17 ವರ್ಷಗಳಿಂದ ವಿಧಾನಸೌಧ, ವಿಕಾಸಸೌಧದ ಆಸ್ತಿ ಶುಲ್ಕ ಬಾಕಿ!
ಆಸ್ತಿ ತೆರಿಗೆ ವಿನಾಯಿತಿ ಪಡೆದಿರುವ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧ ಕಟ್ಟಡದ ಕನಿಷ್ಠ ಮೊತ್ತದ ಸೇವಾ ಶುಲ್ಕವನ್ನೂ ಪಾವತಿಸದೆ 17 ವರ್ಷದಿಂದ ರಾಜ್ಯ ಸರ್ಕಾರವು ಬಾಕಿ ಉಳಿಸಿಕೊಂಡಿದ್ದು, ‘ಒನ್ ಟೈಮ್ ಸೆಟಲ್ಮೆಂಟ್’ (OTS) ಯೋಜನೆಯಡಿಯಾದರೂ ಪಾವತಿಸುವಂತೆ ಬಿಬಿಎಂಪಿ(BBMP)ಯು ಸರ್ಕಾರಕ್ಕೆ ದುಂಬಾಲು ಬೀಳಲು ಸಜ್ಜಾಗಿದೆ.
- ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಜು.18): ಆಸ್ತಿ ತೆರಿಗೆ ವಿನಾಯಿತಿ ಪಡೆದಿರುವ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧ ಕಟ್ಟಡದ ಕನಿಷ್ಠ ಮೊತ್ತದ ಸೇವಾ ಶುಲ್ಕವನ್ನೂ ಪಾವತಿಸದೆ 17 ವರ್ಷದಿಂದ ರಾಜ್ಯ ಸರ್ಕಾರವು ಬಾಕಿ ಉಳಿಸಿಕೊಂಡಿದ್ದು, ‘ಒನ್ ಟೈಮ್ ಸೆಟಲ್ಮೆಂಟ್’ (OTS) ಯೋಜನೆಯಡಿಯಾದರೂ ಪಾವತಿಸುವಂತೆ ಬಿಬಿಎಂಪಿ(BBMP)ಯು ಸರ್ಕಾರಕ್ಕೆ ದುಂಬಾಲು ಬೀಳಲು ಸಜ್ಜಾಗಿದೆ.
ವಿಧಾನಸೌಧ ಕಟ್ಟಡ(Vidhanasoudha)ದ 5.35 ಕೋಟಿ ರು. ಹಾಗೂ ವಿಕಾಸಸೌಧ(Vikasasoudha) ಕಟ್ಟಡದ 2.14 ಕೋಟಿ ರು. ಸೇರಿದಂತೆ 7 ಕೋಟಿ ರು.ಗೂ ಅಧಿಕ ಮೊತ್ತದ ಸೇವಾ ಶುಲ್ಕ ಬಾಕಿ ಇದೆ.
ಪಾರ್ಕಿಂಗ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಬಿಬಿಎಂಪಿ, ಸಾರಿಗೆ ಇಲಾಖೆ ಜೊತೆ ಚರ್ಚೆ: ಪರಮೇಶ್ವರ್
ಬಿಬಿಎಂಪಿ ರಚನೆಯಾದ 2008ರಿಂದ ಎರಡೂ ಕಟ್ಟಡಗಳಿಗೆ ಆಸ್ತಿ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಆಸ್ತಿ ತೆರಿಗೆಯ ಶೇ.25 ರಷ್ಟು ಮೊತ್ತವನ್ನು ಮಾತ್ರ ಸೇವಾ ಶುಲ್ಕ ರೂಪದಲ್ಲಿ ಪಾವತಿಸುವಂತೆ ಈಗಾಗಲೇ ಹಲವು ಬಾರಿ ಬಿಬಿಎಂಪಿ ಕಂದಾಯ ವಿಭಾಗದಿಂದ ನೋಟಿಸ್ (ಬೇಡಿಕೆ ಪತ್ರ) ನೀಡಿದರೂ ಪಾವತಿಸಿಲ್ಲ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶೇ.50ರಷ್ಟು ದಂಡ ಹಾಗೂ ಬಡ್ಡಿ ಸಂಪೂರ್ಣ ಮನ್ನಾದ ‘ಒನ್ ಟೈಮ್ ಸೆಟಲ್ಮೆಂಟ್’ ಯೋಜನೆಯ ಆಫರ್ ನೀಡಲಾಗಿದೆ. ಇದೇ ಜು.31ಕ್ಕೆ ಯೋಜನೆಯು ಮುಕ್ತಾಯಗೊಳ್ಳಲಿದೆ. ಜು.31ರ ನಂತರ ಪಾವತಿಸಿದರೆ ಬಡ್ಡಿ ಮತ್ತು ದಂಡ ಮೊತ್ತ ಒಳಗೊಂಡಂತೆ ಪಾವತಿ ಮಾಡಬೇಕಾಗಲಿದೆ. ಈ ಬಗ್ಗೆ ವಿಕಾಸಸೌಧ ಮತ್ತು ವಿಧಾನಸೌಧ ಕಟ್ಟಡಗಳ ನಿರ್ಹವಣೆ ಜವಾಬ್ದಾರಿ ಹೊಂದಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಮನದಟ್ಟು ಮಾಡಿ ಬೇಡಿಕೆ ಪತ್ರ ಸಲ್ಲಿಸುವುದಕ್ಕೆ ಬಿಬಿಎಂಪಿ ಕಂದಾಯ ವಿಭಾಗ ಸಿದ್ಧತೆ ಮಾಡಿಕೊಂಡಿದೆ.
