ಸದ್ಯಕ್ಕೆ ಪ್ರಜ್ವಲ್ ಭೇಟಿಯಾಗಲು ಹೋಗಲ್ಲ, ದೇವರು ಬಿಟ್ಟರೆ ನಮಗ್ಯಾರು ಇಲ್ಲ; ಹೆಚ್.ಡಿ. ರೇವಣ್ಣ
ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರಿಲ್ಲ. ನಾನು ಸದ್ಯಕ್ಕೆ ಪ್ರಜ್ವಲ್ ಭೇಟಿಗೆ ಹೋಗಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅಳಲು ತೋಡಿಕೊಂಡಿದ್ದಾರೆ.
ಮೈಸೂರು (ಜು.02): ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರಿಲ್ಲ. ನಾನು ಸದ್ಯಕ್ಕೆ ಪ್ರಜ್ವಲ್ ಭೇಟಿಗೆ ಹೋಗಲ್ಲ. ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೋಟ್ಟ ಅಂತಾ ಹೇಳುತ್ತಾರೆ ಹೀಗಾಗಿ ನಾನು ಹೋಗಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅಳಲು ತೋಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಸದ್ಯಕ್ಕೆ ಪ್ರಜ್ವಲ್ ನೋಡುವುದಕ್ಕೆ ಹೋಗಲ್ಲ. ನಾನು ಅಲ್ಲಿಗೆ ಹೋದರೆ ಏನಾದರೂ ಹೇಳಿಕೊಟ್ಟು ಬಂದಿದ್ದಾರೆ ಎಂದುಕೊಳ್ಳುತ್ತಾರೆ. ಈಗ ಸದ್ಯಕ್ಕೆ ಮಗೆ ದೇವರು ಬಿಟ್ಟರೆ ಬೇರಾರೂ ಇಲ್ಲ. ಇನ್ನು ನಿನ್ನೆ ನನ್ನ ಪತ್ನಿ ಭವಾನಿ ಜೈಲಿಗೆ ಹೋಗಿ ಮಗನನ್ನು ಭೇಟಿ ಮಾಡಿಕೊಂಡು ಬಂದಿದ್ದಾರೆ. ಎಷ್ಟೇ ಆದರೂ ಮಗ ಅಲ್ವ ಹೀಗಾಗಿ ಹೋಗಿದ್ದಾರೆ ಅಷ್ಟೇ. ತಾಯಿ ಮಗ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ, ಕೇಳಲೂ ಹೋಗಿಲ್ಲ ಎಂದು ಹೇಳಿದರು.
ರೇಪ್ ಕೇಸ್: ಮಗನನ್ನು ನೋಡಲು ಮೊದಲ ಸಲ ಜೈಲಿಗೆ ಬಂದ ಭವಾನಿ, ತಾಯಿ ಕಂಡು ಕಣ್ಣೀರಿಟ್ಟ ಪ್ರಜ್ವಲ್..!
ಇನ್ನು ಸೂರಜ್ ರೇವಣ್ಣ ಮಹಾನ್ ದೈವ ಭಕ್ತ. ಅವನು ಬಹಳ ಬೇಗ ಹೊರಬರುತ್ತಾನೆ ಅನ್ನೋ ನಂಬಿಕೆ ಇದೆ. ಉಳಿದ ಯಾವ ವಿಚಾರಗಳ ಬಗ್ಗೆಯೂ ನಾನು ಮಾತನಾಡೋಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇವೆ. ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಎಂಥೆಂತವರಿಗೋ ಕಷ್ಟ ಬರುತ್ತದೆ, ಅದ್ರಲ್ಲಿ ನಮ್ಮದು ಏನಿದೆ. ದೇವೇಗೌಡರು ಒಂದು ತಿಂಗಳಿನಿಂದ ಸಹಜವಾಗಿ ನೋವಿನಲ್ಲೇ ಇದ್ದಾರೆ. ಎಲ್ಲದಕ್ಕೂ ಕಾಲದಲ್ಲಿ ಉತ್ತರ ಸಿಗುತ್ತದೆ ಎಂದು ಧೈರ್ಯ ತಂದುಕೊಂಡರು. ಇನ್ನು ನಾನು ಯಾವತ್ತೂ ಯಾವುದಕ್ಕೂ ಎದೆಗುಂದುವುದಿಲ್ಲ. ಕಳೆದ 30 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಇಂಥವನ್ನೆಲ್ಲಾ ನಾನು ಬಹಳ ದಿನಗಳಿಂದಲೇ ನೋಡಿದ್ದೇನೆ. ಎಲ್ಲದಕ್ಕೂ ಕೊನೆ ಇರುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣದ ಹಿನ್ನೆಲೆಯೇನು?
