ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯ ಅಂಗವಾಗಿ, ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆಯಲ್ಲಿ ಕನ್ನಡದ ಮೊಟ್ಟ ಮೊದಲ ಹಲ್ಮಿಡಿ ಶಾಸನ ಹಾಗೂ ಕರ್ನಾಟಕದ ಪ್ರಾಚೀನ ದೇವಾಲಯಗಳ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನವು ಮೇ ೨೪ರವರೆಗೆ ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ.
ಬೆಂಗಳೂರು (ಮೇ.19): ನಗರದ ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಚಿತ್ರಶಾಲೆಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯದ ದಿನಾಚರಣೆ ಅಂಗವಾಗಿ ಕನ್ನಡದ ಮೊಟ್ಟ ಮೊದಲ ಹಲ್ಮಿಡಿ ಶಾಸನ ಹಾಗೂ ಕರ್ನಾಟಕದ ಪ್ರಾಚೀನ ಐತಿಹಾಸಿಕ ದೇವಾಲಯಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದು, ಸೋಮವಾರ ಚಾಲನೆ ನೀಡಲಾಯಿತು.

ಪ್ರದರ್ಶನ ಉದ್ಘಾಟಿಸಿದ ಮಾತನಾಡಿದ ಪ್ರೊ.ಮುನಿಯಪ್ಪ, ‘ನಾಡಿನ ಐತಿಹಾಸಿಕ ಮತ್ತು ಪ್ರಾಚೀನ ಪರಂಪರೆಯ ಹಿನ್ನೆಲೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತ ಕಾರ್ಯಗಳು ನಡೆಯಬೇಕು. ಇಂತಹ ಪ್ರದರ್ಶನಗಳಿಗೆ ವಿದ್ಯಾರ್ಥಿ ವೃಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಾಸನಗಳ ಬಗ್ಗೆ ತಿಳಿಯಬೇಕು’ ಎಂದು ತಿಳಿಸಿದರು.
ಇಲಾಖೆಯ ವಸ್ತು ಸಂಗ್ರಹಾಲಯಗಳ ನಿರ್ದೇಶಕಿ ಡಾ.ಸ್ಮಿತಾ ರೆಡ್ಡಿ ಮಾತನಾಡಿ, ಪ್ರಸ್ತುತ ಸರ್ಕಾರಿ ವಸ್ತು ಸಂಗ್ರಹಾಲಯವು ನವೀಕರಣದ ಹಂತದಲ್ಲಿರುವುದರಿಂದ, ಹಲ್ಮಿಡಿ ಶಾಸನದ ವೀಕ್ಷಣೆಯು ಸಾರ್ವಜನಿಕರಿಗೆ ಲಭ್ಯವಿರಲಿಲ್ಲ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ಸಂಶೋಧಕರು, ಇತಿಹಾಸದ ಕುರಿತು ಆಸಕ್ತಿಯಿರುವ ಹಲ್ಮಿಡಿ ಶಾಸನವನ್ನು ವೀಕ್ಷಿಸುವ ಬಗ್ಗೆ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಹಾಗಾಗಿ ವಸ್ತು ಸಂಗ್ರಹಾಲಯದ ದಿನಾಚರಣೆಯ ನಿಮಿತ್ತ ಹಲ್ಮಿಡಿ ಶಾಸನವನ್ನು ಹಾಗೂ ಪ್ರಾಚೀನ ದೇವಾಲಯಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಯಿತು ಎಂದರು.
‘ಕನ್ನಡ ಶಾಸನಗಳಲ್ಲಿ ಸಾಂಸ್ಕೃತಿಕ ಐಕ್ಯತೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಶಾಸನ ತಜ್ಞರಾದ ಡಾ.ಕೆ.ಆರ್.ಗಣೇಶ, ಕರ್ನಾಟಕದ ಅರಸರು ತಾವು ಆಳ್ವಿಕೆ ನಡೆಸಿದ ಪ್ರದೇಶಗಳಲ್ಲೆಲ್ಲಾ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಾಮರಸ್ಯವನ್ನು ಕಾಪಾಡಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದರು. ಕರ್ನಾಟಕದ ಬಹುತೇಕ ರಾಜರು ಸಾಂಸ್ಕೃತಿಕ ರಾಯಭಾರಿಗಳಾಗಿ ಸಂಘರ್ಷಗಳನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದ್ದರು’ ಎಂದು ಹಲವಾರು ಶಾಸನಗಳನ್ನು ಉದಾಹರಿಸಿ ಪ್ರಾತ್ಯಕ್ಷಿಕೆಯ ಮೂಲಕ ಉಪನ್ಯಾಸ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಛಾಯಾಚಿತ್ರ ಕಲಾವಿದ ಟಿ. ಕೆಂಪಣ್ಣ ಅವರು ತಾವು ಸೆರೆಹಿಡಿದಿದ್ದ ಕರ್ನಾಟಕದ ಪ್ರಾಚೀನ ದೇವಾಲಯಗಳ ಛಾಯಾಚಿತ್ರಗಳ ಬಗ್ಗೆ ಮಾತನಾಡಿ, ಕರ್ನಾಟಕದ ದೇವಾಲಯಗಳು ಶ್ರೀಮಂತ ವಾಸ್ತು ಶೈಲಿಯನ್ನು ಹೊಂದಿವೆ. ತಾವು ಈ ಕ್ಷೇತ್ರಕ್ಕೆ ಬರಲು ಕರ್ನಾಟಕದ ವಿಭಿನ್ನ, ವೈವಿಧ್ಯಮಯ ದೇವಾಲಯಗಳೇ ಮುಖ್ಯವಾದ ಕಾರಣ’ ಎಂದು ತಿಳಿಸಿದರು.
ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಹಲ್ಮಿಡಿ ಶಾಸನದ ಪ್ರದರ್ಶನವು ಮೇ ೨೪ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಎಲ್ಲರಿಗೂ ಉಚಿತ ಪ್ರವೇಶ ನೀಡಲಾಗಿದೆ.


