ರಾಜ್ಯ ಕಾಂಗ್ರೆಸ್‌ ಸರ್ಕಾರದ ಮತ್ತೊಂದು ಮಹತ್ವದ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೂ ಆಡಳಿತಾತ್ಮಕ ಅನುಮೋದನೆಯೊಂದಿಗೆ ಮಂಗಳವಾರ ಅಧಿಕೃತ ಆದೇಶ ಪ್ರಕಟವಾಗಿದೆ. 

ಬೆಂಗಳೂರು (ಜೂ.07): ರಾಜ್ಯ ಕಾಂಗ್ರೆಸ್‌ ಸರ್ಕಾರದ ಮತ್ತೊಂದು ಮಹತ್ವದ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೂ ಆಡಳಿತಾತ್ಮಕ ಅನುಮೋದನೆಯೊಂದಿಗೆ ಮಂಗಳವಾರ ಅಧಿಕೃತ ಆದೇಶ ಪ್ರಕಟವಾಗಿದೆ. ಕುಟುಂಬದ ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ ಜಿಎಸ್‌ಟಿ ಮರುಪಾವತಿ ಪಡೆಯುವವರಾಗಿದ್ದಲ್ಲಿ ಅಂತಹವರಿಗೆ ಯೋಜನೆಯು ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೆ, ಅಂತ್ಯೋದಯ, ಬಿಪಿಎಲ್‌, ಎಪಿಎಲ್‌ ಕಾರ್ಡುಗಳಲ್ಲಿ ಹೆಸರು ನಮೂದಾಗಿರುವ ಮನೆಯ ಯಜಮಾನಿಯು 2000 ರು. ಸಹಾಯಧನ ನೀಡುವ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಯಾಗಬಹುದು. 

ಇಂತಹ ಫಲಾನುಭವಿಗಳು ಸುಳ್ಳು ಮಾಹಿತಿ ನೀಡಿ ಯೋಜನೆಯ ಪ್ರಯೋಜನ ಪಡೆದರೆ ಅವರಿಂದ ಭವಿಷ್ಯದಲ್ಲಿ ಮಾಸಾಶನದ ಮೊತ್ತವನ್ನು ವಸೂಲಿ ಮಾಡಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹ ಫಲಾನುಭವಿಗಳಾಗಿರುತ್ತಾರೆ. 

ಜನರ ಆಶೋತ್ತರಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ: ಸಿಎಂ ಸಿದ್ದರಾಮಯ್ಯ

ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರು ಇದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಯೋಜನೆ ಪಡೆಯಲು ಫಲಾನುಭವಿಯು ಬ್ಯಾಂಕ್‌ ಖಾತೆ ಮತ್ತು ಆಧಾರ್‌ ಕಾರ್ಡ್‌ಗಳನ್ನು ಜೋಡಣೆ ಮಾಡಬೇಕು ಎಂದು ತಿಳಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳು 2023ರ ಜೂನ್‌ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಬೇಕು. ನಂತರ ಜು.15ರಿಂದ ಫಲಾನುಭವಿಗಳ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್‌ 15ರಂದು ಅವರ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದು.

ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಾಗಲಿ ಅಥವಾ ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡಲಾಗುತ್ತದೆ. ಅರ್ಜಿಯಲ್ಲಿನ ಅಂಶಗಳ ಬಗ್ಗೆ ತದನಂತರ ಪರಿಶೀಲನೆ ನಡೆಸಬೇಕು. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಈಗಾಗಲೇ ಪಾವತಿಯಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲಿ ಮಾಡುವುದು ಮತ್ತು ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಈ ಯೋಜನೆಯ ವಿವರವಾದ ರೂಪರೇಷೆ ಹಾಗೂ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ವಿದ್ಯುತ್‌ ದುಂದು ವೆಚ್ಚಕ್ಕೆ ಬಿಜೆಪಿ ಪ್ರಚೋದನೆ: ಸಿಎಂ ಸಿದ್ದರಾಮಯ್ಯ ಕಿಡಿ

ಯಾರಿಗೆ 2000 ರು. ಇಲ್ಲ?: ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಅಥವಾ ಜಿಎಸ್‌ಟಿ ಮರುಪಾವತಿ ಪಡೆಯುವವರು ಈ ಯೋಜನೆಗೆ ಅರ್ಹರಲ್ಲ. ಅಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಹುತೇಕ ನೌಕರರು, ಅಧಿಕಾರಿಗಳು, ಆದಾಯ ತೆರಿಗೆ ಪಾವತಿಗೆ ವಿನಾಯಿತಿ ಇರುವ ವೇತನಕ್ಕಿಂತ ಹೆಚ್ಚು ಸಂಬಳ ಪಡೆಯುವ ಖಾಸಗಿ ನೌಕರರು, ಜಿಎಸ್‌ಟಿ ಮರುಪಾವತಿ ಪಡೆಯುವ ವ್ಯಾಪಾರಸ್ಥರು, ಉದ್ದಿಮೆದಾರರು ಹಾಗೂ ಇತರೆ ಶ್ರೀಮಂತರು ಯೋಜನೆಗೆ ಅರ್ಹರಾಗುವುದಿಲ್ಲ.