ಸೇವಾ ಶುಲ್ಕ ಪಾವತಿ ನಿರಾಕರಣೆ:
ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳಿಗೆ ಈಗಾಗಲೇ ಆಸ್ತಿ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಿದರೂ ಆಸ್ತಿ ತೆರಿಗೆಯೊಂದಿಗೆ ಪಾವತಿಸುವ ಸೇವಾ ಶುಲ್ಕ ಪಾವತಿಸುವಂತೆ ಮಾತ್ರ ಬಿಬಿಎಂಪಿ ಕಂದಾಯ ವಿಭಾಗ ಬೇಡಿಕೆ ಸಲ್ಲಿಸಿದೆ. ಅದನ್ನು ಪಾವತಿ ಮಾಡುವುದಕ್ಕೆ ನಿರಾಕರಣೆ ಮಾಡುತ್ತಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸೇವಾ ಶುಲ್ಕ ಮನ್ನಾ ಮಾಡುವಂತೆ ಬಿಬಿಎಂಪಿಗೆ ಪತ್ರ ಬರೆದಿದೆ.
ಸೇವಾ ಶುಲ್ಕ ಮನ್ನಾ ಸಾಧ್ಯವಿಲ್ಲ:
ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಕಂದಾಯ ವಿಭಾಗವೂ ಸರ್ಕಾರಿ ಕಟ್ಟಡ ಆಗಿರುವುದರಿಂದ ಈಗಾಗಲೇ ಆಸ್ತಿ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಆದರೆ, ವಿಧಾನಸೌಧ ಮತ್ತು ವಿಕಾಸಸೌಧದ ಹೊರಾಂಗಣದ ರಸ್ತೆ ನಿರ್ವಹಣೆ, ಕಸ ವಿಲೇವಾರಿ ಸೇರಿದಂತೆ ಮೊದಲಾದ ಸೇವೆಗಳನ್ನು ಬಿಬಿಎಂಪಿ ನಿರ್ವಹಿಸುತ್ತಿದೆ. ಹಾಗಾಗಿ, ಸೇವಾ ಶುಲ್ಕ ಮನ್ನಾ ಮಾಡುವುದಕ್ಕೆ ಸಾಧ್ಯವಿಲ್ಲ. ಸೇವಾ ಶುಲ್ಕವನ್ನು ಪಾವತಿ ಮಾಡಬೇಕು ಎಂದು ಮರು ಪತ್ರ ಬರೆಯುವುದಕ್ಕೆ ತೀರ್ಮಾನಿಸಿದೆ.
‘ಬ್ರ್ಯಾಂಡ್ ಬೆಂಗಳೂರು’ 27ಕ್ಕೆ ಸರ್ವ ಶಾಸಕರ ಸಭೆ: ಡಿ.ಕೆ.ಶಿವಕುಮಾರ್ ಭರವಸೆ
ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳಿಗೆ ಈಗಾಗಲೇ ಆಸ್ತಿ ತೆರಿಗೆ ಮನ್ನಾ ಮಾಡಲಾಗಿದೆ. ಆಸ್ತಿ ತೆರಿಗೆಯೊಂದಿಗೆ ಪಾವತಿಸುವ ಸೇವಾ ಶುಲ್ಕ ಮನ್ನಾಕ್ಕೂ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಕಾರ್ಯದರ್ಶಿಗಳು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ. ರಸ್ತೆ, ಕಸ ಸೇರಿದಂತೆ ಮೊದಲಾದ ಸೇವೆಗಳನ್ನು ಬಿಬಿಎಂಪಿಯು ನಿರಂತರವಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮನ್ನಾಕ್ಕೆ ಅವಕಾಶವಿಲ್ಲ. ಜತೆಗೆ, ಓಟಿಎಸ್ ಯೋಜನೆಯಡಿ ಪಾವತಿಸಿದರೆ ಬಡ್ಡಿ ಮತ್ತು ದಂಡ ಇರುವುದಿಲ್ಲ ಎಂಬುದನ್ನು ಪತ್ರ ಮೂಲಕ ತಿಳಿಸಲಾಗುವುದು.
- ಮುನೀಶ್ ಮೌದ್ಗಿಲ್, ವಿಶೇಷ ಆಯುಕ್ತರು, ಬಿಬಿಎಂಪಿ ಕಂದಾಯ ವಿಭಾಗ