Asianet Suvarna News Asianet Suvarna News

ಮಗಳನ್ನು ಗಂಡನಿಗೆ ಒಪ್ಪಿಸದೆ ಕೋರ್ಟ್‌ನಲ್ಲಿ ಪತ್ನಿಯ ಹೈಡ್ರಾಮಾ: ಯಾಕೆ ಗೊತ್ತಾ?

ನ್ಯಾಯಾಲಯಗಳ ಆದೇಶ ಧಿಕ್ಕರಿಸಿದ್ದಲ್ಲದೆ ಜಾಮೀನು ರಹಿತ ವಾರೆಂಟ್‌ ಜಾರಿಯಾದರೂ ಬೆಂಗಳೂರು ಹಾಗೂ ದೆಹಲಿ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದ ಮಹಿಳೆಯ ವಿರುದ್ಧ ಸಿವಿಲ್‌ ಮತ್ತು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಹೈಕೋರ್ಟ್‌ ಕಠಿಣ ಆದೇಶ ಹೊರಡಿಸಿದೆ. 

Wifes hydrama in high court without handing over daughter to husband gvd
Author
First Published Jun 9, 2023, 7:43 AM IST

ಬೆಂಗಳೂರು (ಜೂ.09): ನ್ಯಾಯಾಲಯಗಳ ಆದೇಶ ಧಿಕ್ಕರಿಸಿದ್ದಲ್ಲದೆ ಜಾಮೀನು ರಹಿತ ವಾರೆಂಟ್‌ ಜಾರಿಯಾದರೂ ಬೆಂಗಳೂರು ಹಾಗೂ ದೆಹಲಿ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದ ಮಹಿಳೆಯ ವಿರುದ್ಧ ಸಿವಿಲ್‌ ಮತ್ತು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಹೈಕೋರ್ಟ್‌ ಕಠಿಣ ಆದೇಶ ಹೊರಡಿಸಿದೆ. ಈ ಆದೇಶದ ನಂತರ ಪೊಲೀಸರ ಕಣ್ಗಾವಲಿನಲ್ಲಿ ಆಕೆ ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸಿದ್ದಾಳೆ. ಪತಿಯನ್ನು ಹೆಣ್ಣು ಮಗುವಿನ ಶಾಶ್ವತ ಪಾಲಕನಾಗಿ ನಿಯೋಜಿಸಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದ್ದವು. 

ಈ ಆದೇಶ ಪಾಲನೆ ಮಾಡದಿದ್ದಾಗ ಮಗುವನ್ನು ಪತಿಯ ಸುಪರ್ದಿಗೆ ನೀಡುವಂತೆ ಹಲವು ಬಾರಿ ಹೈಕೋರ್ಟ್‌ ಆದೇಶಿಸಿತ್ತು. ಅದನ್ನೂ ಬದಿಗೊತ್ತಿದ ಮಹಿಳೆ, ಮಗಳನ್ನು ಕರೆದೊಂಡು ನಾಪತ್ತೆಯಾಗಿದ್ದರು. ಇದರಿಂದ ಹೈಕೋರ್ಟ್‌ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದರೂ ವಿಚಾರಣೆಗೆ ಹಾಜರಾಗಲಿಲ್ಲ. ಬೆಂಗಳೂರು ಮತ್ತು ದೆಹಲಿ ಪೊಲೀಸರು ಸಾಕಷ್ಟು ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಸುಪ್ರಿಂಕೋರ್ಟ್‌ ಸೂಚನೆ ಮೇರೆಗೆ ಹೈಕೋರ್ಟ್‌ಗೆ ಹಾಜರಾದರು. ಆದರೂ ಪತಿಯ ಸುಪರ್ದಿಗೆ ಮಗಳನ್ನು ಒಪ್ಪಿಸಿಲ್ಲ.

ರಾಜ್ಯದ ಡ್ಯಾಂಗಳು ಖಾಲಿ: 10 ಜಲಾಶಯಗಳಲ್ಲಿ ನೀರು ಬರಿದು!

ಮಹಿಳೆಯ ಈ ನಡೆ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸಹಿಸಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ ಹೈಕೋರ್ಟ್‌, ನಗರ ಪೊಲೀಸ್‌ ಆಯುಕ್ತರು 24 ಗಂಟೆಯಲ್ಲಿ ಮಹಿಳೆಯು ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸುವುದನ್ನು ಖಾತರಿಪಡಿಸಬೇಕು. ಮಹಿಳೆ ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಪೊಲೀಸರು ಆಕೆ ಉದ್ಯೊಗ ನಿರ್ವಹಿಸುವ ಆಸ್ಪತ್ರೆಯನ್ನು ಸಂಪರ್ಕಿಸಿ ಮಗಳನ್ನು ಪತಿಯ ಸುಪರ್ದಿಗೆ ನೀಡುವವರೆಗೂ ವೇತನ ತಡೆಹಿಡಿಯಲು ಸೂಚಿಸಬೇಕು. ಹಾಗೆಯೇ, ಪತಿಯು ಪತ್ನಿ ಮೇಲೆ ಕ್ರಿಮಿನಲ್‌ ಮತ್ತು ಸಿವಿಲ್‌ ನ್ಯಾಯಾಂಗ ನಿಂದನೆ ಪ್ರಕರಣ ಹೂಡಬೇಕು ಎಂದು ಕಠಿಣ ಆದೇಶ ಹೊರಡಿಸಿತು.

