ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿದ್ದಾರೆ. ಕಳೆದ ಐದು ವರ್ಷಗಳಿಂದ ಯಾವುದೇ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ ಈ ವಲಸಿಗರನ್ನು ಬನ್ನೇರುಘಟ್ಟ ಪೊಲೀಸರಿಗೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಬೆಂಗಳೂರು (ಆನೇಕಲ್): ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿ ಮಗ್ಗಲಲ್ಲೇ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿರುವುದು ಪತ್ತೆಯಾಗಿದೆ. ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸತತ ಮೂರು ದಿನಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಈ ಅಕ್ರಮ ವಾಸಿಗಳು ಸಿಕ್ಕಿಬಿದ್ದಿದ್ದಾರೆ.
ದಾಖಲೆಗಳಿಲ್ಲದೆ 5 ವರ್ಷಗಳಿಂದ ವಾಸ್ತವ್ಯ!
ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ಪತ್ತೆಹಚ್ಚಿದ ಕಾರ್ಯಕರ್ತರು ಅವರ ದಾಖಲೆಗಳನ್ನು ಪರಿಶೀಲಿಸಿದಾಗ, ಅವರ ಬಳಿ ಭಾರತಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಗುರುತಿನ ಚೀಟಿಗಳು ಪತ್ತೆಯಾಗಿಲ್ಲ. ವಿಚಾರಣೆ ನಡೆಸಿದಾಗ ತಾವು ಬಾಂಗ್ಲಾದೇಶಿಗರು ಎಂದು ವಲಸಿಗರು ಒಪ್ಪಿಕೊಂಡಿದ್ದಾರೆ. ಇವರು ಕಳೆದ ಐದು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು ಎಂಬ ಭಯಾನಕ ಮಾಹಿತಿ ಹೊರಬಿದ್ದಿದೆ.

ಬಾಂಗ್ಲಾದಿಂದ ಬಂಗಾಳ ಮೂಲಕ ಎಂಟ್ರಿ!
ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮೂಲಕ ಭಾರತದ ಗಡಿ ಪ್ರವೇಶಿಸಿ, ನಂತರ ಬೆಂಗಳೂರಿಗೆ ಬಂದಿರುವುದಾಗಿ ವಲಸಿಗರು ತಪ್ಪೊಪ್ಪಿಕೊಂಡಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಕಗ್ಗೊಲೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಹಿಂದೂ ಪರ ಸಂಘಟನೆಗಳು ಈ ಕಾರ್ಯಾಚರಣೆ ಕೈಗೊಂಡಿವೆ. ದಾಳಿಯ ವೇಳೆ ಸಂಘಟನಾಕಾರರನ್ನು ಕಂಡು ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ.

'ದೇಶ ಬಿಟ್ಟು ತೊಲಗಿ: ಪುನೀತ್ ಕೆರೆಹಳ್ಳಿ ಎಚ್ಚರಿಕೆ
ಸ್ಥಳಕ್ಕೆ ಭೇಟಿ ನೀಡಿದ ಪುನೀತ್ ಕೆರೆಹಳ್ಳಿ ಅಕ್ರಮ ವಲಸಿಗರನ್ನು ತೀವ್ರವಾಗಿ ವಿಚಾರಣೆ ನಡೆಸಿದರು. ಯಾವುದೇ ದಾಖಲೆಗಳಿಲ್ಲದೆ ನಮ್ಮ ದೇಶದಲ್ಲಿ ನೆಲೆಸಿರುವುದು ಅಪರಾಧ, ತಕ್ಷಣವೇ ದೇಶ ಬಿಟ್ಟು ಹೋಗಿ ಎಂದು ವಲಸಿಗರಿಗೆ ಖಡಕ್ ಎಚ್ಚರಿಕೆ ನೀಡಿದರು. ಬೆಂಗಳೂರಿನ ಸುತ್ತಮುತ್ತ ಇನ್ನೂ ನೂರಾರು ಬಾಂಗ್ಲಾದೇಶಿಗರು ಅಕ್ರಮವಾಗಿ ವಾಸವಿರುವ ಬಗ್ಗೆ ಸೆರೆಸಿಕ್ಕ ವಲಸಿಗರು ಮಾಹಿತಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

ಪೊಲೀಸರ ಸುಪರ್ದಿಗೆ ಅಕ್ರಮ ವಲಸಿಗರು
ಕಾರ್ಯಾಚರಣೆ ನಡೆಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಪತ್ತೆಯಾದ ಅಕ್ರಮ ವಲಸಿಗರನ್ನು ಬನ್ನೇರುಘಟ್ಟ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದು, ವಲಸಿಗರ ಹಿನ್ನೆಲೆ ಮತ್ತು ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿದವರು ಯಾರು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.


