ಎಲ್ಲೆಲ್ಲಿ ಮೆಟ್ರೋ ಮಾರ್ಗ ವಿಸ್ತರಿಸಲು ಸಾಧ್ಯವೋ ಅಲ್ಲಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬೆಂಗಳೂರು (ಜೂ.07): ನಮ್ಮ ಮೆಟ್ರೋ ರೈಲು ಮಾರ್ಗದ ಹಂತ 3ಎ ಯೋಜನೆಯಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಮಾರ್ಗ ವಿಸ್ತರಿಸಲು ಸರ್ವೆ ನಡೆಯುತ್ತಿದೆ. ಎಲ್ಲೆಲ್ಲಿ ಮೆಟ್ರೋ ಮಾರ್ಗ ವಿಸ್ತರಿಸಲು ಸಾಧ್ಯವೋ ಅಲ್ಲಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಮಂಗಳವಾರ ಶಾಂತಿ ನಗರದಲ್ಲಿರುವ ಬಿಎಂಆರ್‌ಸಿಎಲ್‌ ಕೇಂದ್ರ ಕಚೇರಿಯಲ್ಲಿ ಮೆಟ್ರೋ ಅಧಿಕಾರಿಗಳ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೆಟ್ರೋ ಕಾರ್ಯಾಚರಣೆ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಡೆಯುತ್ತಿದೆ. ತಿಂಗಳಿಗೆ .48 ಕೋಟಿ ಸಂಗ್ರಹವಾಗುತ್ತಿದ್ದು, ಈ ಪೈಕಿ 42 ಕೋಟಿ ಮೆಟ್ರೋ ಕಾರ್ಯಾಚರಣೆಗೆ ವೆಚ್ಚವಾಗುತ್ತಿದೆ ಎಂದರು.

ಐಟಿ, ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸುವವರ ಪತ್ನಿಗೆ 2000 ರು. ಸಿಗಲ್ಲ: ಗೃಹಲಕ್ಷ್ಮಿ ಯೋಜನೆಯ ಮಾರ್ಗಸೂಚಿ ಪ್ರಕಟ

3ನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಲಾಗಿದೆ. ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ (32.15 ಕಿ.ಮೀ) ಮತ್ತು 2ನೇ ಕಾರಿಡಾರ್‌ನಲ್ಲಿ ಹೊಸಹಳ್ಳಿ- ಕಡಬಗೆರೆ(12.50 ಕಿ.ಮೀ) ವರೆಗೆ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಬಿಎಂಆರ್‌ಸಿಎಲ್‌ ಕೇವಲ ಪ್ರಯಾಣಿಕರಿಂದ ಮಾತ್ರ ಆದಾಯ ನಿರೀಕ್ಷೆ ಮಾಡದೆ, ಇತರೆ ಆದಾಯ ಮೂಲಗಳನ್ನು ಗುರುತಿಸಿ ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡಬೇಕು. ಮೆಟ್ರೋ ನಿಲ್ದಾಣ ಹೊರಗೆ ಮತ್ತು ಒಳಗೆ ಜಾಹೀರಾತು ಹಾಕಲು ಇರುವಂತೆ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದೇವೆ ಎಂದರು.

ಬೈಯಪ್ಪನಹಳ್ಳಿ-ಕೆ.ಆರ್‌.ಪುರಂ ಮೆಟ್ರೋ ಜುಲೈ ವೇಳೆಗೆ ವಾಣಿಜ್ಯ ಸಂಚಾರ ಆರಂಭಿಸಲಿದೆ. ಕೆಂಗೇರಿ-ಚಲ್ಲಘಟ್ಟಆಗಸ್ಟ್‌-ಸೆಪ್ಟೆಂಬರ್‌, ನಾಗಸಂದ್ರ-ಮಾದಾವರ ಸೆಪ್ಟೆಂಬರ್‌ ಅಕ್ಟೋಬರ್‌ನಲ್ಲಿ ಆಗಬಹುದು. ಹೊಸ ಮಾರ್ಗ ಆರ್‌.ವಿ.ರೋಡ್‌-ಬೊಮ್ಮಸಂದ್ರ ಅಕ್ಟೋಬರ್‌-ನವೆಂಬರ್‌ನಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಹಾಗೆಯೇ ಸೆಂಟ್ರಲ್‌ ಸಿಲ್‌್ಕಬೋರ್ಡ್‌- ಕೆ.ಆರ್‌.ಪುರಂ-ವಿಮಾನ ನಿಲ್ದಾಣಕ್ಕೆ ಮೆಟ್ರೋ ರೈಲು 2026 ಜೂನ್‌ನಲ್ಲಿ ಪ್ರಯಾಣಿಕರ ವಾಣಿಜ್ಯಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಾಡಿಗೆ ಮನೆಗಳಿಗೂ ಉಚಿತ ವಿದ್ಯುತ್‌: ಗೊಂದಲಕ್ಕೆ ತೆರೆ ಎಳೆದ ಸಿದ್ದು, ಇಂಧನ ಸಚಿವ ಜಾರ್ಜ್‌

ರಾತ್ರಿ ವೇಳೆ ಮೆಟ್ರೋ ಕಾಮಗಾರಿಗಳು ನಡೆಯುತ್ತಿವೆ. ಹಗಲಲ್ಲಿ ಸಿಮೆಂಟ್‌, ಸಾಮಗ್ರಿ ತಲುಪಿಸಲು ಆಗುತ್ತಿಲ್ಲ. ಈ ವಿಚಾರವಾಗಿ ಪೊಲೀಸ ಜತೆ ಸಭೆ ಮಾಡಬೇಕಿದ್ದು, ಈ ವಿಚಾರದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ.
-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