ಮಲೆನಾಡಲ್ಲಿ ಶಿಕ್ಷಣ ವಂಚಿತ ವಲಸೆ ಕಾರ್ಮಿಕರ ನೂರಾರು ಮಕ್ಕಳು! ಅವರ ಭವಿಷ್ಯ ಏನು?
ಹೆತ್ತವರು ಕೂಲಿಗೆ ಹೋದ್ರೆ ಅಂಗನವಾಡಿ, ಪ್ರೈಮರಿ ಶಾಲೆಯಿಂದ ವಂಚಿತರಾಗಿರೋ ಮಕ್ಕಳದ್ದೇ ಮನೆ ಕೆಲಸ. ಗಂಡು ಮಕ್ಕಳು ಸೌದೆ ನೀರು ತಂದ್ರೆ, ಹೆಣ್ಣು ಮಕ್ಕಳು ಪಾತ್ರೆ ತೊಳೆದು ತಮಗಿಂತ ಚಿಕ್ಕ-ಚಿಕ್ಕ ಮಕ್ಕಳನ್ನ ನೋಡಿಕೊಳ್ತಾರೆ. ಓದೋಕೆ ಆಸೆ ಇದ್ರು ಆ ಮಕ್ಕಳಿಗೆ ಓದುವ ಭಾಗ್ಯವಿಲ್ಲ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.4) : ಒಂದು ಬೇಕು ಅಂದ್ರೆ ಮತ್ತೊಂದನ್ನ ಕಳೆದುಕೊಳ್ಳಲೇ ಬೇಕು. ಅನ್ನವೋ, ಇಲ್ಲಾ ಮಕ್ಕಳ ವಿದ್ಯಾಭ್ಯಾಸವೋ ಎಂಬ ಪ್ರಶ್ನೆ ಬಂದಾಗ ಆ ಕೂಲಿ ಕಾರ್ಮಿಕರು ಆಯ್ದುಕೊಂಡದ್ದು ತುತ್ತು ಅನ್ನವನ್ನ. ಇದರಿಂದ ಪ್ರತಿವರ್ಷ ಚಿಕ್ಕಮಗಳೂರಿಗೆ ಕೂಲಿಗಾಗಿ ಬರೋ ಸಾವಿರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಮಕ್ಕಳ ಹೊಟ್ಟೆ ತುಂಬಿದ್ರೆ ಸಾಕು ಅಂತಾ ಪೋಷಕರು ಯೋಚಿಸ್ತಿದ್ರೆ, ಮೂಲಭೂತ ಶಿಕ್ಷಣವೇ ಇಲ್ಲದೇ ಬೆಳೆದ ಮಕ್ಕಳು ಜೀವನಕ್ಕಾಗಿ ಮುಂದೆ ಯಾವ ದಾರಿ ಹಿಡೀತಾರೆ ಅನ್ನೋದನ್ನ ವಲಸೆ ಪೋಷಕರು ಯೋಚಿಸದೇ ಇರೋದೇ ವಿಪರ್ಯಾಸ.
ಶಿಕ್ಷಣದಿಂದ ವಂಚಿತರಾಗಿರೋ ಮಕ್ಕಳು :
ಪ್ರತಿ ವರ್ಷ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಿದೆ. ಆದ್ರೆ ಹೆತ್ತವರು, ಮಕ್ಕಳ ವಿದ್ಯಾಭ್ಯಾಸವೋ ಇಲ್ಲ ಮಕ್ಕಳ ಹೊಟ್ಟೆಗೆ ಅನ್ನವೋ ಎಂಬ ಪ್ರಶ್ನೆ ಬಂದಾಗ ಅವರ ಆಯ್ಕೆ ಅನ್ನವೇ ಆಗಿದೆ. ಹೌದು ಚಿಕ್ಕಮಗಳೂರಿನ ಕಾಫಿತೋಟಗಳಿಗೆ ಕೆಲಸಕ್ಕೆ ಬಂದಿರುವ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ ಜೊತೆ, ಉತ್ತರ ಭಾರತದ ಬಿಹಾರ, ಒರಿಸ್ಸಾ,ಅಸ್ಮಾಂ, ರಾಜಸ್ಥಾನದ ಸಾವಿರಾರು ಕೂಲಿಯಾಳುಗಳು ಬರುತ್ತಾರೆ. ಆದ್ರೆ, ಅವರು ತಮ್ಮ ಜೊತೆ ಮಕ್ಕಳನ್ನ ಕರೆತರುತ್ತಿರೋದ್ರಿಂದ ಆ ಮಕ್ಕಳು ಶಾಲೆಯಿಂದ ಹೊರಗುಳಿದಿವೆ. ಮೂಲಭೂತ ಶಿಕ್ಷಣದಿಂದ ವಂಚಿತರಾಗಿರೋ ಮಕ್ಕಳು ಮುಂದೆ ಹೇಗೆ ಬದುಕ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಅತ್ತಿಗುಂಡಿ ಗ್ರಾಮದ ಕಾಫಿತೋಟದಲ್ಲಿ ವಲಸೆ ಬಂದಿರೋ ನೂರಾರು ಮಕ್ಕಳನ್ನು ನೋಡಿದರೆ ಅಯ್ಯೋ ಎನಿಸುತ್ತೆ.
