ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೃಹತ್ ಮುಷ್ಕರ ನಡೆಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಬ್ಯಾಂಕಿಂಗ್, ವಿಮೆ, ಅಂಚೆ ಸೇರಿದಂತೆ ಹಲವು ಸೇವೆಗಳ ಮೇಲೆ ಪರಿಣಾಮ ಬೀರಲಿದೆ.

ಬೆಂಗಳೂರು (ಜುಲೈ.9): ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಇಂದು ಬೃಹತ್ ಮುಷ್ಕರಕ್ಕೆ ಕರೆ ನೀಡಿವೆ. AITUC, CITU, HMS, INTUC, SEWA ಸೇರಿದಂತೆ ಪ್ರಮುಖ ಕಾರ್ಮಿಕ ಸಂಘಟನೆಗಳು ಈ ಹೋರಾಟದಲ್ಲಿ ಭಾಗವಹಿಸಿದ್ದು, ಸುಮಾರು 25 ಕೋಟಿಗೂ ಹೆಚ್ಚು ಕಾರ್ಮಿಕರು ಈ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕಾರ್ಮಿಕ ವಿರೋಧಿ, ರೈತ ವಿರೋಧಿ, ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು ಖಂಡಿಸಿ ಈ ಬಂದ್ ಆಯೋಜಿಸಲಾಗಿದೆ.

ಭಾರತ್ ಬಂದ್‌ನಿಂದ ಏನೇನು ವ್ಯತ್ಯಯ?

ಈ ಬಂದ್‌ನಿಂದಾಗಿ ಬ್ಯಾಂಕಿಂಗ್, ವಿಮೆ, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಸಾರಿಗೆ, ಗಾರ್ಮೆಂಟ್ಸ್, ಎಲ್‌ಐಸಿ, ಬಿಎಸ್‌ಎನ್‌ಎಲ್, ಇನ್ಶುರೆನ್ಸ್ ಕಚೇರಿಗಳು, ಮತ್ತು ಪಿಎಫ್ ಕಚೇರಿಗಳಂತಹ ಸಾರ್ವಜನಿಕ ವಲಯದಲ್ಲಿ ಭಾರೀ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಎಲ್‌ಐಸಿ, ಕಾರ್ಖಾನೆಗಳು, ಮತ್ತು ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಂಡಿವೆ.

ಏನೇನು ಇರಲಿವೆ:

ಬಸ್, ಮೆಟ್ರೋ, ರೈಲು, ಆಟೋ, ಖಾಸಗಿ ಬಸ್‌ಗಳು, ಶಾಲೆ-ಕಾಲೇಜು, ಹೋಟೆಲ್, ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು, ಮಾರ್ಕೆಟ್, ಬೀದಿ ಬದಿ ವ್ಯಾಪಾರ, ಮತ್ತು ಆರೋಗ್ಯ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿವೆ.

ಕಾರ್ಮಿಕರ ಬೇಡಿಕೆಗಳೇನು?

  • ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸ್ಬೇಕು.
  • ಕೇಂದ್ರ ಸರ್ಕಾರ ತಂದಿರುವ ನಾಲ್ಕು ಸಂಹಿತೆಗಳನ್ನು ತಿರಸ್ಕರಿಸ್ಬೇಕು.
  • ಕನಿಷ್ಠ ವೇತನ ಜಾರಿಗೊಳಿಸ್ಬೇಕು.
  • ಕೇಂದ್ರ ತಂದಿರುವ ನಿಯಮದಲ್ಲಿ ಸಂಘ ರಚಿಸುವ ಹಕ್ಕು ಕಸಿದುಕೊಳ್ಳಲಾಗಿದೆ. ಇದನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯಬೇಕು.
  • ಹೊಸ ಸಂಘ ರಚಿಸಲು ಅನುಮತಿ ನೀಡ್ಬೇಕು.
  • ಕೆಲಸದ ಅವಧಿಯನ್ನು 12 ಗಂಟೆಯಿಂದ 8ಗಂಟೆಗೆ ಕಡಿತಗೊಳಿಸ್ಬೇಕು.
  • ಗುತ್ತಿಗೆ ನೌಕರಿ ರದ್ದುಗೊಳಿಸಿ ಖಾಯಂ ನೌಕರಿ ಜಾರಿಯಾಗ್ಬೇಕು.

ಭಾರತ್ ಬಂದ್: ಟೌನ್‌ಹಾಲ್‌ ಮುಂಭಾಗ ಬಿಗಿ ಭದ್ರತೆ:

ದೇಶವ್ಯಾಪಿ ಕಾರ್ಮಿಕ ಸಂಘಟನೆಗಳ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನ ಟೌನ್‌ಹಾಲ್‌ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಜಾರಿಗೊಳಿಸಲಾಗಿದೆ. ಪೊಲೀಸರು ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅನುಮತಿ ನೀಡಿದ್ದರೂ, ಟೌನ್‌ಹಾಲ್‌ ಮುಂಭಾಗದಲ್ಲಿ ಕಾರ್ಮಿಕ ಸಂಘಟನೆಗಳು ಜಮಾಯಿಸುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.