ರಾಜ್ಯ ಸರ್ಕಾರ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕಿರುವ ಮೂರು ಸ್ಥಾನಗಳಿಗೆ ಕಡೆ ಕ್ಷಣದಲ್ಲಿ ತೀವ್ರ ಲಾಬಿ ನಡೆದಿದ್ದು, ಅಂತಿಮ ಹಂತದಲ್ಲಿ ಈ ಪಟ್ಟಿಗೆ ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರ ಹೆಸರು ಸೇರ್ಪಡೆಯಾಗಿದೆ.
ಬೆಂಗಳೂರು (ಆ.6) : ರಾಜ್ಯ ಸರ್ಕಾರ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕಿರುವ ಮೂರು ಸ್ಥಾನಗಳಿಗೆ ಕಡೆ ಕ್ಷಣದಲ್ಲಿ ತೀವ್ರ ಲಾಬಿ ನಡೆದಿದ್ದು, ಅಂತಿಮ ಹಂತದಲ್ಲಿ ಈ ಪಟ್ಟಿಗೆ ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರ ಹೆಸರು ಸೇರ್ಪಡೆಯಾಗಿದೆ. ಇದರ ಪರಿಣಾಮವಾಗಿ ಪಟ್ಟಿಯಲ್ಲಿ ಈಗಾಗಲೇ ಸ್ಥಾನ ಪಡೆದಿದ್ದಾರೆ ಎನ್ನಲಾಗಿದ್ದ ನಿವೃತ್ತ ಅಧಿಕಾರಿ ಸುಧಾಮದಾಸ್ ಹಾಗೂ ಹಿರಿಯ ನಾಯಕ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್ ಅವರ ನಡುವೆ ಪೈಪೋಟಿ ಆರಂಭವಾಗಿದೆ.
ಮೂಲಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಪ್ರಾಥಮಿಕ ಚರ್ಚೆಯ ವೇಳೆ ಸರ್ಕಾರವು ನಾಮನಿರ್ದೇಶನ ಮಾಡಬೇಕಿರುವ ಮೂರು ಸ್ಥಾನಗಳಿಗೆ ಎಂ.ಆರ್.ಸೀತಾರಾಂ, ಮನ್ಸೂರ್ ಅಲಿಖಾನ್ ಹಾಗೂ ಸುಧಾಮದಾಸ್ ಅವರ ಹೆಸರು ಅಂತಿಮಗೊಳಿಸಲಾಗಿತ್ತು. ಆದರೆ, ಈ ವಿಚಾರದ ಬಗ್ಗೆ ಹೈಕಮಾಂಡ್‌ನೊಂದಿಗಿನ ಚರ್ಚೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮಾಶ್ರೀ ಹೆಸರು ಸೇರ್ಪಡೆಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ಪರಿಷತ್‌ನಲ್ಲಿ ಪಾಸಾಗದ ಎಪಿಎಂಸಿ ವಿಧೇಯಕ ಸದನ ಸಮಿತಿ ಹೆಗಲಿಗೆ: ಮಸೂದೆಗೆ ಬ್ರೇಕ್
ಪ್ರಸ್ತುತ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾವ ಮಹಿಳೆಗೂ ಅವಕಾಶ ನೀಡಲಾಗಿಲ್ಲ. ಹೀಗಾಗಿ ಮಹಿಳಾ ಕೋಟಾದಡಿಯಲ್ಲಿ ಉಮಾಶ್ರೀಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯಿದೆ ಎಂಬ ವಿಚಾರವನ್ನು ಸಿದ್ದರಾಮಯ್ಯ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಇಡೀ ವಿಧಾನ ಪರಿಷತ್ತಿಗೆ ಕಾಂಗ್ರೆಸ್‌ನಿಂದ ಮಹಿಳೆಯರು ಯಾರೂ ಇಲ್ಲದಿರುವುದು ಸರಿಯಲ್ಲ. ಸೂಕ್ತ ಮಹಿಳೆಯರನ್ನು ಶಿಫಾರಸು ಮಾಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅದುವರೆಗೂ ಪಟ್ಟಿಯಲ್ಲಿ ಗಂಭೀರವಾಗಿ ಪರಿಗಣನೆಯಾಗದ ಉಮಾಶ್ರೀ ಅವರ ಹೆಸರು ದಿಢೀರ್ ಸೇರ್ಪಡೆಯಾಗಿದೆ.
ಇದರ ಪರಿಣಾಮವಾಗಿ ಈಗಾಗಲೇ ಅಂತಿಮಗೊಳಿಸಿದ್ದ ಸೀತಾರಾಂ, ಸುಧಾಮ ದಾಸ್ ಹಾಗೂ ಮನ್ಸೂರ್ ಅಲಿಖಾನ್ ಅವರ ನಡುವೆ ಪೈಪೋಟಿ ನಿರ್ಮಾಣವಾಗಿದೆ. ಈ ಪೈಕಿ ಸೀತಾರಾಂ ಅವರಿಗೆ ವಿಧಾನ ಪರಿಷತ್‌ಗೆ ನಾಮಕರಣ ಮಾಡುವ ಭರವಸೆಯನ್ನು ಚುನಾವಣೆ ವೇಳೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ಹೆಸರು ಅಂತಿಮಗೊಂಡಿದೆ. ಹೀಗಾಗಿ ಸುಧಾಮದಾಸ್ ಹಾಗೂ ಮನ್ಸೂರ್ ಅಲಿಖಾನ್ ನಡುವೆ ಜಿದ್ದಾಜಿದ್ದಿಯಿದೆ. ಕಾಂಗ್ರೆಸ್‌ನ ಮುಸ್ಲಿಂ ನಾಯಕರು ಮನ್ಸೂರ್ ಅಲಿಖಾನ್ ಅವರಿಗೆ ಅವಕಾಶ ನೀಡುವಂತೆ ಹೈಕಮಾಂಡ್ ಹಾಗೂ ರಾಜ್ಯ ನಾಯಕರಿಗೆ ಒತ್ತಡ ಹಾಕಿದ್ದಾರೆ.
ವಿಧಾನ ಪರಿಷತ್ತಿಗೆ ಎಂಎಲ್ಸಿಗಳ ನಾಮನಿರ್ದೇಶನ: ಸರ್ಕಾರಕ್ಕೆ ಶಾಕ್!
ಆದರೆ, ಪರಿಶಿಷ್ಟಪಂಗಡದ (ಎಡಗೈ) ಸುಧಾಮದಾಸ್ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಇದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅಂತಿಮ ಹಂತದಲ್ಲಿ ಸುಧಾಮದಾಸ್ ಈ ಪೈಪೋಟಿಯಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾದಲ್ಲಿ ಎಂ.ಆರ್.ಸೀತಾರಾಂ, ಸುಧಾಮದಾಸ್ ಹಾಗೂ ಉಮಾಶ್ರೀ ಅವರ ಹೆಸರು ಅಂತಿಮಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಸೋಮವಾರ ಅಥವಾ ಮಂಗಳವಾರದ ವೇಳೆಗೆ ಈ ವಿಚಾರ ಅಂತಿಮಗೊಂಡು ರಾಜ್ಯ ಸರ್ಕಾರ ಮೂರು ನಾಮನಿರ್ದೇಶನ ಶಿಫಾರಸು ಪತ್ರವನ್ನು ರಾಜ್ಯಪಾಲರಿಗೆ ರವಾನೆ ಮಾಡಲಿದೆ.
