ತೀರ್ಥಹಳ್ಳಿ ತಾಲೂಕಿನ ಹಲ್ಲುಸಾಲೆ ಗ್ರಾಮದಲ್ಲಿ ಕ್ರಿ.ಶ 1250 ಮತ್ತು 1251ಕ್ಕೆ ಸೇರಿದ ಎರಡು ಹೊಯ್ಸಳರ ಕಾಲದ ವೀರಗಲ್ಲುಗಳು ಪತ್ತೆಯಾಗಿವೆ. ಈ ಶಾಸನಗಳು ಸಿರಿಯಮ್ಮ ಹೆಗ್ಗಡೆ ಮತ್ತು ಅಣ್ಣಮ್ಮ ಹೆಗ್ಗಡೆಯ ನಡುವೆ ನಡೆದ ಕುದುರೆ ಕಾಳಗ, ವೀರರ ಮರಣ ಹಾಗೂ ಭೂದಾನದ ವಿವರಗಳನ್ನು ಒಳಗೊಂಡಿವೆ.
ತೀರ್ಥಹಳ್ಳಿ: ತಾಲೂಕು ಕೋಣಂದೂರು ಸಮೀಪದ ಹಲ್ಲುಸಾಲೆ ಗ್ರಾಮದಲ್ಲಿ ಪತ್ತೆಯಾದ ಎರಡು ವೀರಗಲ್ಲುಗಳಲ್ಲಿ ಮೊದಲನೇ ವೀರಗಲ್ಲು ಶಕ ವರ್ಷ ಸಾವಿರ 1172 ಎಂದಿದ್ದು ಕ್ರಿ.ಶ 1250ರ ಇಸವಿಗೆ ಸರಿಹೊಂದುತ್ತದೆ. 2ನೇ ವೀರಗಲ್ಲು ಕ್ರಿ.ಶ 1251ರ ಇಸವಿಗೆ ಸರಿಹೊಂದುವುದು. ಹೊಯ್ಸಳರ ಕಾಲದ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಮೊದಲನೇ ವೀರಗಲ್ಲು ಶಾಸನ 6 ಅಡಿ, 5 ಅಂತಸ್ತು 23 ಸಾಲುಗಳನ್ನು ಹೊಂದಿದೆ. 2ನೇ ವೀರಗಲ್ಲು 6 ಅಡಿ ಎತ್ತರ, 5 ಅಂತಸ್ತು, 24 ಸಾಲುಗಳಲ್ಲಿ ಬರೆಯಲ್ಪಟ್ಟಿದೆ.

ಕುದುರೆ ಕಾಳಗದ ವರ್ಣನೆ ಅತ್ಯಂತ ಅಮೋಘ
ಈ ವೀರಗಲ್ಲುಗಳು ಅತ್ಯಂತ ಸುಂದರವಾಗಿ ಕೆತ್ತಲ್ಪಟ್ಟಿದ್ದು ಯುದ್ಧದ ವರ್ಣನೆಯೂ ಅತ್ಯಂತ ಅಮೋಘವಾಗಿದೆ. ಒಂದನೇ ವೀರಗಲ್ಲಿನಲ್ಲಿ ಸಿರಿಯಮ್ಮ ಹೆಗ್ಗಡೆ ಮತ್ತು ಆತನ ಮಾವ ಹೊಯ್ಸಯ್ಯನು ಯುದ್ಧ ರಂಗದಲ್ಲಿ ಹೋರಾಟ ಮಾಡಿದ ವಿವರಣೆ ಇದೆ. ಸಗಡವಳ್ಳಿಯ ನಾಡಾಧಿಪತಿಯಾದ ಮಾಂಡಳಿಕ ಸಿರಿಯಮ್ಮ ಹೆಗ್ಗಡೆ ಹಾಗೂ ಹೆದ್ದೂರು ನಾಡಾಧಿಪತಿ ಅಣ್ಣಮ್ಮ ಹೆಗ್ಗಡೆಯ ನಡುವೆ ನಡೆದ ಕುದುರೆ ಕಾಳಗದಲ್ಲಿ ಸಿರಿಯಮ್ಮ ಹೆಗ್ಗಡೆ ಮತ್ತು ಆತನ ಮಾವ ಹೊಯ್ಸಯ್ಯ ವೀರಾವೇಶದಿಂದ ಹೋರಾಡುತ್ತಿರುವಾಗ ಮರಣ ಹೊಂದಿದವರ ಬಗ್ಗೆ ವಿವರಣೆ ಇದೆ. ಕೊನೆಗೆ ಈ ಶಾಸನದಲ್ಲಿ ಹೊಯ್ಸಯ್ಯನ ಕಿರಿಯ ಸಹೋದರ ಜಕ್ಕಯ್ಯನಿಗೆ ಒಂದು ಸಲಿಗೆ ಭೂಮಿ ದಾನ ಮಾಡಿದುದರ ಬಗ್ಗೆ ಉಲ್ಲೇಖವಿದೆ.
