ಪಾರ್ಕಿಂಗ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಬಿಬಿಎಂಪಿ, ಸಾರಿಗೆ ಇಲಾಖೆ ಜೊತೆ ಚರ್ಚೆ: ಪರಮೇಶ್ವರ್
ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿನ ವಾಹನ ಪಾರ್ಕಿಂಗ್ ಅವ್ಯವಸ್ಥೆಯನ್ನು ತಡೆಯಲು ಸ್ಪಷ್ಟ ಪಾರ್ಕಿಂಗ್ ನೀತಿ ಜಾರಿಗೆ ತರುವಂತೆ ಬಿಜೆಪಿ ಸದಸ್ಯರು ಸರ್ಕಾರವನ್ನು ಆಗ್ರಹಿಸಿದರು.
ವಿಧಾನಸಭೆ (ಜು.17): ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿನ ವಾಹನ ಪಾರ್ಕಿಂಗ್ ಅವ್ಯವಸ್ಥೆಯನ್ನು ತಡೆಯಲು ಸ್ಪಷ್ಟ ಪಾರ್ಕಿಂಗ್ ನೀತಿ ಜಾರಿಗೆ ತರುವಂತೆ ಬಿಜೆಪಿ ಸದಸ್ಯರು ಸರ್ಕಾರವನ್ನು ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ। ಜಿ.ಪರಮೇಶ್ವರ್, ಬೆಂಗಳೂರಿನಲ್ಲಿ 1194 ನೋ ಪಾರ್ಕಿಂಗ್ ರಸ್ತೆಗಳಿದ್ದು, ನಗರದಲ್ಲಿನ ಪಾರ್ಕಿಂಗ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮತ್ತು ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಶ್ನೋತ್ತರ ವೇಳೆ ಬಿಜೆಪಿಯ ಎಸ್.ಆರ್.ವಿಶ್ವನಾಥ್, ನಗರದಲ್ಲಿ ನೋ ಪಾರ್ಕಿಂಗ್‌ನಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಹಾಗಾಗಿ ಇದನ್ನು ತಡೆಯಲು ಸ್ಪಷ್ಟ ಪಾರ್ಕಿಂಗ್ ನೀತಿ ಜಾರಿಗೆ ತನ್ನಿ. ಬೇಕಿದ್ದರೆ ನನ್ನ ಕ್ಷೇತ್ರದಲ್ಲೇ ಪ್ರಾಯೋಗಿಕವಾಗಿ ಜಾರಿಗೊಳಿಸಿ ಎಂದು ಮನವಿ ಮಾಡಿದರು. ಇದಕ್ಕೆ ಎಸ್.ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿಯ ನಗರದ ಇನ್ನಿತರೆ ಸದಸ್ಯರು ದನಿಗೂಡಿಸಿ, ನಗರದಲ್ಲಿ ಮನೆ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡುವಾಗ ಪಾರ್ಕಿಂಗ್ ಸ್ಥಳಾವಕಾಶ ಇದ್ದರೆ ಮಾತ್ರ ಮಂಜೂರಾತಿ ನೀಡುವ ಕಾನೂನು ತರಬೇಕು. ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸುವವರಿಗೆ ಈ ಹಿಂದೆ ಇದ್ದ ಟೋಯಿಂಗ್ ವ್ಯವಸ್ಥೆ ಮರು ಜಾರಿ ಮಾಡಬೇಕು. ಹೆಚ್ಚಿನ ದಂಡ ವಿಧಿಸಬೇಕೆಂದು ಆಗ್ರಹಿಸಿದರು.
ಸದಸ್ಯರ ಮಾತಿಗೆ ಸ್ಪಂದಿಸಿದ ಸಚಿವ ಪರಮೇಶ್ವರ್, ಸದಸ್ಯರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸಂಚಾರ ದಟ್ಟಣೆ ನಿವಾರಣೆ, ನೋ ಪಾರ್ಕಿಂಗ್‌ನಲ್ಲಿ ವಾಹನಗಳನ್ನು ನಿಲ್ಲಿಸುವಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಎಸಿಪಿ, ಡಿಸಿಪಿ ಮಟ್ಟದ ಅಧಿಕಾರಿಗಳೇ ಪ್ರತಿದಿನ ಕನಿಷ್ಠ 2 ತಾಸು ರಸ್ತೆಗಿಳಿದು ಕೆಲಸ ಮಾಡಬೇಕೆಂದು ಸೂಚಿಸಿದ್ದೇನೆ. ಸದಸ್ಯರು ಆಗ್ರಹಿಸುತ್ತಿರುವಂತೆ ಕಠಿಣ ಪಾರ್ಕಿಂಗ್ ನೀತಿ ಜಾರಿಗೆ ತರಲು ಬಿಬಿಎಂಪಿ, ಸಾರಿಗೆ ಇಲಾಖೆ ಜೊತ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ಜೆಡಿಎಸ್ ನಾಯಕರು ಗೋಡಂಬಿ, ದ್ರಾಕ್ಷಿ ತಿನ್ನಲು ಬಂದಿದ್ದರಾ?: ಡಿ.ಕೆ.ಶಿವಕುಮಾರ್
ನೋ ಪಾರ್ಕಿಂಗ್ ನಿಲುಗಡೆ: 5.91 ಕೋಟಿ ದಂಡ ವಸೂಲಿ: ಬೆಂಗಳೂರು ನಗರದಲ್ಲಿ ನೋ ಪಾರ್ಕಿಂಗ್ ರಸ್ತೆಯಲ್ಲಿ ವಾಹನ ನಿಲುಗಡೆ ಪ್ರಕರಣಗಳಿಂದ ಪ್ರಸ್ತುತ ವರ್ಷ ಈಗಾಗಲೇ ಸುಮಾರು 5 ಲಕ್ಷ ಪ್ರಕರಣ ದಾಖಲಿಸಲಾಗಿದ್ದು, ₹5.91 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದರು. ಬೆಂಗಳೂರು ನಗರದಲ್ಲಿ 2022ರಲ್ಲಿ 12.07 ಲಕ್ಷ ಪ್ರಕರಣಗಳಿಂದ ₹20.84 ಕೋಟಿ, 2023ರಲ್ಲಿ 11.30 ಲಕ್ಷ ಪ್ರಕರಣ ದಾಖಲಿಸಿ ₹37.30 ಕೋಟಿ ದಂಡ ವಸೂಲಿ ಮಾಡಲಾಗಿದೆ. 2024ರಲ್ಲಿ ಜೂನ್ 3ರವರೆಗೆ 5.21 ಲಕ್ಷ ಪ್ರಕರಣಗಳನ್ನು ದಾಖಲಿಸಿ ₹5.97 ಕೋಟಿ ದಂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.