ಕುವೆಂಪುಗೆ ಅಪಮಾನ : ರೋಹಿತ್ ಚಕ್ರತೀರ್ಥ ವಜಾಗೆ ಒಕ್ಕಲಿಗರ ಸಂಘ ಆಗ್ರಹ
* ಕುವೆಂಪುಗೆ ಅಪಮಾನ ಮಾಡಿದ ಆರೋಪ
* ರೋಹಿತ್ ಚಕ್ರತೀರ್ಥ ವಜಾಗೆ ಒಕ್ಕಲಿಗರ ಸಂಘ ಆಗ್ರಹ
* ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಒಕ್ಕಲಿಗರ ಸಂಘ
ಬೆಂಗಳೂರು, (ಮೇ. 28): ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದು ರಾಜ್ಯಕ್ಕೆ ಮಾಡಿರುವ ಅಪಮಾನವಾಗಿದೆ. ಸರ್ಕಾರ ಕೂಡಲೇ ಪಠ್ಯಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಒಕ್ಕಲಿಗ ಸಂಘ ಒತ್ತಾಯಿಸಿದೆ.
ಈ ಬಗ್ಗೆ ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕಲಿಗ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ರೋಹಿತ್ ಚಕ್ರತೀರ್ಥನನ್ನು ಪಠ್ಯ ಪರಿಶೀಲನಾ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು. ಸರ್ಕಾರ ಒಂದು ವೇಳೆ ಕ್ರಮ ಕೈಗೊಳ್ಳಲು ವಿಫಲವಾದರೆ ಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
22 ಬ್ರಾಹ್ಮಣರ ಬರಹ ಸೇರಿಸಿದ್ದು ಬರಗೂರು: ರೋಹಿತ್ ಚಕ್ರತೀರ್ಥ
ಈ ಸಂಬಂಧ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಜತೆ ಚರ್ಚಿಸಲಾಗುವುದು. ನಾಡಿನ ಆರೂವರೆ ಕೋಟಿ ಕನ್ನಡಿಗರು ಸ್ವೀಕರಿಸಿರುವ ನಾಡಗೀತೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಸರಿಯಲ್ಲ. ಜಗದ ಕವಿ, ಯುಗದ ಕವಿಯೆಂದು ಖ್ಯಾತಿ ಪಡೆದ ಕುವೆಂಪು ಬಗ್ಗೆ ಅತ್ಯಂತ ಕೀಳುಮಟ್ಟದಲ್ಲಿ ಮಾತನಾಡಿರುವುದು ಖಂಡನೀಯ. ಇದು ಯಾರೂ ಒಪ್ಪುವಂತದ್ದಲ್ಲ ಎಂದು ಹೇಳಿದರು.
ಕುವೆಂಪು ಅವರಿಗೆ ಕುವೆಂಪು ಅವರೇ ಸರಿಸಾಟಿ. ರೋಹಿತ್ ಚಕ್ರತೀರ್ಥ ಕುವೆಂಪು ನಾಡಗೀತೆಯನ್ನು ಅಗೌರವಿಸಿರುವುದಕ್ಕೆ ನಾಡಿನಾದ್ಯಂತ ಅಲ್ಲದೆ ದೇಶ ವಿದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. 2019ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಕಾರ ಇವರಿಗೆ ನೋಟಿಸ್ ನೀಡಿತ್ತು. ಕುವೆಂಪು ದೇವರು ಮತ್ತು ಧರ್ಮವನ್ನು ಸ್ವಾರ್ಥಕ್ಕೆ ಬಳಸುವವರ ವಿರುದ್ಧ ತಮ್ಮ ಕೃತಿ, ಕವನಗಳಲ್ಲಿ ಖಂಡಿಸಿದ್ದರು ಎಂದರು.
ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಅವರ ಗುರುಗಳಿಗೆ ಸಮರ್ಪಿಸಿದ್ದರು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಪೂರಕವಾಗಿರುವ ಈ ನಾಡಗೀತೆ ಇದಾಗಿದೆ. ಅದರೆ ನಾಡಗೀತೆಯನ್ನು ತಿರುಚಿ ಅವಹೇಳನ ಮಾಡಿರುವುದನ್ನು ಪದೇಪದೇ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿದೆ.
ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಅಲ್ಲದೆ, ಸರ್ಕಾರದಲ್ಲಿ ನಮ್ಮ ಜನಾಂಗದ ಸಚಿವರು ತಕ್ಷಣ ರಾಜ್ಯಮಟ್ಟದ ಸಭೆ ನಡೆಸಿ ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ತರಬೇಕು. ಎಲ್ಲರೂ ಎದ್ದುನಿಂತು ಗೌರವಿಸುವ ನಾಡಗೀತೆ. ಇದು ಸರ್ಕಾರಕ್ಕೆ ಅಗೌರವ ತರುವ ಕೆಲಸ ಎಂದು ಬಿಂಬಿತವಾಗುತ್ತಿದೆ. ಈಗಾಗಲೇ ಶಿಕ್ಷಣ ತಜ್ಣರು, ಸಾಹಿತಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.
ಕುವೆಂಪು ಅವರು ಒಂದು ಸಮುದಾಯದ ಕವಿಯಲ್ಲ. ಅವರು ರಾಷ್ಟ್ರದ ಕವಿ. ಯಾವುದೇ ವ್ಯಕ್ತಿಗೆ ಅವಮಾನ ಮಾಡಿದರೂ ಒಕ್ಕಲಿಗರ ಸಂಘ ಅದನ್ನು ವಿರೋಸುತ್ತದೆ ಎಂದು ಹೇಳಿದರು. ರೋಹಿತ್ ಚಕ್ರತೀರ್ಥ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ನಾಡಗೀತೆಗೆ ಅವಮಾನ ಮಾಡಿರುವುದು ಸರ್ಕಾರಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಕಣ್ತೆರೆಸುವ ಕೆಲಸವನ್ನು ಸದ್ಯ ಮಾಡುತ್ತಿದ್ದೇವೆ. ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಮುದಾಯ, ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.