5 ಹಂತಗಳಲ್ಲೂ ಯುದ್ಧದ ವರ್ಣನೆ ಹಾಗೂ ದೃಶ್ಯ
ಈ ಶಾಸನ ಮೊದಲಿಗೆ “ನಮಃಸ್ತುಂಗ ಶಿರಶ್ಚುಂಬಿ.....” ಎಂಬ ಶೈವ ಶ್ಲೋಕದಿಂದ ಆರಂಭವಾಗುವುದು. ನಂತರದ ಸಾಲಿನಲ್ಲಿ ಸಿರಿಯಮ್ಮ ಹೆಗ್ಗಡೆ ಬಿರುದಾವಳಿ ಹಾಗೂ ದಿನಾಂಕದ ಉಲ್ಲೇಖವಿದೆ. 5 ಹಂತಗಳಲ್ಲೂ ಯುದ್ಧದ ವರ್ಣನೆ ಹಾಗೂ ದೃಶ್ಯಗಳಿವೆ. ಶತ್ರು ಸೈನ್ಯದ ಬಾಣಗಳಿಂದ ತಿವಿದಿದ್ದ ಹಾಗೂ ಕುದುರೆಗಳ ಉದ್ಧಟತನದಿಂದ ಸಿರಿಯಮ್ಮ ಹೆಗ್ಗಡೆ ರಣರಂಗದಲ್ಲಿ ಹತ್ಯೆಯಾಗಿ ಆತನ ಮಾವ ಹೊಯ್ಸಯ್ಯನು ಆತನ ಹೆಣ ಹೊತ್ತೊಯ್ಯುವಾಗ ಶತ್ರುಗಳ ಸೈನಿಕರು ಹೊಯ್ಸಯ್ಯನನ್ನು ಹತ್ಯೆ ಮಾಡುವರು. ಇಡೀ ಯುದ್ದರಂಗವೇ ಹೆಣಮಯದಿಂದ ಕೂಡಿರುವುದು. ಯುದ್ದರಂಗದಲ್ಲಿ ಪ್ರಾಣಬಿಟ್ಟ ಸಿರಿಯಮ್ಮ ಹೆಗ್ಗಡೆಯನ್ನು ದೇವ ಲೋಕದ ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುವರು. ಈ ವೀರಗಲ್ಲನ್ನು ನಾಶ ಮಾಡದಂತೆ ಕೊನೆಯಲ್ಲಿ ನೀಡಲಾಗಿದೆ.
ಎರಡನೇ ವೀರಗಲ್ಲಿನಲ್ಲಿ ಮಾಂಡಳಿಕನಾದ ಸಿರಿಯಮ್ಮ ಹೆಗ್ಗಡೆ ಬಿರುದಾವಳಿಗಳು ಶಾಸನವನ್ನು ಅಚ್ಚು ಹಾಕಿಸಿದ ದಿನಾಂಕ ನಂತರದ ಸಾಲುಗಳಲ್ಲಿ ಯುದ್ಧದ ವರ್ಣನೆ ಅತ್ಯಂತ ಸೊಗಸಾಗಿದೆ. ಅಂತ್ಯದಲ್ಲಿ ಶಾಪಾಶಯವನ್ನು ಉಲ್ಲೇಖಿಸಲಾಗಿದೆ. ಈ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕೆಂದು ಶೃಂಗೇರಿ ಸಂಸ್ಕೃತ ವಿಶ್ವವಿದ್ಯಾನಿಲಯದ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಡಾ. ಎಂ. ಎ. ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ.