ಈ ಆದೇಶ ಹೊರಬಿದ್ದ ಕೂಡಲೇ ಮಹಿಳೆ ಮತ್ತೆ ಮಗುವಿನೊಂದಿಗೆ ಪರಾರಿಯಾಗಬಹುದು ಎಂಬ ಆತಂಕದಿಂದ ಪೊಲೀಸರು ಆಕೆಗೆ ಕಾವಲು ನಿಂತು, ಹೈಕೋರ್ಟ್‌ ಆದೇಶದಂತೆ ಮಗುವನ್ನು ಪತಿಯ ವಶಕ್ಕೆ ನೀಡುವಂತೆ ಸೂಚಿಸಿದರು. ನ್ಯಾಯಾಲಯವೇ 24 ಗಂಟೆ ಸಮಯ ನೀಡಿರುವುರಿಂದ ಕೂಡಲೇ ಮಗಳನ್ನು ಪತಿಗೆ ಒಪ್ಪಿಸಲಾರೆ ಎಂದು ಮಹಿಳೆ ಪಟ್ಟುಹಿಡಿದರು. ಇದರಿಂದ ಪೊಲೀಸರು ಮಾತ್ರ ಆಕೆಯನ್ನು ಜೊತೆಗೇ ಇದ್ದರು. ಕೋರ್ಟ್‌ನಿಂದ ಹೊರಬಂದು ಕೆಲ ಹೊತ್ತು ಹೈಡ್ರಾಮಾ ನಡೆಸಿ ನಂತರ ಪೊಲೀಸರ ಕಣ್ಗಾವಲಿನಲ್ಲಿಯೇ ಮಹಿಳೆ ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸಿದರು.

ಪ್ರಕರಣವೇನು?: ಅರ್ಜಿದಾರ ಗಣೇಶ್‌ ಮತ್ತು ರೇಖಾ (ಇಬ್ಬರ ಹೆಸರು ಬದಲಿಸಲಾಗಿದೆ) 2011ರಂದು ಮದುವೆಯಾಗಿದ್ದರು. ದಂಪತಿಗೆ ಹೆಣ್ಣು ಮಗು ಜನಿಸಿತ್ತು. ನಂತರ ದಂಪತಿ ಸಂಬಂಧ ಹಳಸಿತ್ತು. ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಮಗು ಪತ್ನಿಯ ಸುಪರ್ದಿಯಲ್ಲಿತ್ತು. ಬಳಿಕ ತಮ್ಮನ್ನು ಮಗುವಿನ ಪಾಲಕನಾಗಿ ನಿಯೋಜಿಸುವಂತೆ ಕೋರಿ ಗಣೇಶ್‌ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ಪುರಸ್ಕರಿಸಿ, ಒಂದು ತಿಂಗಳಲ್ಲಿ ಪತಿಯ ಸುಪರ್ದಿಗೆ ನೀಡುವಂತೆ ಪತ್ನಿ ರೇಖಾಗೆ 2022ರ ಮಾ.3ರಂದು ಆದೇಶಿಸಿತ್ತು.

ಸೋಲಿಗೆ 3 ಕಾರಣ ಹುಡುಕಿದ ಬಿಜೆಪಿ: ಮತಪ್ರಮಾಣ ಕುಸಿದಿಲ್ಲವೆಂದ ಸಿ.ಟಿ.ರವಿ

ಈ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪುರಸ್ಕರಿಸಿದ್ದ ಹೈಕೋರ್ಟ್‌, 2022-23ನೇ ಶೈಕ್ಷಣಿಕ ಸಾಲಿನ ಅಂತಿಮ ಪರಿಕ್ಷೆಗಳು ಪೂರ್ಣಗೊಂಡ ಬಳಿಕ ಮಗುವನ್ನು ಪತಿಯ ಸುಪರ್ದಿಗೆ ನೀಡಬೇಕು ಎಂದು 2023ರಲ್ಲಿ ಆದೇಶಿಸಿತ್ತು. ಈ ಆದೇಶ ಪಾಲಿಸದ್ದಕ್ಕೆ ಪತಿ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

Follow Us:
Download App:
  • android
  • ios