ಬಂಡೀಪುರ ಸಂರಕ್ಷಿತ ಪ್ರದೇಶದಂಚಿನ ತಾಲೂಕಿನ ಕುರುಬರಹುಂಡಿ ಗ್ರಾಮದ ಬಳಿಯ ಜಮೀನಿನ ಬೆಳೆ ರಕ್ಷಣೆಗೆ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್‌ಗೆ ಸಲಗ ಬಲಿಯಾದ ಘಟನೆ ನಡೆದಿದೆ. 

ಗುಂಡ್ಲುಪೇಟೆ (ಜು.18): ಬಂಡೀಪುರ ಸಂರಕ್ಷಿತ ಪ್ರದೇಶದಂಚಿನ ತಾಲೂಕಿನ ಕುರುಬರಹುಂಡಿ ಗ್ರಾಮದ ಬಳಿಯ ಜಮೀನಿನ ಬೆಳೆ ರಕ್ಷಣೆಗೆ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್‌ಗೆ ಸಲಗ ಬಲಿಯಾದ ಘಟನೆ ನಡೆದಿದೆ. ಬಂಡೀಪುರ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಕುರುಬರಹುಂಡಿ ಗ್ರಾಮದ ರೈತ ಶಿವರಾಜಪ್ಪಗೆ ಸೇರಿದ ಸ.ಂ.154ರಲ್ಲಿ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್‌ಗೆ ಸಿಲುಕಿ 35ವರ್ಷದ ಗಂಡಾನೆ ಪ್ರಾಣ ಬಿಟ್ಟಿದೆ.

ವಿಷಯ ಅರಿತ ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ಕುಮಾರ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಇಲಾಖೆಯ ಸಿಎಫ್‌, ಎಸಿಎಫ್‌ಗೆ ವಿಷಯ ಮುಟ್ಟಿಸಿದ್ದಾರೆ. ಸತ್ತ ಗಂಡಾನೆಯ ಶವ ಪರೀಕ್ಷೆಯನ್ನು ಬಂಡೀಪುರ ಇಲಾಖೆಯ ಪಶು ವೈದ್ಯ ಡಾ.ಮಿರ್ಜಾ ವಾಸೀಂ ನಡೆಸಿದರು. ಬಳಿಕ ಇಲಾಖೆಯ ನಿಯಮದಂತೆ ಜಮೀನಿನ ಬಳಿಯೇ ಆನೆಯ ದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹೂತು ಹಾಕಿದ್ದಾರೆ.

ಡಬಲ್‌ ಗೇಮ್‌ ಆಡಿದವರನ್ನು ಹತ್ತಿರ ಇಟ್ಟುಕೊಳ್ಳಲ್ಲ: ಶಾಸಕ ದೇಶಪಾಂಡೆ

ಸಿಎಫ್‌ ಭೇಟಿ: ಬಂಡೀಪುರ ಸಂರಕ್ಷಿತ ಪ್ರದೇಶದಂಚಿನ ಗ್ರಾಮದ ಬಳಿ ಆನೆ ಸತ್ತ ವಿಷಯ ಅರಿತು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್‌, ಎಸಿಎಫ್‌ ಜೀ.ರವೀಂದ್ರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ರೈತ ಪರಾರಿ: ಗಂಡಾನೆ ಸತ್ತ ಜಮೀನಿನ ರೈತ ಶಿವರಾಜಪ್ಪನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಹಾಗೂ ಭಾರತೀಯ ವಿದ್ಯುತ್‌ ಕಾಯ್ದೆ 2003 ರೀತ್ಯಾ ಕ್ರಮ ಆಗಬೇಕಿರುವುದರಿಂದ ಪ್ರಕರಣವನ್ನು ಬೇಗೂರು ಪೊಲೀಸ್‌ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.

