ಬಾಡಿಗೆ ಮನೆಗಳಿಗೂ ಉಚಿತ ವಿದ್ಯುತ್: ಗೊಂದಲಕ್ಕೆ ತೆರೆ ಎಳೆದ ಸಿದ್ದು, ಇಂಧನ ಸಚಿವ ಜಾರ್ಜ್
ರಾಜ್ಯ ಸರ್ಕಾರ ಜು.1ರಿಂದ ಅನ್ವಯವಾಗುವಂತೆ ಜಾರಿಗೊಳಿಸಿರುವ 200 ಯುನಿಟ್‌ವರೆಗಿನ ಉಚಿತ ವಿದ್ಯುತ್ ಸೌಲಭ್ಯದ ‘ಗೃಹ ಜ್ಯೋತಿ’ ಗ್ಯಾರಂಟಿ ಯೋಜನೆಯು ಬಾಡಿಗೆ ಮನೆಯ ನಿವಾಸಿಗಳಿಗೂ ಅನ್ವಯಿಸುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಜೂ.07): ರಾಜ್ಯ ಸರ್ಕಾರ ಜು.1ರಿಂದ ಅನ್ವಯವಾಗುವಂತೆ ಜಾರಿಗೊಳಿಸಿರುವ 200 ಯುನಿಟ್‌ವರೆಗಿನ ಉಚಿತ ವಿದ್ಯುತ್ ಸೌಲಭ್ಯದ ‘ಗೃಹ ಜ್ಯೋತಿ’ ಗ್ಯಾರಂಟಿ ಯೋಜನೆಯು ಬಾಡಿಗೆ ಮನೆಯ ನಿವಾಸಿಗಳಿಗೂ ಅನ್ವಯಿಸುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಆದರೆ, ಬಾಡಿಗೆದಾರರು ಈ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಬಾಡಿಗೆ, ಭೋಗ್ಯ ಕರಾರು ಪತ್ರ ಸೇರಿದಂತೆ ಇತರೆ ಕೆಲ ದಾಖಲೆಗಳನ್ನು ಸಲ್ಲಿಸಬೇಕು. ಜೊತೆಗೆ ಬಾಡಿಗೆ ಮನೆಯ ಮಾಲಿಕ ತನ್ನ ಮಾಲಿಕತ್ವದಲ್ಲಿ ಎಷ್ಟುಮನೆಗಳಿವೆ, ಅವುಗಳಲ್ಲಿ ಎಷ್ಟುಮನೆಗಳನ್ನು ಬಾಡಿಗೆ, ಭೋಗ್ಯಕ್ಕೆ ನೀಡಲಾಗಿದೆ ಎಂಬುದನ್ನು ಘೋಷಿಸಬೇಕು ಮತ್ತು ಎಲ್ಲಾ ಮನೆಗಳಿಗೂ ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸಿರಬೇಕು. ಇವೆಲ್ಲವೂ ನಿಯಮಬದ್ಧವಾಗಿದ್ದರೆ ಮಾತ್ರ ಬಾಡಿಗೆದಾರನಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತದೆ ಎಂದು ಇಂಧನ ಇಲಾಖೆಯ ಅಧಿಕಾರಿಗಳು ವಿವರಿಸುತ್ತಾರೆ.
ವಿದ್ಯುತ್ ದುಂದು ವೆಚ್ಚಕ್ಕೆ ಬಿಜೆಪಿ ಪ್ರಚೋದನೆ: ಸಿಎಂ ಸಿದ್ದರಾಮಯ್ಯ ಕಿಡಿ
ಒಂದು ಕಟ್ಟಡಕ್ಕೆ ಒಂದೇ ಗೃಹ ಜ್ಯೋತಿ ಯೋಜನೆ ಎಂಬುದಾಗಿ ರಾಜ್ಯ ವಿದ್ಯುತ್ ನಿಗಮವು ಹೊರಡಿಸಿರುವ ಆದೇಶವು ಗೊಂದಲಕ್ಕೆ ಕಾರಣವಾಗಿತ್ತು. ಇದಕ್ಕೆ ಮಂಗಳವಾರ ನಗರದಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಹುತೇಕ ಬಾಡಿಗೆದಾರರು ಬಡವರಿದ್ದಾರೆ. ಹಾಗಾಗಿ ಅವರಿಗೂ ಗೃಹಜ್ಯೋತಿ ಸೌಲಭ್ಯ ದೊರೆಯಲಿದೆ. ವಾಣಿಜ್ಯ ಉದ್ದೇಶದ ಬಾಡಿಗೆ ಹೊರತುಪಡಿಸಿ ಉಳಿದೆಲ್ಲಾ ಬಾಡಿಗೆ ಮನೆಗಳಿಗೂ 200 ಯುನಿಟ್ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್‌ಕೂಡ ಸ್ಪಷ್ಟನೆ ನೀಡಿ, ಬಾಡಿಗೆದಾರರಿಗೆ ಈ ಸೌಲಭ್ಯ ಸಿಗಲು ಏನೇನು ನಿಬಂಧನೆಗಳಿವೆ ಎಂದು ವಿವರಿಸಿದರು. ಬಾಡಿಗೆ ಮನೆಯ ನಿವಾಸಿಗಳಿಗೂ ಗೃಹಜ್ಯೋತಿ ಯೋಜನೆ ಸಿಗಲಿದೆ. ಇದಕ್ಕೆ ಅವರು ಬಾಡಿಗೆ ಅಥವಾ ಭೋಗ್ಯದ ಕರಾರು ಪತ್ರವನ್ನು ತಾವು ಬಾಡಿಗೆಗೆ ಇರುವ ಮನೆಯ ವಿದ್ಯುತ್ ಮೀಟರ್‌ನ ಆರ್.ಆರ್.ನಂಬರ್ (ರೆವೆನ್ಯೂ ರಿಜಿಸ್ಟರ್ ನಂಬರ್) ಜತೆಗೆ ಸಲ್ಲಿಸಬೇಕು. ಜೊತೆಗೆ ಮನೆಯ ಮಾಲಿಕ ತಾನು ಎಷ್ಟುಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದೇನೆ ಎಂದು ಘೋಷಿಸಿಕೊಂಡು ಅವುಗಳಿಗೆ ಆಸ್ತಿ ತೆರಿಗೆ ಪಾವತಿಸಿರಬೇಕು ಎಂದು ವಿವರಿಸಿದರು.
