ಮೈದುಂಬಿ ಧುಮ್ಮಿಕ್ಕುತ್ತಿರುವ ಕರ್ನಾಟಕ-ಗೋವಾ ಗಡಿಭಾಗದ ದೂಧಸಾಗರ ಜಲಪಾತದಲ್ಲಿ ನಿಷೇಧ ಇದ್ದರೂ ನೂರಾರು ಸಂಖ್ಯೆಯಲ್ಲಿ ಚಾರಣಿಗರು ಆಗಮಿಸಿದ್ದು, ಗೋವಾ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಅಡ್ಡಗಟ್ಟಿಬಸ್ಕಿ ಹೊಡೆಸಿದ ಘಟನೆ ಕೂಡ ನಡೆದಿದೆ

ಬೆಂಗಳೂರು (ಜು.17) :  ‘ಶಕ್ತಿ’ ಯೋಜನೆ ಜೊತೆಗೆ ವೀಕೆಂಡ್‌ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಭಾನುವಾರ ಪ್ರವಾಸಿಗರ ದಟ್ಟಣೆ ಕಂಡು ಬಂತು. ಆಷಾಢ ಮಾಸದ ಕೊನೆ ಹಾಗೂ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಹಿನ್ನೆಲೆಯಲ್ಲಿ ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡಿದರು. ಇದೇ ವೇಳೆ, ಕರ್ನಾಟಕ-ಗೋವಾ ಗಡಿಭಾಗದ ದೂಧ್‌ಸಾಗರ, ಬೆಳಗಾವಿಯ ಗೋಕಾಕ್‌ ಫಾಲ್ಸ್‌, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮ, ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಸೇರಿದಂತೆ ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರು, ಭಾನುವಾರದ ರಜೆಯ ಮಜಾ ಅನುಭವಿಸಿದರು.

ಆಷಾಢ ಅಮಾವಾಸ್ಯೆಯ ಮುನ್ನಾದಿನವಾದ ಭಾನುವಾರ ಬಾಗಲಕೋಟೆ ಜಿಲ್ಲೆಯ ಬನಶಂಕರಿ, ತುಮಕೂರು ಜಿಲ್ಲೆ ಗೊರವನಹಳ್ಳಿ ಮಹಾಲಕ್ಷ್ಮೇ ದೇವಾಲಯ, ಬೆಳಗಾವಿಯ ಸವದತ್ತಿ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ, ಈಶ ¶ೌಂಡೇಷನ್‌ನ ಆದಿಯೋಗಿ ಸೇರಿ ರಾಜ್ಯದ ಶಕ್ತಿ ದೇವಾಲಯಗಳಲ್ಲಿ ಮಹಿಳಾ ಪ್ರವಾಸಿಗರ ದಂಡು ಕಂಡು ಬಂತು. ಚಿಕ್ಕಬಳ್ಳಾಪುರ ಜಿಲ್ಲೆ ಆವಲಗುರ್ಕಿಯ ಈಶ ¶ೌಂಡೇಷನ್‌ನ 113 ಅಡಿಯ ಆದಿಯೋಗಿ ಶಿವನ ಪ್ರತಿಮೆ ನೋಡಲು ಮಹಿಳೆಯರು ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಚಿಕ್ಕಬಳ್ಳಾಪುರ ಬಸ್‌ ನಿಲ್ದಾಣದಿಂದ ಆದಿಯೋಗಿ ದೇವಾಲಯಕ್ಕೆ 5 ನಿಮಿಷಕ್ಕೊಂದು, ನಂದಿ ಬೆಟ್ಟಕ್ಕೆ 30 ನಿಮಿಷಕ್ಕೊಂದರಂತೆ ಬಸ್‌ ಬಿಡಲಾಗಿತ್ತು.

ಪ್ರವಾಸಿಗರ ಸ್ವರ್ಗ ಚಾರ್ಮಾಡಿ ಘಾಟಿಯಲ್ಲಿ ಪುಂಡರ ಹಾವಳಿ: ಪೊಲೀಸರೇ ಏನ್ಮಾಡ್ತೀದ್ದೀರಿ

ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಸಾಗುವ ನಂದಿಬೆಟ್ಟರಸ್ತೆಯಲ್ಲಿ ಭಾನುವಾರ ಬೆಳಗ್ಗೆ ನಾಲ್ಕೂವರೆ ಗಂಟೆಗೆಲ್ಲಾ ಟ್ರಾಫಿಕ್‌ ಜಾಮ್‌ ಉಂಟಾಗಿ, ಐದಾರು ಕಿ.ಮೀ.ದೂರದವರೆಗೆ ವಾಹನಗಳು ಸಾಲುಗಟ್ಟಿನಿಂತಿದ್ದವು. ಸಂಚಾರದಟ್ಟಣೆ ನಿಯಂತ್ರಿಸಲು ನಂದಿ ಗಿರಿಧಾಮ ಪೊಲೀಸರು ಹರಸಾಹಸ ಪಡಬೇಕಾಯಿತು. ಇದೇ ವೇಳೆ, ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರಾ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಗಿರಿತಾಣಗಳಿಗೆ ಭಾನುವಾರ ಸುಮಾರು ಐದೂವರೆ ಸಾವಿರ ಪ್ರವಾಸಿಗರು ಬಂದು ಹೋಗಿದ್ದಾರೆ.

ಮೈದುಂಬಿ ಧುಮ್ಮಿಕ್ಕುತ್ತಿರುವ ಕರ್ನಾಟಕ-ಗೋವಾ ಗಡಿಭಾಗದ ದೂಧಸಾಗರ ಜಲಪಾತದಲ್ಲಿ ನಿಷೇಧ ಇದ್ದರೂ ನೂರಾರು ಸಂಖ್ಯೆಯಲ್ಲಿ ಚಾರಣಿಗರು ಆಗಮಿಸಿದ್ದು, ಗೋವಾ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಅಡ್ಡಗಟ್ಟಿಬಸ್ಕಿ ಹೊಡೆಸಿದ ಘಟನೆ ಕೂಡ ನಡೆದಿದೆ. ಜೊತೆಗೆ, ಸೂಚನೆ ಹೊರತಾಗಿಯೂ ಅಪಾಯಕಾರಿ ಸ್ಥಳಕ್ಕೆ ಚಾರಣಿಗರು ತೆರಳಲು ಯತ್ನಿಸಿದ ವೇಳೆ ಪೊಲೀಸರು ಲಘು ಲಾಠಿಪ್ರಹಾರವನ್ನೂ ನಡೆಸಿದರು.

ನಂದಿ ಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರು: ಪ್ರಕೃತಿಯ ಮಡಿಲಲ್ಲಿ ಪ್ರೇಮ ಪಕ್ಷಿಗಳ ಕಲರವ

ಇದೇ ವೇಳೆ, ಬೆಳಗಾವಿ ಜಿಲ್ಲೆಯ ಗೋಕಾಕ್‌ ಫಾಲ್ಸ್‌ ವೀಕ್ಷಣೆಗೂ ಸಾಕಷ್ಟುಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ನೀರು ಬೀಳುವ ಜಾಗದಲ್ಲಿ ನಿಂತು ಸೆಲ್ಫಿ ಕ್ಕಿಕ್ಕಿಸುವ ದೃಶ್ಯ ಸಾಮಾನ್ಯವಾಗಿತ್ತು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲೂ ಪ್ರವಾಸಿಗರ ದಂಡು ಕಂಡು ಬಂತು. ದಟ್ಟಮಂಜಿನಿಂದ ಆವರಿಸಿದ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.