ಹುಲಿ ಸಂರಕ್ಷಣಾ ದಳದ ಪ್ಲಟೂನ್‌-1ರ ವಲಯ ಅರಣ್ಯಾಧಿಕಾರಿ ಎನ್‌.ಪಿ.ನವೀನ್‌ಕುಮಾರ್‌, ಬಂಡೀಪುರ ಪಶು ವೈದ್ಯ ಡಾ.ಮಿರ್ಜಾ ವಾಸೀಂ, ಉಪ ವಲಯ ಅರಣ್ಯಧಾರಿಗಳಾದ ಅಮರ ಕೆ.ಪಿ., ಶಿವಕುಮಾರ್‌ ಆರ್‌., ಭರತ್‌ ಜಿ.ಪಿ.,ಗಸ್ತು ವನಪಾಲಕರಾದ ಶ್ರೀಕಾಂತ್‌, ಲಿಂಗರಾಜು, ಪರಸಪ್ಪ ಎಚ್‌ ಮಾದರ್‌ ಇದ್ದರು.

ಸಿಎಫ್‌ ವಿರುದ್ಧ ರೈತರಿಂದ ಹಿಗ್ಗಾಮುಗ್ಗಿ ತರಾಟೆ: ವಿದ್ಯುತ್‌ಗೆ ಗಂಡಾನೆ ಬಲಿಯಾದ ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ. ಪಿ.ರಮೇಶ್‌ಕುಮಾರ್‌ರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಕುರುಬರಹುಂಡಿಯಲ್ಲಿ ನಡೆದಿದೆ. ಗ್ರಾಮದ ರೈತ ಶಿವರಾಜಪ್ಪ ಜಮೀನಿಗೆ ಕಾಡಾನೆ ಬರಲು ಕಂದಕ ಕುಸಿದಿದೆ. ಸೋಲಾರ್‌ ನಿರ್ವಹಣೆ ಇಲ್ಲದೆ ಸೊರಗಿದೆ. ಓಂಕಾರ ಅರಣ್ಯ ಇಲಾಖೆಗೆ ಅನುದಾನ ನೀಡಿಲ್ಲ ಹಾಗೂ ಆನೆ ಕಾವಲಿಗೆ ಜನರನ್ನು ನೇಮಿಸಿಕೊಳ್ಳಲು ಸೂಚನೆ ನೀಡದಿರುವುದೇ ಸಿಎಫ್‌ ಹೊಣೆ ಎಂದು ರೈತರು ಹಿಗ್ಗಾ ಮಗ್ಗಾ ತರಾಟೆಗೆ ತೆಗೆದುಕೊಂಡರು.

ರಾಜ್ಯದ ಅಭಿವೃದ್ಧಿಗೆ ಒಕ್ಕಲಿಗ ಸಮಾಜದ ಕೊಡುಗೆ ಅಪಾರ: ಎಚ್‌.ವಿಶ್ವನಾಥ್‌

ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಸರ್ಕಾರ ಕೋಟ್ಯಂತರ ರು. ಇಲಾಖೆಗೆ ನೀಡಿದ್ದರೂ ಇಲ್ಲಿನ ಅರಣ್ಯ ಸಂರಕ್ಷಣಾಧಿಕಾರಿ ಕೆಲಸಕ್ಕೆ ಬಾರದ ವಿಚಾರಕ್ಕೆ ಹಣ ವಿನಿಯೋಗಿಸಿದ್ದಾರೆ ಅಲ್ಲಿಯೂ ಅಕ್ರಮದ ವಾಸನೆ ಬಡಿದಿದೆ ಎಂದು ಆರೋಪಿಸಿದರು. ರೈತರ ಆಕ್ರೋಶದ ಮಾತಿಗೆ ಬಂಡೀಪುರ ಸಿಎಫ್‌ ಡಾ.ಪಿ.ರಮೇಶ್‌ ಕುಮಾರ್‌ ಪ್ರತಿಕ್ರಿಯಿಸಲು ಆಗದೆ ಪರಾರಿಯಾದರು ಹಾಗೂ ಆನೆ ಸಾವಿಗೆ ಸಿಎಫ್‌ ರಮೇಶ್‌ಕುಮಾರ್‌ ನೇರ ಹೊಣೆ ಎಂದು ಗ್ರಾಮದ ರೈತ ಮಾದಪ್ಪ ಕುರುಬರಹುಂಡಿ ಆರೋಪಿಸಿದರು.