ವಾರಾಂತ್ಯದ ಹಿನ್ನೆಲೆ ತಾಲೂಕಿನ ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಭಾನುವಾರ ಪ್ರವಾಸಿಗರ ದಂಡೇ ಹರಿದುಬಂದಿತ್ತು. ಮುದ್ದೇನಹಳ್ಳಿಗೆ ರಾಷ್ಟ್ರಪತಿ ಆಗಮನ ಹಿನ್ನಲೆ ನಂದಿ ಬೆಟ್ಟಕ್ಕೆ ಕಳೆದ ಭಾನುವಾರ ಪ್ರವೇಶ ನಿಷೇಧಿಸಲಾಗಿತ್ತು.

ಚಿಕ್ಕಬಳ್ಳಾಪುರ (ಜು.10): ವಾರಾಂತ್ಯದ ಹಿನ್ನೆಲೆ ತಾಲೂಕಿನ ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಭಾನುವಾರ ಪ್ರವಾಸಿಗರ ದಂಡೇ ಹರಿದುಬಂದಿತ್ತು. ಮುದ್ದೇನಹಳ್ಳಿಗೆ ರಾಷ್ಟ್ರಪತಿ ಆಗಮನ ಹಿನ್ನಲೆ ನಂದಿ ಬೆಟ್ಟಕ್ಕೆ ಕಳೆದ ಭಾನುವಾರ ಪ್ರವೇಶ ನಿಷೇಧಿಸಲಾಗಿತ್ತು. ಇದರ ವಿರುದ್ಧ ಪ್ರವಾಸಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ಭಾನುವಾರ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಮುಂಜಾನೆ ಯಿಂದಲೆ ಪ್ರವಾಸಿಗರಿಂದ ಗಿಜಿಗುಟ್ಟುತ್ತಿತ್ತು. 

ವೀಕೆಂಡ್‌ ಕಾರಣದಿಂದಾಗಿ ನಂದಿ ಹಿಲ್ಸ್‌ ನಲ್ಲಿ ಜನಸಾಗರವೆ ನೆರೆದಿತ್ತು. ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರ ದಾಂಗುಡಿ ಜೋರಾಗಿತ್ತು.ಆಗಮಿಸಿದ ಪ್ರವಾಸಿಗರು ನಂದಿಬೆಟ್ಟದ ಸೌಂದರ್ಯ ಸವಿದರು. ಪ್ರಕೃತಿಯ ಮಡಿಲಲ್ಲಿ ಪ್ರೇಮ ಪಕ್ಷಿಗಳ ಕಲರವ ಹೆಚ್ಚಾಗಿತ್ತು.ಪ್ರವಾಸಿಗರು ಬಂದ ವಾಹನಗಳಿಂದ ಬೆಟ್ಟದ ಮೇಲಿನ ಪಾರ್ಕಿಂಗ್‌ ಲಾಟ್‌ ಹೌಸ್‌ ಫುಲ್‌ ಆಗಿತ್ತು. ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಗಿರಿಧಾಮದ ಸಿಬ್ಬಂದಿ ಹರಸಾಹಸ ಪಟ್ಟರು.

ಆಷಾಢ ಮಾಸದ ಕೊನೆಯ ಸೋಮವಾರ: ನಂದಿಗಿರಿ ಪ್ರದಕ್ಷಿಣೆ ಮಾಡುತ್ತಿರುವ ಭಕ್ತರು

ವಾಹನಗಳ ಪಾರ್ಕಿಂಗ್‌ ಸಮಸ್ಯೆ: ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರೂ ನಿಯಮಾನುಸಾರ ಪ್ರವೇಶ ನೀಡಿದ್ದರಿಂದ ಸಾಕಷ್ಟುಮಂದಿ ಗಂಟೆಗಟ್ಟಲೇ ಸಾಲಿನಲ್ಲಿ ಕಾಯಬೇಕಾಯಿತು. ಎರಡನೇ ಶನಿವಾರ ಸರ್ಕಾರಿ ರಜೆ ಇದ್ದುದರಿಂದ ನಿನ್ನೆ ಸಹಾ ಪ್ರವಾಸಿಗರು ಹೆಚ್ಚಾಗಿದ್ದರು. ಇಂದು ಭಾನುವಾರ ಬೆಳಗ್ಗೆಯಿಂದಲೇ ಸಾವಿರಾರು ಮಂದಿ ಬೆಟ್ಟಕ್ಕೆ ಆಗಮಿಸಿದ್ದರು. ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದರು. ಆದರೆ, ನಂದಿ ಬೆಟ್ಟದಲ್ಲಿ ಕಾರು ಪಾರ್ಕಿಂಗ್‌ ಹೌಸ್‌ ಫುಲ್‌ ಆದ ಕಾರಣ ಕೆಲವರು ಬೆಟ್ಟದ ಬುಡದವರೆಗೂ ಬಂದು ವಾಪಸ್‌ ಹೋಗುವಂತಾಯಿತು.