ಹಾಸನದಲ್ಲಿ ಸಂಸದನಾಗಿದ್ದ ವೇಳೆ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳನ್ನು ಜಿಲ್ಲೆಯಾದ್ಯಂತ ಹಂಚಿಕೆ ಮಾಡಲಾಗಿತ್ತು. ಇನ್ನು ವಿಡಿಯೋ ನೋಡಿದ ಜನರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಭಾರಿ ವೈರಲ್ ಮಾಡುತ್ತಿದ್ದರು. ಸುಮಾರು 2,900ಕ್ಕೂ ಅಧಿಕ ವಿಡಿಯೋಗಳು ಇವೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ, ಸಂಸದ ಪ್ರಜ್ವಲ್ ರೇವಣ್ಣ ಮತದಾನ ದಿನ ಮತ ಚಲಾವಣೆ ಮಾಡಿ ವಿದೇಶಕ್ಕೆ ಹೋಗಿದ್ದರು. ಇದಾದ ನಂತರ ಸಂತ್ರಸ್ತ ಮಹಿಳೆಯರ ಪರವಾಗಿ ನಿಂದ ರಾಜ್ಯ ಮಹಿಳಾ ಆಯೋಗದಿಂದ ಪ್ರಜ್ವಲ್ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯಲಾಯಿತು. ಇದರ ಬೆನ್ನಲ್ಲಿಯೇ ಸರ್ಕಾರದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆಗೆ ಒಪ್ಪಿಸಿದರು.
ಹಾಸನ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: ಬಿಜೆಪಿ ನಾಯಕ ಪ್ರೀತಂ ಗೌಡ ಬಂಧಿಸದಂತೆ ಹೈಕೋರ್ಟ್ ಆದೇಶ
ಇದಾದ ನಂತರ ಪ್ರಜ್ವಲ್ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಸೇರಿದಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಪ್ರಜ್ವಲ್‌ಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದರೂ ಬರದ ಹಿನ್ನೆಲೆಯಲ್ಲಿ ಬಂಧನದ ವಾರೆಂಟ್ ಜಾರಿಗೊಳಿಸಲಾಯಿತು. ಪ್ರಜ್ವಲ್ ರೇವಣ್ಣ ವಿದೇಶದಿಂದ ಬೆಂಗಳೂರಿಗೆ ಬರುತ್ತಿದ್ದಂತೆ ಬಂಧಿಸಿದ ಪೊಲೀಸರು ಕೆವು ದಿನಗಳ ವಿಚಾರಣೆ ನಡೆಸಿ, ಈಗ ನ್ಯಾಯಾಂಗ ಬಂಧನದ ಅಡಿಯಲ್ಲಿ ಜೈಲಿಗೆ ಅಟ್ಟಿದ್ದಾರೆ. ನಿನ್ನೆ ಪ್ರಜ್ವಲ್ ರೇವಣ್ಣನನ್ನು ನೋಡಲು ಅವರ ತಾಯಿ ಭವಾನಿ ರೇವಣ್ಣ ಅವರು ಸೆಂಟ್ರಲ್ ಜೈಲು ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾರೆ.