ನಮ್ಮಲ್ಲಿ ನೈಸ್ ಆಸ್ತಿ ಇದ್ದರೆ ಇಡೀ ಕುಟುಂಬ ನಿವೃತ್ತಿ: ಎಚ್‌ಡಿಕೆ
ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲೂ ನೈಸ್ ಆಸ್ತಿ ಇಲ್ಲ. ಒಂದು ವೇಳೆ ಇದ್ದರೆ ನಮ್ಮ ಇಡೀ ಕುಟುಂಬ ರಾಜಕೀಯ ನಿವೃತ್ತಿ ಪಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರಿಗೆ ಸವಾಲು ಹಾಕಿದ್ದಾರೆ.
ಬೆಂಗಳೂರು (ಆ.19): ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲೂ ನೈಸ್ ಆಸ್ತಿ ಇಲ್ಲ. ಒಂದು ವೇಳೆ ಇದ್ದರೆ ನಮ್ಮ ಇಡೀ ಕುಟುಂಬ ರಾಜಕೀಯ ನಿವೃತ್ತಿ ಪಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರಿಗೆ ಸವಾಲು ಹಾಕಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೈಸ್ ವಿಚಾರ ಇಟ್ಟುಕೊಂಡು ಕುಮಾರಸ್ವಾಮಿ ವ್ಯವಹಾರ ಮಾಡುತ್ತಾರೆ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಕೆಂಡಾಮಂಡಲರಾಗಿ, ನೈಸ್ ಯೋಜನೆಗಳ ಅಕ್ರಮಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೇರ ಕಾರಣ. ಈ ವಿಷಯ ಇಡೀ ರಾಜ್ಯಕ್ಕೆ ಗೊತ್ತಿದೆ. ನೈಸ್ ಅಕ್ಕ-ಪಕ್ಕ ಜಮೀನುಗಳನ್ನು ಯಾರು ಕೊಳ್ಳೆ ಹೊಡೆದಿದ್ದಾರೆ ಎನ್ನುವುದೂ ಗೊತ್ತಿದೆ. ದೇವೇಗೌಡ ಅವರು ರಸ್ತೆ ಮಾಡಲು ಸಹಿ ಹಾಕಿದ್ದರು. ನೈಸ್ ಜತೆ ಶಾಮೀಲಾಗಿ ಜಮೀನು ಲೂಟಿ ಹೊಡಿಯಲಿ ಎಂದು ದೇವೇಗೌಡರು ಸಹಿ ಹಾಕಿದ್ದಾರಾ? ಒಂದು ಸಣ್ಣ ಸಾಕ್ಷಿ ಇದ್ದರೆ ತೋರಿಸಲಿ, ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ ಎಂದು ಕಿಡಿಕಾರಿದರು.
ಕಾಂಬೋಡಿಯಾ ಪ್ರವಾಸ ಮುಗಿಸಿ ಎಚ್‌ಡಿಕೆ ವಾಪಸ್: 'ಅಲ್ಲೇ ಇರಿ ವ್ಯವಸ್ಥೆ ಮಾಡ್ತೇವೆ' ಅಂದಿದ್ದ ಸಚಿವರ ವಿರುದ್ಧ ಕಿಡಿ
ಮೂಲ ಒಪ್ಪಂದ ತಿರುಚಿ ಚೌಕಟ್ಟಿನ ಒಪ್ಪಂದಕ್ಕೆ ಸಹಿ ಯಾರು ಹಾಕಿದ್ದು ಯಾರೆಂದು ಗೊತ್ತಿದೆಯಾ ಅವನಿಗೆ? ಆವತ್ತಿನ ನಗರಾಭಿವೃದ್ಧಿ ಸಚಿವರಾಗಿ ಇದ್ದಿದ್ದು ಯಾರು? ಇವರ ಅಣ್ಣನೇ ಅಲ್ವಾ? ಆತನೇ ತಾನೇ ಈ ಒಪ್ಪಂದಕ್ಕೆ ಸಹಿ ಹಾಕಿದ್ದು. ಲೂಟಿ ಹೊಡೆದ ಭೂಮಿಯನ್ನು ಯಾರ ಹೆಸರಿಗೆ ಮಾಡಲು ಹೊರಟಿದ್ದಾರೆ ಅವರು? ಎರಡು ಸಾವಿರ ಎಕರೆ ಭೂಮಿಯನ್ನು ಯಾರ ಹೆಸರಿಗೆ ಮಾಡಿಕೊಳ್ಳಲು ಹೊರಟಿದ್ದಾರೆ? ಅವರ ಕುಟುಂಬವೇ ನುಂಗಲು ಹೊರಟಿದೆ. ಇಂತಹವರು ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಣ ಇಲಾಖೆಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಸಭೆ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ರಾಜ್ಯವನ್ನು ಮಾರಾಟ ಮಾಡಲು ಹೊರಟ್ಟಿದ್ದಾರೆ. ಬಡಮಕ್ಕಳಿಗೆ ಶಿಕ್ಷಣ ಕೊಡಲು ಇವರಿಗೆ ಯೋಗ್ಯತೆ ಇಲ್ಲ. ನಮ್ಮ ರಾಜ್ಯದಲ್ಲಿಯೇ ಈಸ್ಟ್ ಇಂಡಿಯಾ ಕಂಪನಿಗಳಿವೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕಾ? ನನಗೆ ಜನ ವಿಶ್ರಾಂತಿ ಕೊಟ್ಟಿದ್ದಾರಂತೆ. ಇವರಿಗೂ ವಿಶ್ರಾಂತಿ ಕೊಡುವ ಕಾಲ ಹತ್ತಿರದಲ್ಲಿಯೇ ಇದೆ. ನನಗೆ ಬೆದರಿಕೆ ಹಾಕುವುದು ಬೇಡ. ಗುತ್ತಿಗೆದಾರರಿಗೆ ಬೆದರಿಕೆ ಹಾಕಿದಂತೆ ನನಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಏನ್ ‘ಸತ್ಯ ಹರಿಶ್ಚಂದ್ರನೇ’: ಸಚಿವ ದರ್ಶನಾಪುರ ವಾಗ್ದಾಳಿ