ನಂದಿ ಬೆಟ್ಟದ ಮೇಲ್ಭಾಗದಲ್ಲಿ 300 ಕಾರು ಹಾಗೂ ಸಾವಿರ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಮಾಡಲು ಸ್ಥಳಾವಕಾಶವಿದೆ. ಅಷ್ಟುವಾಹನಗಳಿಗೆ ಮಾತ್ರ ಬೆಟ್ಟದ ಮೇಲೆ ಪ್ರವೇಶ ನೀಡಲಾಗುತ್ತಿದೆ. ಉಳಿದ ವಾಹನಗಳಿಗೆ ನಂದಿ ಬೆಟ್ಟದ ಚೆಕ್‌ ಪೋಸ್ಟ್‌ ಬಳಿಯೇ ತಡೆಯೊಡ್ಡಲಾಗಿತ್ತು.

ಚೆಕ್‌ಪೋಸ್ಟ್‌ ಬಳಿ ಕಾರುಗಳ ಸಾಲು: ಹೀಗಾಗಿ ಚೆಕ್‌ ಪೋಸ್ಟ್‌ ಬಳಿ ನೂರಕ್ಕೂ ಹೆಚ್ಚು ಕಾರುಗಳಲ್ಲಿ ಪ್ರವಾಸಿಗರು ಗಂಟೆಗಟ್ಟಲೇ ಕಾಯುವಂತಾಯಿತು. ಬೆಟ್ಟದ ಮೇಲಿಂದ ವಾಹನಗಳು ವಾಪಸ್‌ ಬಂದ ನಂತರ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಹೀಗಾಗಿ ಕೆಲವರು ಕಾದು ಕಾದು ಸುಸ್ತಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದರು. ಇನ್ನೊಂದೆಡೆ ವೀಕೆಂಡ್‌ನಲ್ಲಿ ಬೆಟ್ಟದ ಮೇಲೆ ಮತ್ತು ಕೆಳಗೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. 

ವೀಕೆಂಡ್‌ಗಳಲ್ಲಿ ಹೆಚ್ಚು ಜನರ ಪ್ರವೇಶ ನೀಡಿದ ಹಿನ್ನೆಲೆ ಅಂಗಡಿಗಳಲ್ಲಿ ಒಳ್ಳೆಯ ವ್ಯಾಪಾರ ಆಗುತ್ತಿದ್ದು, ಒಂದಷ್ಟುಆದಾಯ ಕಾಣುವಂತಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ನಿಗದಿತ ವಾಹನಗಳಿಗೆ ಮಾತ್ರ ಪ್ರವೇಶ ನೀಡುತ್ತಿರುವುದರಿಂದ ನಂದಿ ಬೆಟ್ಟಕ್ಕೆ ಹೋಗಲು ಕಾಯುವಂತಾಗಿದೆ. ಆದರೆ ಟ್ರಾಫಿಕ್‌ ಜಾಮ್‌ ಸಮಸ್ಯೆ ಹಿನ್ನೆಲೆ ಇದು ಅನಿವಾರ್ಯವಾಗಿದೆ. ಬೆಟ್ಟದ ಮೇಲೆ ಹೋದವರು ವೀಕ್ಷಣೆ ಮಾಡಿ ಬಂದ ಮೇಲಾದರೂ ನಮಗೆ ಅವಕಾಶ ಸಿಗುತ್ತದೆ ಎಂಬ ನೆಮ್ಮದಿ ಪ್ರವಾಸಿಗರಾದ ನಮಗೆ ಇದೆ ಎಂದು ಬೆಂಗಳೂರಿನ ರಾಜೇಶ್‌ ಹೇಳಿದರು.

ಜನರ ಸಮಸ್ಯೆ ಆಲಿಸಲು ತನ್ನದೇ ಹೆಸರಿನಲ್ಲಿ ವೆಬ್‌ಸೈಟ್‌ ಆರಂಭಿಸಿದ ಶಾಸಕ ಪ್ರದೀಪ್ ಈಶ್ವರ್‌

ಕಳೆದ ವಾರ ನಡೆದಿದ್ದ ಪ್ರತಿಭಟನೆ: ಮುದ್ದೇನಹಳ್ಳಿಗೆ ರಾಷ್ಟ್ರಪತಿ ಆಗಮನ ಹಿನ್ನೆಲೆಯಲ್ಲಿ ಕಳೆದ ವಾರಾಂತ್ಯದಲ್ಲಿ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರಿಂದ ಪ್ರವಾಸಿಗರು ನಂದಿ ಬೆಟ್ಟದ ಕೆಳಗಡೆ ದಿಢೀರ್‌ ಪ್ರತಿಭಟನೆ ನಡೆಸಿದ್ದರು. ಇಂದು ಸಹಾ ಸೀಮಿತ ಪ್ರವೇಶ ನೀಡಿದ್ದನ್ನು ಖಂಡಿಸಿದ ಪ್ರವಾಸಿಗರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.