ದಾಖಲೆಗಳಿಗೆ ನಿಗಮಗಳ ಅನುಮೋದನೆ ಬೇಕು: ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರೊಬ್ಬರು ಹೇಳುವ ಪ್ರಕಾರ, ಒಂದು ಮನೆಗೆ ಒಂದು ವಿದ್ಯುತ್ ಸೌಕರ್ಯ ಎಂಬರ್ಥದಲ್ಲಿ ಆದೇಶ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಅಸಲಿಗೆ, ಅದು ಒಂದು ಆರ್.ಆರ್. ಸಂಖ್ಯೆಗೆ ಎಂದಾಗಬೇಕು. ಗೃಹ ಜ್ಯೋತಿ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಬಾಡಿಗೆದಾರರು ಸೂಚಿಸಿರುವ ಎಲ್ಲ ದಾಖಲೆಗಳನ್ನು ಬೆಸ್ಕಾಂ, ಚೆಸ್ಕಾಂ, ಎಸ್ಕಾಂ ಸೇರಿದಂತೆ ಇನ್ನಿತರೆ ಅಧಿಕೃತ ವಿದ್ಯುತ್ ಸರಬರಾಜು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕು.
ಜನರ ಆಶೋತ್ತರಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ: ಸಿಎಂ ಸಿದ್ದರಾಮಯ್ಯ
ಬಾಡಿಗೆದಾರನಲ್ಲದೆ ಮನೆ ಮಾಲಿಕ ಸಹ ತಾನು ಹೊಂದಿರುವ ಮನೆಗಳ ಮಾಹಿತಿ ಹಾಗೂ ಬಾಡಿಗೆ ಮನೆಗಳ ಮಾಹಿತಿಯನ್ನು ವಿದ್ಯುತ್ ಸಂಪರ್ಕದ ಆರ್.ಆರ್. ನಂಬರ್ ಸಹಿತ ಎಸ್ಕಾಂಗಳ ವೆಬ್‌ಸೈಟ್‌ನಲ್ಲಿ ಬಾಂಡ್ ಪೇಪರ್‌ನಲ್ಲಿ ದೃಢೀಕರಿಸಿ ಸ್ವಯಂ ಘೋಷಣಾ ಪತ್ರವನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಿರಬೇಕು. ಈ ಎಲ್ಲಾ ಮಾಹಿತಿಗಳನ್ನು ಎಸ್ಕಾಂಗಳು ಪರಿಶೀಲಿಸಿ ಅನುಮೋದಿಸುತ್ತವೆ. ಹೀಗೆ ಪರಿಶೀಲನೆಗೆ ಒಳಗಾಗಿ ಅನುಮೋದನೆ ಪಡೆದ ನಂತರ ಆ ಮಾಹಿತಿಯನ್ನು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಬೇಕು ಎಂದು ಅವರು ವಿವರಿಸಿದರು.
ಪಡೆಯುವುದು ಹೇಗೆ?
- ಬಾಡಿಗೆ, ಭೋಗ್ಯದ ಕರಾರು, ಇತರೆ ದಾಖಲೆಗಳನ್ನು ಬಾಡಿಗೆದಾರ ಸಲ್ಲಿಕೆ ಮಾಡಬೇಕು
- ಬಾಡಿಗೆಗೆ ಇರುವ ಮನೆಯ ವಿದ್ಯುತ್ ಮೀಟರ್‌ನ ಆರ್‌ಆರ್ ನಂಬರ್ ಜತೆಗೆ ಸಲ್ಲಿಸಬೇಕು
- ಮನೆ ಮಾಲೀಕ ಕೂಡ ತಾನು ಎಷ್ಟುಮನೆ ಬಾಡಿಗೆ ಕೊಟ್ಟಿದ್ದೇನೆ ಎಂದು ಘೋಷಿಸಬೇಕು
- ಎಲ್ಲ ಮನೆಗಳಿಗೂ ಮಾಲೀಕ ಕಡ್ಡಾಯವಾಗಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಿರಬೇಕು
- ಇವೆಲ್ಲವೂ ನಿಯಮಬದ್ಧವಾಗಿದ್ದರೆ ಬಾಡಿಗೆದಾರನ ಮನೆಗೂ ಉಚಿತ ವಿದ್ಯುತ್ ಸೌಲಭ್ಯ