ಗೌರವಧನವಿಲ್ಲದೆ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೊರಟ ಅಂಗನವಾಡಿ ನೌಕರರು!
ಟೆಂಟ್ ಶಾಲೆಗೆ ಸ್ಥಳೀಯರಿಂದ ಆಗ್ರಹ :
ಹೆತ್ತವರು ಕೂಲಿಗೆ ಹೋದ್ರೆ ಅಂಗನವಾಡಿ, ಪ್ರೈಮರಿ ಶಾಲೆಯಿಂದ ವಂಚಿತರಾಗಿರೋ ಮಕ್ಕಳದ್ದೇ ಮನೆ ಕೆಲಸ. ಗಂಡು ಮಕ್ಕಳು ಸೌದೆ ನೀರು ತಂದ್ರೆ, ಹೆಣ್ಣು ಮಕ್ಕಳು ಪಾತ್ರೆ ತೊಳೆದು ತಮಗಿಂತ ಚಿಕ್ಕ-ಚಿಕ್ಕ ಮಕ್ಕಳನ್ನ ನೋಡಿಕೊಳ್ತಾರೆ. ಓದೋಕೆ ಆಸೆ ಇದ್ರು ಆ ಮಕ್ಕಳಿಗೆ ಓದುವ ಭಾಗ್ಯವಿಲ್ಲ.ಕೆಲ ಮಕ್ಕಳು ಶಿಕ್ಷಕಿ ,ಡಾಕ್ಟರ್ ಆಗುವ ಆಸೆಯನ್ನು ಹೊರಹಾಕುತ್ತಾರೆ, ಆದ್ರೆ ಭಾಷೆ ಸಮಸ್ಯೆಯಿಂದ ಸ್ಥಳೀಯ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಲು ಪೋಷಕರು ಹಿಂದೇಟು ಹಾಕಿತ್ತಿದ್ದಾರೆ. ಹೆತ್ತೋರಿಗೂ ಕೂಡ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ಸರ್ಕಾರದ ಯೋಜನೆಗಳನ್ನ ಬಳಸಿಕೊಂಡು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಟೆಂಟ್ ಶಾಲೆಗಳನ್ನು ತೆರದ್ರೆ ಈ ಮಕ್ಕಳ ಬಾಳು ಕೂಡ ಉಜ್ವಲವಾಗಲಿದೆ. ಆದ್ರೆ ವಲಸೆ ಬಂದಿರೋ ಪೋಷಕರನ್ನ ಕೇಳಿದ್ರೆ ನಮ್ಮಲ್ಲಿ ಮಳೆ-ಬೆಳೆ ಇಲ್ಲ. ಬದುಕ್ಲೇ ಬೇಕಲ್ಲ. ನಮ್ಮ ಹಣೆಬರಹ ಏನ್ ಮಾಡೋದು ಅಂತಾರೆ.
ಜೇಡಿಕೊಂಡ ಗ್ರಾಮದ 4 ಕುಟುಂಬಕ್ಕೆ ಕಾತಾಳೆ ಮರದ ಎಲೆಯ ಗುಡಿಸಲೇ ಆಸರೆ: ಕಾರಣವೇನು?
ಒಟ್ಟಾರೆ, ಹಲ್ಲಿದ್ದೋರಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದೋರಿಗೆ ಹಲ್ಲಿಲ್ಲ ಎಂಬಂತಾಗಿದೆ ಮಕ್ಕಳ ಓದು. ಮನೆಯಲ್ಲಿ ಎಷ್ಟಾದ್ರು ಓದಿಸ್ತಾರೆ ಕೆಲ ಮಕ್ಕಳು ಓದಲ್ಲ. ಮನೆಯಲ್ಲಿ ಕಿತ್ತು ತಿನ್ನೋ ಬಡತನ ಅಲ್ಲಿನ ಮಕ್ಕಳಿಗೆ ಓದೋ ಆಸೆ. ಓದಿಗಿಂತ ಮಕ್ಕಳಿಗೆ ಹೊಟ್ಟೆ ತುಂಬಿಸೋದೆ ಹೆತ್ತೋರಿಗೆ ಮುಖ್ಯವಾಗಿದೆ. ಸರ್ಕಾರ ಮಧ್ಯಪ್ರವೇಶಿಸಿ, ಹೀಗೆ ಅಲೆಮಾರಿ ಜೀವನ ಸಾಗಿಸೋ ಕೂಲಿಯಾಳುಗಳ ಮಕ್ಕಳ ಓದಿಗೆ ಸಹಕಾರ ನೀಡಬೇಕಿದೆ.