಸಿದ್ಧವಾಗುತ್ತಿದೆ.

ಕ್ಷೇತ್ರಗಳ ಬಲಾಬಲ
ಒಟ್ಟು ಕ್ಷೇತ್ರ: 7
ಕಾಂಗ್ರೆಸ್‌: 3
ಬಿಜೆಪಿ: 2
ಜೆಡಿಎಸ್‌: 2